ಸಿಎಂಗಳ ಜೊತೆ ಪಿಎಂ ವೀಡಿಯೋ ಕಾನ್ಫರೆನ್ಸ್

ನವದೆಹಲಿ, ಆ. 11: ಕೊರೊನಾ ವೈರಸ್ ಸೋಂಕಿತನ ಸಂಪರ್ಕಕ್ಕೆ ಬಂದವರನ್ನು 72 ಗಂಟೆಗಳಲ್ಲಿ ಪರೀಕ್ಷೆಗೊಳಪಡಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದೇಶದಲ್ಲಿರುವ ಕೋವಿಡ್-19 ಸೋಂಕಿನ ಸ್ಥಿತಿಗತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹತ್ತು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸುತ್ತಿದ್ದಾರೆ. ಈ ವೇಳೆ ಎಲ್ಲ ರಾಜ್ಯಗಳ ಪ್ರತಿನಿಧಿಗಳಿಂದ ಮಾಹಿತಿ ಪಡೆದ ಪ್ರಧಾನಿ ಮೋದಿ ಬಳಿಕ ಕೊರೊನಾ ನಿಯಂತ್ರಣ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಜ್ಯಗಳಿಗೆ ತಿಳಿ ಹೇಳಿದರು. ಉತ್ತರ ಪ್ರದೇಶ, ಹರಿಯಾಣ ಮತ್ತು ದೆಹಲಿಯ ಕೆಲವು ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಒಂದು ಹಂತದ ವರೆಗೂ ದೊಡ್ಡ ಸಮಸ್ಯೆಯಾಗಿತ್ತು. ಬಳಿಕ ನಾವು ಸಭೆ ನಡೆಸಿ ಅಮಿತ್ ಶಾ ನೇತೃತ್ವದಲ್ಲಿ ಸಮಿತಿಗಳನ್ನು ರಚನೆ ಮಾಡಿದ್ದೆವು. ಇದೀಗ ನಾವು ಅಂದುಕೊಂಡಿದ್ದ ಗುರಿಗಳನ್ನು ಈ ರಾಜ್ಯಗಳಲ್ಲಿ ತಲುಪಿದ್ದೇವೆ. ಇಂತಹುದೇ ಫಲಿತಾಂಶವನ್ನು ನಾವು ಇತರ ರಾಜ್ಯಗಳಿಂದಲೂ ಬಯಸುತ್ತೇವೆ ಎಂದು ಹೇಳಿದ್ದಾರೆ.

ಮರಣ ಪ್ರಮಾಣ ಶೇ. 2 ಕ್ಕಿಂತಲೂ ಕಡಿಮೆ

ನವದೆಹಲಿ, ಆ. 11: ಕೋವಿಡ್-19 ಸಾಂಕ್ರಾಮಿಕ ರೋಗದ ನಿಯಂತ್ರಣ ಕಾರ್ಯತಂತ್ರ ಯಶಸ್ವಿ ಅನುಷ್ಠಾನ, ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸಾ ನಿರ್ವಹಣೆಯೊಂದಿಗೆ ಪರಿಣಾಮಕಾರಿ ಪರೀಕ್ಷೆಯಿಂದಾಗಿ ದೇಶದಲ್ಲಿ ಚೇತರಿಕೆ ಪ್ರಮಾಣ ಶೇ. 70ರ ಸನ್ನಿಹದಲ್ಲಿದ್ದು, ಮರಣ ಪ್ರಮಾಣ ಶೇ. 2ಕ್ಕಿಂತಲೂ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಹೆಚ್ಚಿನ ಸಂಖ್ಯೆಯ ರೋಗಿಗಳು ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 15 ಲಕ್ಷದ 83 ಸಾವಿರದ 489 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ. 69.80ಕ್ಕೆ ಏರಿಕೆಯಾಗಿದೆ. ದೇಶದಲ್ಲಿನ ಒಟ್ಟು 6,39,929 ಸಕ್ರಿಯ ಪ್ರಕರಣಗಳಲ್ಲಿ ಶೇ. 28.21 ರಷ್ಟು ಪ್ರಕರಣಗಳು ಮಾತ್ರ ಪಾಸಿಟಿವ್ ಕೇಸ್‍ಗಳಾಗಿವೆ. ಇವರೆಲ್ಲರೂ ವೈದ್ಯಕೀಯ ನಿಗಾವಣೆಯಲ್ಲಿರುವುದಾಗಿ ಸಚಿವಾಲಯ ತಿಳಿಸಿದೆ.

ಪುಟಿನ್ ಪುತ್ರಿಗೆ ಲಸಿಕೆ ಪ್ರಯೋಗ

ಮಾಸ್ಕೋ, ಆ. 11: ಜಗತ್ತಿನ ಮೊಟ್ಟ ಮೊದಲ ಕೊರೊನಾ ಲಸಿಕೆ ರಷ್ಯಾದಿಂದ ನೋಂದಣಿಯಾಗಿದ್ದು, ಸ್ವತಃ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪುತ್ರಿಗೆ ಲಸಿಕೆ ಪ್ರಯೋಗ ಮಾಡಲಾಗಿದೆ. ಈ ಬಗ್ಗೆ ಸ್ವತಃ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಾಹಿತಿ ನೀಡಿದ್ದು, ರಷ್ಯಾದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೋವಿಡ್ ಲಸಿಕೆ ಜನರ ಬಳಕೆಗೆ ಬಿಡುಗಡೆಯಾಗಲಿದೆ. ರಷ್ಯಾದ ಆರೋಗ್ಯ ಸಚಿವಾಲಯ ಅಗತ್ಯವಿರುವ ಎಲ್ಲ ಅನುಮೋದನೆಗಳನ್ನು ನೀಡಿದ್ದು, ಆ ಮೂಲಕ ಜಗತ್ತಿನ ಮೊದಲ ಕೋವಿಡ್-19 ಲಸಿಕೆ ಮಂಗಳವಾರ ಅಧಿಕೃತವಾಗಿ ನೋಂದಣಿಯಾಗಿದೆ ಎಂದು ಹೇಳಿದ್ದಾರೆ. ದೇಶದಲ್ಲಿ ಅಭಿವೃದ್ಧಿಪಡಿಸಲಾಗಿರುವ ಕೊರೊನಾ ವೈರಸ್ ಲಸಿಕೆಯನ್ನು ಬಳಕೆಗೆ ನೋಂದಾಯಿಸಲಾಗಿದೆ ಹಾಗೂ ಒಬ್ಬಳು ಮಗಳಿಗೆ ಆಗಲೇ ಲಸಿಕೆ ನೀಡಲಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ಹೋಂ ಐಸೊಲೇಷನ್‍ಗೆ ಹೊಸ ನಿಯಮ

ಬೆಂಗಳೂರು, ಆ. 11: ಹೋಂ ಐಸೊಲೇಷನ್‍ನಲ್ಲಿರುವವರಿಗೆ ಕರ್ನಾಟಕ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಪರಿಷ್ಕೃತ ಮಾರ್ಗಸೂಚಿ ಪ್ರಕಾರ, ಕೊರೊನಾ ಲಕ್ಷಣಗಳಿಲ್ಲದವರು ಅಥವಾ ಕೊರೊನಾ ಸೋಂಕಿನ ಸಣ್ಣಪುಟ್ಟ ಲಕ್ಷಣಗಳನ್ನು ಮಾತ್ರ ಹೊಂದಿರುವವರು ತಮ್ಮ ಮನೆಗಳಲ್ಲಿಯೇ ಇರಬಹುದಾಗಿದೆ. ಜಿಲ್ಲಾ ಆರೋಗ್ಯ ಅಧಿಕಾರಿಗಳು ಅಥವಾ ಖಾಸಗಿ ಸಂಸ್ಥೆಗಳು ಹೋಂ ಐಸೊಲೇಷನ್‍ನಲ್ಲಿರುವವರ ಮನೆಗೆ ಭೇಟಿ ಕೊಟ್ಟು ರೋಗಿ ಮನೆಯಲ್ಲಿರಲು ಸಾಧ್ಯವೇ, ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು ವೈದ್ಯರು ಹೇಳುವ ಆರೋಗ್ಯ ಸಲಹೆಗಳನ್ನು ಪಾಲಿಸಲು ಸಾಧ್ಯವೇ ಎಂದು ಪರಾಮರ್ಶೆ ನಡೆಸುತ್ತಾರೆ. ದೂರವಾಣಿ ಮೂಲಕ ಕೂಡ ವೈದ್ಯರ ಸಲಹೆ ಕಾಲಕಾಲಕ್ಕೆ ಪ್ರತಿನಿತ್ಯವೆಂಬಂತೆ ಪಡೆಯುತ್ತಿರಬೇಕಾಗುತ್ತದೆ. ಅಗತ್ಯಬಿದ್ದರೆ ವೈದ್ಯರ ಬಳಿಕ ಹೋಗಬೇಕಾಗುತ್ತದೆ. ಹೋಂ ಐಸೊಲೇಷನ್‍ನಲ್ಲಿ ಇರುವಷ್ಟು ದಿನ ಸ್ವ ನಿರ್ಬಂಧ ಮತ್ತು ಕುಟುಂಬದ ಇತರ ಸದಸ್ಯರಿಂದ ದೂರ ಉಳಿಯಲು ಸೌಕರ್ಯ ಮನೆಯಲ್ಲಿರಬೇಕಾಗುತ್ತದೆ. ದಿನಪೂರ್ತಿ ಅಂದರೆ 24x7 ಸಮಯ ಹೋಂ ಐಸೊಲೇಷನ್‍ನಲ್ಲಿರುವವರನ್ನು ನೋಡಿಕೊಳ್ಳುವವರು ಬೇಕಾಗುತ್ತದೆ. ಕೋವಿಡ್-19 ರೋಗಿ, ಅವರನ್ನು ನೋಡಿಕೊಳ್ಳುವವರು ಮತ್ತು ಆಸ್ಪತ್ರೆಯ ವೈದ್ಯರ ಮಧ್ಯೆ ನಿರಂತರ ಸಂಪರ್ಕ ಇರಬೇಕಾಗುತ್ತದೆ. 60 ವರ್ಷ ಮೇಲ್ಪಟ್ಟ ಹಿರಿಯರು, ಡಯಾಬಿಟಿಸ್, ಹೃದ್ರೋಗ ಸಮಸ್ಯೆ, ಶ್ವಾಸ, ಕರುಳು, ಕಿಡ್ನಿ ಸಮಸ್ಯೆ ಹೊಂದಿರುವವರು ಕೋವಿಡ್-19 ಸೋಂಕು ತಗುಲಿ ಸಣ್ಣ ಲಕ್ಷಣ ಅಥವಾ ಕೋವಿಡ್‍ನ ಯಾವುದೇ ಲಕ್ಷಣ ಹೊಂದಿಲ್ಲದಿದ್ದರೆ ಸೂಕ್ತ ವೈದ್ಯಕೀಯ ತಪಾಸಣೆ ಬಳಿಕವಷ್ಟೆ ಹೋಂ ಐಸೊಲೇಷನ್‍ನಲ್ಲಿರಲು ಸಾಧ್ಯ.

ಸಾಕ್ಷಿ ಮಹಾರಾಜ್‍ಗೆ ಪಾಕ್‍ನಿಂದ ಬೆದರಿಕೆ

ನವದೆಹಲಿ, ಆ. 11: ಉನ್ನಾವೋ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‍ಗೆ ಪಾಕಿಸ್ತಾನದ ನಂಬರ್‍ನಿಂದ ಬೆದರಿಕೆ ಬಂದಿದೆ. ಸ್ವತಃ ಸಾಕ್ಷಿ ಮಹಾರಾಜ್ ಈ ಬಗ್ಗೆ ಮಾಹಿತಿ ನೀಡಿದ್ದು, ಪಾಕಿಸ್ತಾನದ ನಂಬರ್‍ನ್ನು ಬಳಕೆ ಮಾಡುತ್ತಿರುವ ವ್ಯಕ್ತಿಯೋರ್ವ ತಮಗೆ ಕರೆ ಮಾಡಿ ತಮ್ಮನ್ನು, ದೇಶದ ಇತರ ಉನ್ನತ ಮಟ್ಟದ ನಾಯಕರನ್ನು ಕೊಲೆ ಮಾಡುವುದಕ್ಕಾಗಿ ಬೆದರಿಕೆ ಹಾಕಿದ್ದಾನೆಂದು ಹೇಳಿದ್ದಾರೆ. ಈ ಹಿಂದೆ ಇಂಟರ್‍ನೆಟ್ ಮೂಲಕ ಬೆದರಿಕೆ ಬಂದಿತ್ತು. ಅದರ ಮರು ದಿನ ನನಗೆ ಪಾಕಿಸ್ತಾನಿ ನಂಬರ್‍ನಿಂದ ಕೊಲೆ ಬೆದರಿಕೆ ಬಂದಿದೆ ನನ್ನನ್ನು ನಿಂದಿಸಿ 10 ದಿನಗಳಲ್ಲಿ ನನ್ನ ಹಾಗೂ ನನ್ನ ಮನೆಯ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ, ಇದರಿಂದ ನಮಗೆ ಭಯ ಉಂಟಾಗಿದ್ದು, ಗೃಹ ಕಾರ್ಯದರ್ಶಿ ಅವಿನಾಶ್ ಅವಸ್ಥಿಗೆ ಕರೆ ಮಾಡಿ ಮಾಹಿತಿ ತಲುಪಿಸಿದೆ ಎಂದು ಹೇಳಿದ್ದಾರೆ.

ಗುಂಡಿಕ್ಕಿ ಬಿಜೆಪಿ ನಾಯಕನ ಹತ್ಯೆ

ಉತ್ತರಪ್ರದೇಶ, ಆ. 11: ತಮ್ಮ ಮನೆಯ ಸಮೀಪ ತೋಟದಲ್ಲಿ ಬೆಳಗಿನ ಹೊತ್ತು ವಾಕಿಂಗ್ ಮಾಡುತ್ತಿದ್ದ ಬಿಜೆಪಿ ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಾಘ್‍ಪತ್ ಜಿಲ್ಲೆಯ ಗ್ರಾಮದಲ್ಲಿ ನಡೆದಿದೆ. ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಸಂಜಯ್ ಖೋಖರ್ ಎಂಬವರನ್ನು ಇಂದು ಬೆಳಿಗ್ಗೆ ದುಷ್ಕರ್ಮಿಗಳು ಅವರ ಮನೆಯ ಸಮೀಪ ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದ ವೇಳೆ ಗುಂಡಿಕ್ಕಿ ಕೊಂದು ಹಾಕಿದ್ದು ಸುದ್ದಿ ತಿಳಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತನಿಖೆಗೆ ಆದೇಶ ಹೊರಡಿಸಿದ್ದಾರೆ, ಅಲ್ಲದೆ 24 ಗಂಟೆಯೊಳಗೆ ಘಟನೆಗೆ ಸಂಬಂಧಿಸಿದಂತೆ ವರದಿ ನೀಡಬೇಕೆಂದು ಹೇಳಿದ್ದಾರೆ. ಸಂಜಯ್ ಖೋಖರ್ ಅವರ ಮೃತದೇಹ ಅವರ ಕಬ್ಬಿನ ಗದ್ದೆಯ ಸಮೀಪ ರಕ್ತದ ಮಡುವಿನಲ್ಲಿ ಬಿದ್ದಿತ್ತು.