ಸೋಮವಾರಪೇಟೆ,ಆ.9: ಅಬ್ಬರಿಸಿದ ಆಶ್ಲೇಷ ಮಳೆ ಹಾಗೂ ಭೋರ್ಗರೆದ ಭಾರೀ ಗಾಳಿಯಿಂದಾಗಿ ಸೋಮವಾರಪೇಟೆ ವ್ಯಾಪ್ತಿಯಲ್ಲಿ 600ಕ್ಕೂ ಅಧಿಕ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದರೆ, 5 ಟ್ರಾನ್ಸ್‍ಫಾರ್ಮರ್‍ಗಳು ಜಖಂಗೊಂಡು, 3 ಕಿ.ಮೀ. ಉದ್ದದ ವಿದ್ಯುತ್ ತಂತಿಗಳು ನಷ್ಟಗೊಂಡಿವೆ.ಮಳೆಯೊಂದಿಗೆ ಭಾರೀ ಪ್ರಮಾಣದಲ್ಲಿ ಗಾಳಿಯೂ ಬೀಸಿದ್ದರಿಂದ ನೂರಾರು ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು, ಹಾನಿಯುಂಟು ಮಾಡಿದೆ. ಟ್ರಾನ್ಸ್‍ಫಾರ್ಮರ್‍ಗಳು, ಕಂಬಗಳನ್ನು ದುರಸ್ತಿಪಡಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ.ಸೋಮವಾರಪೇಟೆ ವಿಭಾಗದಲ್ಲಿ 3, ಶನಿವಾರಸಂತೆ ಹಾಗೂ ಆಲೂರುಸಿದ್ದಾಪುರ ವ್ಯಾಪ್ತಿಯಲ್ಲಿ ತಲಾ ಒಂದೊಂದು ವಿದ್ಯುತ್ ಟ್ರಾನ್ಸ್‍ಫಾರ್ಮರ್‍ಗೆ ಹಾನಿಯಾಗಿದೆ. ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿರುವ ಗ್ರಾಮಗಳಿಗೆ ಬೆಳಕು ಕಲ್ಪಿಸಲು ಸೆಸ್ಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ತಾಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಯಿಂದ ನೂರಾರು ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ
(ಮೊದಲ ಪುಟದಿಂದ) ಅಂದಾಜು 600ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಕಳೆದ ನಾಲ್ಕು ದಿನಗಳಿಂದ ಶಾಂತಳ್ಳಿ, ಕೊಡ್ಲಿಪೇಟೆ, ಶನಿವಾರಸಂತೆ, ಸುಂಠಿಕೊಪ್ಪ ಹೋಬಳಿಯ ಬಹುತೇಕ ಗ್ರಾಮಗಳು ಕತ್ತಲೆಯಲ್ಲಿದ್ದು, ಪರಿಸ್ಥಿತಿ ಹೀಗೇ ಇದ್ದರೆ ಮುಂದಿನ 3 ದಿನಗಳ ಒಳಗೆ ಕುಗ್ರಾಮಗಳಿಗೂ ವಿದ್ಯುತ್ ಸರಬರಾಜು ಮಾಡುತ್ತೇವೆ ಎಂದು ಸೆಸ್ಕ್ ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರಪೇಟೆ ಉಪವಿಭಾಗದ ಸೋಮವಾರಪೇಟೆ, ಶಾಂತಳ್ಳಿ, ಶನಿವಾರಸಂತೆ, ಕೊಡ್ಲಿಪೇಟೆ, ಶಾಖೆಗಳಲ್ಲಿ 70 ಮಂದಿ ಸಿಬ್ಬಂದಿಗಳ ಜತೆಗೆ ಹೆಚ್ಚುವರಿಯಾಗಿ 26 ಮಂದಿ ಮಾನ್ಸೂನ್ ಗ್ಯಾಂಗ್‍ಮೆನ್‍ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಗುತ್ತಿಗೆದಾರರ ವಾಹನಗಳು, ಕ್ರೇನ್‍ಗಳು ಹಾಗು ಗ್ಯಾಂಗ್‍ಮೆನ್‍ಗಳ ಸಹಾಯ ಪಡೆದು ದುರಸ್ತಿ ಕಾರ್ಯ ನಡೆಸಲಾಗುತ್ತಿದೆ.
ಇದರೊಂದಿಗೆ ಮೈಸೂರು ಹಾಗೂ ಹಾಸನದಿಂದಲೂ ಒಟ್ಟು 18 ಮಂದಿ ನುರಿತ ಸಿಬ್ಬಂದಿಗಳು ಸೋಮವಾರಪೇಟೆ ಉಪವಿಭಾಗಕ್ಕೆ ಆಗಮಿಸುತ್ತಿದ್ದು, ತಾ. 10ರಿಂದ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಇಲಾಖೆಯ ಎಇಇ ಧನಂಜಯ್ ಮಾಹಿತಿ ನೀಡಿದ್ದಾರೆ.
ಕುಶಾಲನಗರ ಮಾರ್ಗವಾಗಿ ಸೋಮವಾರಪೇಟೆಗೆ ಬಂದಿರುವ 33ಕೆ.ವಿ.ಮಾರ್ಗದಲ್ಲಿ ಲಿಟ್ಲ್‍ಜಂಗಲ್ ಹೋಂ ಸ್ಟೇ ಹಾಗು ಹಳ್ಳದಿಣ್ಣೆ ಸಮೀಪ ಹಾಗು ಇನ್ನಿತರ ಕಡೆಗಳಲ್ಲಿ ದೊಡ್ಡಗಾತ್ರದ ಮರಗಳು ಬಿದ್ದ ಪರಿಣಾಮ ಸಮಸ್ಯೆಯಾಗಿದೆ. ಕೊಡ್ಲಿಪೇಟೆ ಮುಖ್ಯ ಮಾರ್ಗದಲ್ಲಿಯೂ ದೊಡ್ಡಮಟ್ಟದ ಹಾನಿಯಾಗಿದೆ.
ಗ್ರಾಮೀಣ ಭಾಗದಲ್ಲಿ ವಿದ್ಯುತ್ ಇಲ್ಲದೆ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಮಳೆಯ ನೀರನ್ನೇ ಅವಲಂಭಿಸಬೇಕಾಗಿದೆ. ಶಾಂತಳ್ಳಿ ಹೋಬಳಿಯ ಅತಿಹೆಚ್ಚು ಮಳೆ ಬೀಳುವ ಪುಷ್ಪಗಿರಿ ತಪ್ಪಲಿನ ಗ್ರಾಮಗಳಲ್ಲಿ ಅಧಿಕ ಮಳೆಯಾಗಿದೆ. ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಬೆಟ್ಟದಳ್ಳಿ, ಪುಷ್ಪಗಿರಿ, ಹರಗ, ಕೊತ್ನಳ್ಳಿ, ಬೀದಳ್ಳಿ, ಹೆಗ್ಗಡಮನೆ, ಕುಂದಳ್ಳಿ, ಕುಮಾರಳ್ಳಿ, ಬಾಚಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳು ಕತ್ತಲೆಯಲ್ಲಿವೆ. ಕಾಫಿ ತೋಟದೊಳಗೆ ವಿದ್ಯುತ್ ತಂತಿಯ ಮೇಲೆ ಅಸಂಖ್ಯಾತ ಮರಗಳು ಬಿದ್ದಿರುವ ಪರಿಣಾಮ ಸೆಸ್ಕ್ ಸಿಬ್ಬಂದಿಗಳು ಹುಡುಕಾಟ ನಡೆಸಿ, ದುರಸ್ತಿ ಕಾರ್ಯಕೈಗೊಳ್ಳಬೇಕಿದೆ.
ಸದ್ಯಕ್ಕೆ ವಾಯು-ವರುಣನ ಆರ್ಭಟ ಕಡಿಮೆಯಾಗಿರುವದರಿಂದ ಕಳೆದ ಎರಡು ದಿನಗಳಿಂದ ಯಾವದೇ ಹಾನಿ ಸಂಭವಿಸುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಒಂದೆರಡು ದಿನಗಳಲ್ಲಿ ವಿದ್ಯುತ್ ಸಂಬಂಧಿತ ಬಹುತೇಕ ಸಮಸ್ಯೆಗಳು ಪರಿಹಾರಗೊಳ್ಳಲಿವೆ.
ಮನೆಗೆ ಹಾನಿ
ಸುಂಟಿಕೊಪ್ಪ: ಬೋಯಿಕೇರಿ ಗ್ರಾಮ ಪಂಚಾಯಿತಿಯ ಕಡಗದಾಳು ಗ್ರಾಮದಲ್ಲಿ ಗಾಳಿ ಮಳೆಯಿಂದ ರಾಮು ಎಂಬವರ ಮನೆಯ ಮೇಲ್ಛಾವಣಿ ಶೀಟುಗಳು ಹಾರಿ ಒಡೆದು ಸಂಪೂರ್ಣ ನೆಲಸಮಗೊಂಡಿದೆ. ಮನೆ ಸೇರಿದಂತೆ ಮನೆಯಲ್ಲಿದ್ದ ಅಡಿಗೆ ಸಾಮಗ್ರಿಗಳು ಜಖಂಗೊಂಡು ನಷ್ಟ ಸಂಭವಿಸಿದೆ ಎಂದು ಕಂದಾಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.