ಕೃಷಿ ಮೂಲ ಸೌಕರ್ಯ ನಿಧಿ ಯೋಜನೆ
ನವದೆಹಲಿ, ಆ. 9: ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ 1 ಲಕ್ಷ ಕೋಟಿ ರೂಪಾಯಿಗಳ ಕೃಷಿ ಮೂಲ ಸೌಕರ್ಯ ನಿಧಿ ಯೋಜನೆಯನ್ನು ಉದ್ಘಾಟಿಸಿದರು. ದೆಹಲಿಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಇದರಿಂದ ಕೃಷಿ-ಉದ್ಯಮಿಗಳು, ಕೃಷಿ-ತಂತ್ರಜ್ಞಾನಿಗಳು, ರೈತ ಗುಂಪುಗಳಿಗೆ ಸಹಾಯವಾಗಲಿದೆ ಎಂದರು. ಈ ಸಂದರ್ಭದಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್ ಮತ್ತು ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಹೊಸ ಕೃಷಿ ಮೂಲ ಸೌಕರ್ಯ ನಿಧಿ 2029 ರವರೆಗೆ 10 ವರ್ಷಗಳ ಕಾಲಾವಧಿಯನ್ನು ಇದು ಹೊಂದಿರುತ್ತದೆ. ರೈತರ ಬೆಳೆಯ ಸುಗ್ಗಿಯ ನಂತರ ಕೃಷಿ ಮೂಲಸೌಕರ್ಯಗಳ ನಿರ್ವಹಣೆಗೆ, ಸಮುದಾಯ ಬೆಳೆ ಸಂಪತ್ತುಗಳಿಗೆ, ಕೃಷಿ ಆಸ್ತಿಗಳನ್ನು ಪೋಷಿಸಲು ಆರ್ಥಿಕ ಬೆಂಬಲವಾಗಿ ಮತ್ತು ಬಡ್ಡಿ ರೂಪದಲ್ಲಿ ಹೂಡಿಕೆ ಮಾಡಲು ಸರ್ಕಾರದಿಂದ ಮಧ್ಯಮದಿಂದ ದೀರ್ಘಾವಧಿಯವರೆಗೆ ಸಾಲದ ಹಣಕಾಸು ನೆರವು ನೀಡುವ ಯೋಜನೆಯಾಗಿದೆ.
ಆರೋಗ್ಯ ಸಚಿವರಿಗೆ ಕೋವಿಡ್ ದೃಢ
ಬೆಂಗಳೂರು, ಆ. 9: ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇಂದು ಜ್ವರ ಕಾಣಿಸಿಕೊಂಡ ಹಿನ್ನೆಲೆ ಪರೀಕ್ಷೆ ಮಾಡಿಸಿದಾಗ ಕೊರೊನಾ ಪಾಸಿಟಿವ್ ಬಂದಿದೆ ಎಂದು ಶ್ರೀರಾಮುಲು ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ತನ್ನ ಇಲಾಖೆ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳೂ ಜೀವದ ಹಂಗು ತೊರೆದು ಮಹಾಮಾರಿಯ ವಿರುದ್ಧ ಹಗಲಿರುಳೂ ಶ್ರಮಿಸುತ್ತಿವೆ. ಕೊರೊನಾ ಕಾಣಿಸಿಕೊಂಡ ಸಮಯದಿಂದಲೂ 30 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಜನರಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ಮಾಡುವ ಸರ್ಕಾರದ ಆಶಯಕ್ಕೆ ತಕ್ಕಂತೆ ಕೆಲಸ ಮಾಡುತ್ತಿರುವ ಈ ಸಂದರ್ಭದಲ್ಲಿ ತನಗೆ ಸತ್ವಪರೀಕ್ಷೆಯ ಸಮಯ ಎದುರಾಗಿದೆ. ಈ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲಿದ್ದೇನೆ. ಆದಷ್ಟೂ ಬೇಗ ಗುಣಮುಖನಾಗಿ ಸಂಕಷ್ಟ ಸಮಯದಲ್ಲಿ ಇನ್ನಷ್ಟು ಜನಸೇವೆ ಮಾಡಲು ಶಕ್ತಿ ಕೊಡುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಕೋಮು ಗಲಭೆಗೆ ಐಎಸ್‍ಐ ಸಂಚು
ನವದೆಹಲಿ, ಆ. 9: ರಾಮ ಮಂದಿರ ಭೂಮಿ ಪೂಜೆಯ ಬೆನ್ನಲ್ಲೇ ಭಾರತದಲ್ಲಿ ಕೋಮು ಗಲಭೆ ಉಂಟುಮಾಡಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‍ಐ ಸಂಚು ರೂಪಿಸಿದೆ ಎಂಬ ಆಘಾತಕಾರಿ ಅಂಶ ಬಹಿರಂಗವಾಗಿದೆ. ಭಾರತದಲ್ಲಿ ಶಾಂತಿಯುತ ವಾತಾವರಣವನ್ನು ಕದಡಲು ಐಎಸ್‍ಐ ಯತ್ನಿಸುತ್ತಿದೆ. ವಾಯ್ಸ್ ಓವರ್ ಇಂಟರ್‍ನೆಟ್ ಪ್ರೋಟೋಕಾಲ್ ಮೂಲಕ ಕೋಮುಗಲಭೆಗಳನ್ನು ಪ್ರಚೋದಿಸುವ ಕೆಲಸಕ್ಕೆ ಕೈ ಹಾಕುತ್ತಿದ್ದು, ಇದು ಲಖನೌ ಜನರಿಗೆ ತಲುಪುವಂತೆ ಮಾಡುತ್ತಿದೆ ಎಂದು ವರದಿ ಪ್ರಕಟಿಸಿದೆ. ಜನರಿಗೆ ವಿಐಪಿ ನಂಬರ್‍ಗಳ ಮೂಲಕ ಕೋಮುಪ್ರಚೋದಕ ಸಂದೇಶ ಕರೆಗಳು ರವಾನೆಯಾಗುತ್ತಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, 12ಕ್ಕೂ ಹೆಚ್ಚು ನಂಬರ್‍ಗಳ ಮೇಲೆ ನಿಗಾವಹಿಸಿದ್ದಾರೆ. ತಾ. 5 ರಂದು ಭೂಮಿ ಪೂಜೆಯ ದಿನದಂದೇ ವಿಧ್ವಂಸಕ ಕೃತ್ಯಕ್ಕೆ ಐಎಸ್‍ಐ ಸಂಚು ರೂಪಿಸಿತ್ತು.
ರಾಜ್ಯದಲ್ಲಿ 100 ಕೋವಿಡ್ ಪ್ರಯೋಗಾಲಯ
ಬೆಂಗಳೂರು, ಆ. 9: ರಾಜ್ಯದಲ್ಲಿ ಇದೀಗ 100 ಕೋವಿಡ್ ಸೋಂಕು ಪತ್ತೆ ಪ್ರಯೋಗಾಲಯಗಳು ಇರುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. 45 ಸರ್ಕಾರಿ ಮತ್ತು 55 ಖಾಸಗಿ ಪ್ರಯೋಗಾಲಯಗಳಿದ್ದು, ರಾಜ್ಯದಾದ್ಯಂತ 16 ಲಕ್ಷದ 68 ಸಾವಿರದ 511 ಪರೀಕ್ಷೆ ನಡೆಸಲಾಗಿದೆ. ಈ ಪೈಕಿ ಶೇ. 79.85 (13,32,464) ಪರೀಕ್ಷೆಗಳು ಆರ್‍ಟಿ- ಪಿಸಿಆರ್ ಮತ್ತಿತರ ವಿಧಾನಗಳ ಪರೀಕ್ಷೆಯಾಗಿದೆ. ಉಳಿದ 3, 36, 047 ಪರೀಕ್ಷೆಗಳು ರಾಪಿಡ್ ಅಂಟಿಜೆನ್ ಟೆಸ್ಟ್‍ಗಳಾಗಿವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಲಸಿಕೆ ಹೆಸರಿನಲ್ಲಿ ರಾಷ್ಟ್ರೀಯತೆ ಬೇಡ
ನವದೆಹಲಿ, ಆ. 9: ಕೊರೊನಾ ಲಸಿಕೆ ಹೆಸರಿನಲ್ಲಿ ರಾಷ್ಟ್ರೀಯತೆಯನ್ನು ಬಿಂಬಿಸುವುದು ಸರಿಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‍ಒ) ಎಚ್ಚರಿಕೆ ನೀಡಿದೆ. ಜಾಗತಿಕ ಪಿಡುಗಾಗಿ ಮಾರ್ಪಟ್ಟಿರುವ ಮಾರಕ ಕೊರೊನಾ ವೈರಸ್ ಲಸಿಕೆ ಕಂಡು ಹಿಡಿಯುವ ಪೈಪೋಟಿಗೆ ಬಿದ್ದಿರುವ ದೇಶಗಳು ಲಸಿಕೆ ಅಭಿವೃದ್ಧಿ ಹೆಸರಿನಲ್ಲಿ ರಾಷ್ಟ್ರೀಯತೆಯನ್ನು ಬಿಂಬಿಸುತ್ತಿವೆ. ಇದನ್ನು ಮೊದಲು ತಡೆಯಬೇಕು. ವಿಶ್ವದ ಬಡ ದೇಶಗಳಲ್ಲಿ ಕಂಡು ಬರುವ ಕೊರೊನಾ ಸೋಂಕು ಕೊನೆಗೊಳ್ಳದೆ ಹೋದರೆ, ಶ್ರೀಮಂತ ರಾಷ್ಟ್ರಗಳು ಸಹ ಮತ್ತೆ ಅದರ ಹಿಡಿತದಿಂದ ಪಾರಾಗಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ. ಅಮೇರಿಕಾದ ಆಸ್ಪೆನ್ ಸೆಕ್ಯುರಿಟಿ ಫೋರಂನೊಂದಿಗೆ ಜಿನೀವಾದಲ್ಲಿನ ವಿಶ್ವ ಆರೋಗ್ಯ ಸಂಸ್ಥೆ ಪ್ರಧಾನ ಕಚೇರಿಯಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಅವರು, ಲಸಿಕೆ ರಾಷ್ಟ್ರೀಯತೆ ಒಳ್ಳೆಯದಲ್ಲ, ಅದು ನಮಗೆ ಸಹಾಯ ಮಾಡುವುದಿಲ್ಲ. ನಾವು ಜಾಗತಿಕ ವಾತಾವರಣದಲ್ಲಿ ವಾಸಿಸುತ್ತಿದ್ದೇವೆ. ಇದರಲ್ಲಿ ಎಲ್ಲಾ ದೇಶಗಳು ಪರಸ್ಪರ ಆಳವಾಗಿ ಸಂಪರ್ಕ ಹೊಂದಿವೆ.
ಕೇಂದ್ರ ಗೃಹ ಸಚಿವರ ವರದಿ ನೆಗೆಟಿವ್
ನವದೆಹಲಿ, ಆ. 9: ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್‍ಷಾ ಅವರಿಗೆ ಈಗ ಕೊರೊನಾ ಸೋಂಕು ವರದಿ ನೆಗೆಟಿವ್ ಬಂದಿದೆ. ಬಿಜೆಪಿ ಸಂಸದ ಮನೋಜ್ ತಿವಾರಿ ಈ ಬಗ್ಗೆ ಮಾಹಿತಿ ನೀಡಿದ್ದು ಅಮಿತ್‍ಷಾ ಅವರಿಗೆ ಈಗ ನಡೆಸಲಾದ ಪರೀಕ್ಷೆಯಲ್ಲಿ ಸೋಂಕು ನೆಗೆಟಿವ್ ಬಂದಿದೆ. ತಾ. 2 ರಂದು ಅಮಿತ್‍ಷಾ ಅವರಿಗೆ ಸೋಂಕು ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿದ್ದರು. ತಾ. 2 ರಂದು ಅಮಿತ್‍ಷಾ ಅವರಿಗೆ ಸೋಂಕು ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿದ್ದರು. ಟ್ವೀಟರ್‍ನಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಅಮಿತ್‍ಷಾ, ತನಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆದರೆ ಆರೋಗ್ಯವಾಗಿದ್ದೇನೆ. ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಹೇಳಿದ್ದಾರೆ.
101 ರಕ್ಷಣಾ ಸಾಮಗ್ರಿ ಆಮದು ನಿಷೇಧ
ನವದೆಹಲಿ, ಆ. 9: ರಕ್ಷಣಾ ಸಚಿವಾಲಯ ಆತ್ಮನಿರ್ಭರ ಯೋಜನೆಗೆ ಉತ್ತೇಜನ ನೀಡಲು ಸಿದ್ಧವಾಗಿದ್ದು, ದೇಶೀಯ ಕಂಪೆನಿಗಳ ಜತೆ ರಕ್ಷಣಾ ಇಲಾಖೆ ಒಪ್ಪಂದ ಮಾಡಿಕೊಂಡಿದೆ. ವಿದೇಶಗಳಿಂದ 101 ರಕ್ಷಣಾ ಸಾಮಗ್ರಿಗಳ ಆಮದಿನ ಮೇಲೆ ನಿಷೇಧ ಹೇರಲಾಗಿದೆ. ಫಿರಂಗಿ ಬಂದೂಕುಗಳು, ಆಕ್ರಮಣಕಾರಿ ಬಂದೂಕುಗಳು, ಸಾರಿಗೆ ವಿಮಾನಗಳು, ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ವಸ್ತುಗಳು ಸೇರಿದಂತೆ 101 ವಿವಿಧ ಉಪಕರಣಗಳನ್ನು ದೇಶೀಯ ಮಾರುಕಟ್ಟೆಯಿಂದಲೇ ಖರೀದಿ ಮಾಡುವ ನಿರ್ಧಾರ ಮಾಡಲಾಗಿದೆ. ಇದರಿಂದ ಆತ್ಮನಿರ್ಭರ ಭಾರತಕ್ಕೆ ಉತ್ತೇಜನ ಸಿಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಹತ್ವದ ನಿರ್ಧಾರವನ್ನು ಟ್ವೀಟ್ ಮೂಲಕ ಪ್ರಕಟಿಸಿದ್ದಾರೆ. ಸೇನೆಯಲ್ಲಿ 2020 ರಿಂದ 2024ರ ಮಧ್ಯೆ ಮಹತ್ವದ ಕಾರ್ಯ ನಡೆಯಲಿದೆ. ಸಂಪೂರ್ಣವಾಗಿ ರಕ್ಷಣಾ ಸಾಮಗ್ರಿ ದೇಶದಲ್ಲೇ ಉತ್ಪಾದನೆ ಆಗಲಿದೆ. ಇದಕ್ಕಾಗಿ ಪ್ರತ್ಯೇಕ ಬಜೆಟ್ ಮುಖ್ಯಸ್ಥರ ನೇಮಕ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.