ವೀರಾಜಪೇಟೆ, ಆ. 9: ವೀರಾಜಪೇಟೆ ತಾಲೂಕಿಗೆ ಕಳೆದ ಐದು ದಿನಗಳಿಂದ ನಿರಂತರ ಭಾರೀ ಮಳೆ ಸುರಿಯುತ್ತಿದ್ದು, ತಾಲೂಕಿ ನಾದ್ಯಂತ ಆರು ಹೋಬಳಿಗಳಲ್ಲೂ ಮನೆಗಳು ಭಾಗಶ: ಕುಸಿತ, ಗದ್ದೆಗಳು ಜಲಾವೃತವಾಗಿ ಸಸಿಗಳು ಕೊಳೆತಿ ರುವುದು ಸೇರಿದಂತೆ ಸುಮಾರು ಎರಡೂವರೆ ಕೋಟಿಗೂ ಅಧಿಕ ನಷ್ಟ ಸಂಭವಿಸಿರುವುದಾಗಿ ತಾಲೂಕು ತಹಶೀಲ್ದಾರ್ ಎಲ್.ಎಂ. ನಂದೀಶ್ ತಿಳಿಸಿದ್ದಾರೆ.ತಾ.2ರಿಂದ ವೀರಾಜಪೇಟೆಗೆ ತಾಲೂಕಿಗೆ ನಿರಂತರವಾಗಿ ಮಳೆ ಸುರಿಯುತ್ತಿರುವುದು ಜೊತೆಗೆ ಭಾರೀ ಗಾಳಿಗೆ ತಾಲೂಕಿನ ಕಾಫಿ ತೋಟಗಳಲ್ಲಿ ಮರ ಬಿದ್ದು ಕಾಫಿ ಗಿಡಗಳು ನಾಶವಾಗಿವೆ. ತಾಲೂಕಿನಾದ್ಯಂತ ರಸ್ತೆಯ ಬದಿಯಲ್ಲಿರುವ ಗದ್ದೆ ನೀರಿನಿಂದ ಜಲಾವೃತಗೊಂಡಿದ್ದು, ಬೆಟ್ಟದ ತಪ್ಪಲಲ್ಲಿನ ಬದಿಯಲ್ಲಿರುವ ಗದ್ದೆಗಳಿಗೆ ಬರೆಜರುಗಿ ನಾಟಿಗದ್ದೆ ಮಣ್ಣಿನಿಂದ ಆವೃತವಾಗಿದೆ. ತಾಲೂಕಿನಲ್ಲಿ ಭಾರೀ ಮಳೆ ಮುಂದುವರೆಯುತ್ತಿರುವುದರಿಂದ ಕಂದಾಯ ವಿಭಾಗದ ಸಿಬ್ಬಂದಿಗಳಿಗೂ ನಿಖರವಾಗಿ ನಷ್ಟದ ಸಮೀಕ್ಷೆ ಮಾಡಲು ರಸ್ತೆ ಸಂಚಾರದ ಅಡಚಣೆಯಾಗಿದ್ದು, ತಾಲೂಕಿನ ಆರು ಹೋಬಳಿಗಳಲ್ಲೂ ಮಳೆ ವಿರಾಮದ ನಂತರ ಸಮೀಕ್ಷೆ ಮಾಡಲಾಗುವುದು ಎಂದು ನಂದೀಶ್ ತಿಳಿಸಿದ್ದಾರೆ. ಮೂರು ದಿನಗಳ ಹಿಂದೆ ತಾಲೂಕಿನಾ ದ್ಯಂತ ಪ್ರವಾಸ ಮಾಡಿದ್ದು, ಭಾರೀ ಮಳೆಯಿಂದ ಕಾಫಿ ತೋಟ ಹಾಗೂ ನಾಟಿ ಗದ್ದೆಗಳಿಗೂ ಹೆಚ್ಚಿನ ಪ್ರಮಾಣ ದಲ್ಲಿ ನಷ್ಟ ಉಂಟಾಗಿದೆ.

(ಮೊದಲ ಪುಟದಿಂದ) ಆಗಸ್ಟ್ ಮೊದಲ ವಾರದಲ್ಲಿಯೇ ತಾಲೂಕಿಗೆ ಭಾರೀ ಮಳೆಯಾಗಿದ್ದು, ಭಾರೀ ಮಳೆ ವಿಳಂಬವಾಗಿದ್ದರೆ ಮುಂದಿನ ಒಂದು ವಾರದಲ್ಲಿ ನಾಟಿ ಕೆಲಸ ಮುಕ್ತಾಯಗೊಳ್ಳುತ್ತಿತ್ತು. ಈಗ ತಾಲೂಕಿನ ಹೆಚ್ಚಿನ ಗದ್ದೆಗಳಲ್ಲಿ ನಾಟಿ ಕೆಲಸ ಅಪೂರ್ಣಗೊಂಡಿದೆ.

ಸಿದ್ದಾಪುರದ ಬಳಿಯ ಕರಡಿಗೋಡು ಗ್ರಾಮದ ಕಾವೇರಿ ಹೊಳೆಯ ದಡದಲ್ಲಿದ್ದ ಸುಮಾರು 37 ಕುಟುಂಬಗಳನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ತಾಲೂಕಿನಲ್ಲಿ ವೀರಾಜಪೇಟೆ ಸೇರಿದಂತೆ ಒಟ್ಟು 6 ಕಡೆಗಳಲ್ಲಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎಲ್ಲಗಂಜಿ ಕೇಂದ್ರಗಳಲ್ಲೂ ಭಾರೀ ಮಳೆಯಿಂದ ಅಪಾಯದ ಅಂಚಿನಲ್ಲಿರುವ ಕುಟುಂಬಗಳನ್ನು ಸ್ಥಳಾಂತರಿಸಿ ಆಶ್ರಯ ಕಲ್ಪಿಸಲಾಗಿದೆ.

ವೀರಾಜಪೇಟೆ ಪಟ್ಟಣದ ಅಯ್ಯಪ್ಪ ಬೆಟ್ಟ, ಮಲೆತಿರಿಕೆ ಬೆಟ್ಟ, ಅರಸುನಗರ, ನೆಹರೂನಗರ, ಸುಂಕದಕಟ್ಟೆ ಸೇರಿದಂತೆ 24 ಮನೆಗಳು ಭಾಗಶ: ಹಾನಿ, 4 ಕಡೆಗಳಲ್ಲಿ ತಡೆಗೋಡೆಗಳು ಕುಸಿತ, ವೀರಾಜಪೇಟೆ ಹೋಬಳಿಯ ಕಲ್ಲುಬಾಣೆಯಲ್ಲಿ ತೆಂಗಿನ ಮರ ಬಿದ್ದು 1 ಮನೆ ಜಖಂ, ತೋರ ಗ್ರಾಮದಲ್ಲಿ 1, ಕೆದಮುಳ್ಳೂರು ಗ್ರಾಮದಲ್ಲಿ 2, ಹೆಗ್ಗಳ ಗ್ರಾಮದಲ್ಲಿ 1 ರಾಮನಗರದಲ್ಲಿ 1 ಪೆರುಂಬಾಡಿಯಲ್ಲಿ 1, ಬೇಟೋಳಿಯಲ್ಲಿ 1 ಬಿಟ್ಟಂಗಾಲ 2 ಭಾಗಶ: ಮನೆ, ಮೈತಾಡಿಯಲ್ಲಿ 2, ಕಡಂಗ ಗ್ರಾಮದಲ್ಲಿ 2 ಮನೆಗಳು ಭಾಗಶ: ಜಖಂಗೊಂಡಿದೆ.

ಅಮ್ಮತ್ತಿ ಹೋಬಳಿಯಲ್ಲಿ 5, ಹುದಿಕೇರಿ ಹೋಬಳಿಯ ಮುಗುಟಗೇರಿ 2, ಬಲ್ಯಮಂಡೂರು 3, ಬಿರುನಾಣಿ 3 ಚೀನಿವಾರ ಗ್ರಾಮ 2, ಶ್ರೀಮಂಗಲ ಟೌನ್ ನವೀನ್‍ಎಂಬುವರ ಮನೆ ಮೇಲೆ ವಿದ್ಯುತ್‍ಕಂಬ ಬಿದ್ದು ಮನೆ ಭಾಗಶ: ಜಖಂ, ಟಿ.ಶೆಟ್ಟಿಗೇರಿ 2 ವೆಸ್ಟ್‍ನೆಮ್ಮಲೆ 2, ಪೊನ್ನಂಪೇಟೆ 2, ಪೊನ್ನಂಪೇಟೆ ಹೋಬಳಿಯ ಕುಮುಟೂರು-2 ಇತರಡೆಗಳಲ್ಲಿ ಒಟ್ಟು 3 ಮನೆಗಳು, ಕುಟ್ಟದ ನಾಥಂಗಲ್‍ನಲ್ಲಿ 2, ಕೆ.ಬಾಡಗ 1 ನಾಲ್ಕೇರಿಯಲ್ಲಿ 1 ಸೇರಿದಂತೆ ತಾಲೂಕಿನಲ್ಲಿ 130ಕ್ಕೂ ಅಧಿಕ ಪ್ರಕರಣಗಳಲ್ಲಿ ಹಾನಿ ಉಂಟಾಗಿದೆ.

ಕಳೆದ ಜೂನ್- ಜುಲೈ ತಿಂಗಳಲ್ಲಿ ತಾಲೂಕಿನಲ್ಲಿ 10 ಮನೆಗಳು ಭಾಗಶ: ಜಖಂ ಹಾಗೂ ಒಂದು ದನದ ಕೊಟ್ಟಿಗೆ ಪೂರ್ಣ ನೆಲಸಮಗೊಂಡಿದ್ದ ದೂರುಗಳು ತಾಲೂಕು ಕಚೇರಿಯ ಪರಿಹಾರ ವಿಭಾಗಕ್ಕೆ ಬಂದಿದ್ದವು.

ವೀರಾಜಪೇಟೆ ತಾಲೂಕಿನ ಮಳೆ ಪರಿಹಾರ ವಿಭಾಗಕ್ಕೆ ತಾಲೂಕಿನಲ್ಲಿ ಆಗಸ್ಟ್ 7ರ ತನಕ ಬಿದ್ದ ಭಾರೀ ಮಳೆಗೆ ಸಂಬಂಧಿಸಿದಂತೆ ಈಗಾಗಲೇ ಸುಮಾರು 154 ಅರ್ಜಿಗಳು ಮಳೆ ಹಾನಿ ಪರಿಹಾರಕ್ಕಾಗಿ ಬಂದಿವೆ.

ಕಳೆದ ಭಾನುವಾರದಿಂದ ವೀರಾಜಪೇಟೆ ತಾಲೂಕಿಗೆ ಬಿದ್ದ ಭಾರೀ ಮಳೆ ಗಾಳಿ, ಇದರಿಂದ ಉಂಟಾದ ನಷ್ಟದ ಅಂದಾಜು ಪ್ರಮಾಣ ಇನ್ನೂ ಪೂರ್ಣ ಪ್ರಮಾಣದಲ್ಲಿ ತಹಶೀಲ್ದಾರ್ ಅವರ ಕಚೇರಿಯಿಂದ ಸಂಗ್ರಹಿಸಿ ಕಳಿಸಲಾಗಿದೆ. ತಾಲೂಕು ಕಚೇರಿಗೂ ಇನ್ನು ನಿಖರವಾದ ಮಾಹಿತಿ ದೊರೆತಿಲ್ಲ. ಮಳೆ ಪೂರ್ಣವಾಗಿ ನಿಂತ ನಂತರ ನಿಖರವಾದ ಮಾಹಿತಿಯನ್ನು ಸರಕಾರಕ್ಕೆ ಕಳುಹಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ನಂದೀಶ್ ತಿಳಿಸಿದ್ದಾರೆ.

35 ಕುಟುಂಬ ಸ್ಥಳಾಂತರ

ಪೆÇನ್ನಂಪೇಟೆ: ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸುರಿದ ಭಾರೀ ಗಾಳಿ ಮಳೆಯ ರಭಸಕ್ಕೆ ಹೈಸೊಡ್ಲೂರುವಿನ ಕಾಲೋನಿಯ ಟೆಂಟ್‍ಗಳಿಗೆ ಹಾನಿಯಾಗಿದ್ದು, ತಹಶೀಲ್ದಾರ್ ಅವರ ಆದೇಶದ ಮೇರೆಗೆ ಕಾಲೋನಿಯಲ್ಲಿ ವಾಸವಾಗಿದ್ದ 35 ಕುಟುಂಬಗಳ 112 ಜನರನ್ನು ಹುದಿಕೇರಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರಿಗೆ ಮೂಲಭೂತ ಸೌಕರ್ಯಗಳನು ಒದಗಿಸಲಾಗಿದೆ ಹಾಗೂ ಟೆಂಟ್ ಕಟ್ಟಿಕೊಳ್ಳಲು ಟಾರ್ಪಲ್‍ಗಳನ್ನು ನೀಡಲಾಗಿದೆ. ಈ ಸಂದರ್ಭ ಕಂದಾಯ ಅಧಿಕಾರಿ ನಿಶಾನ್, ಗ್ರಾಮ ಲೆಕ್ಕಿಗರಾದ ಷರೀಫ್ ಹಾಗೂ ಸಿಬ್ಬಂದಿವರ್ಗದವರು ಇದ್ದರು.

ಅಧಿಕಾರಿಗಳಿಂದ ಪರಿಶೀಲನೆ

ಸಿದ್ದಾಪುರ: ಕಳೆದ ಕೆಲವು ದಿನಗಳಿಂದ ಸುರಿದ ಮಹಾಮಳೆಗೆ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಅಪಾಯದಿಂದ ಹರಿದು ಪ್ರವಾಹಕ್ಕೆ ಸಿಲುಕಿ ಕರಡಿಗೋಡು ಭಾಗದಲ್ಲಿ 50ಕ್ಕೂ ಅಧಿಕ ಮನೆಗಳು ಜಲಾವೃತವಾಗಿ 15ಕ್ಕೂ ಅಧಿಕ ಮನೆಗಳು ಮುಳುಗಡೆ ಗೊಂಡಿರುತ್ತದೆ. ಕೆಲವು ಮನೆಗಳ ಗೋಡೆಗಳು ಕುಸಿದು ಬೀಳುವ ಹಂತದಲ್ಲಿದೆ. ಪ್ರವಾಹದ ನೀರು ಇಳಿಕೆ ಆಗುತ್ತಿದ್ದಂತೆ ನದಿತೀರದ ನಿವಾಸಿಗಳಿಗೆ ಮತ್ತಷ್ಟು ಸಮಸ್ಯೆಗಳು ಎದುರಾಗುತ್ತಿದೆ.

ಬಹುತೇಕ ಮನೆಗಳಲ್ಲಿ ಮಳೆಗಾಲಕ್ಕೆ ಬಳಸಲೆಂದೇ ಮನೆಯಲ್ಲಿ ಶೇಖರಿಸಿಟ್ಟಿದ್ದ ಸೌದೆಗಳು ಹಾಗೂ ಮನೆಗಳಲ್ಲಿ ಸಾಕಿದ ಕೋಳಿಗಳು ನೀರಿನಲ್ಲಿ ಸಿಲುಕಿಕೊಂಡು ನೀರುಪಾಲಾಗಿದೆ. ಕೆಲವು ಮನೆಗಳಲ್ಲಿ ನೀರು ಇಳಿಕೆ ಆಗುತ್ತಿದ್ದಂತೆ ನಿವಾಸಿಗಳು ಮನೆಗೆ ತೆರಳಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಗುಹ್ಯ ಹಾಗೂ ನೆಲ್ಲಿಹುದಿಕೇರಿ ಭಾಗದ ಬೆಟ್ಟದಕಾಡು ಕುಂಬಾರಗುಂಡಿ ಭಾಗದಲ್ಲಿರುವ ನದೀತೀರದಲ್ಲಿ ಹಲವಾರು ಮನೆಗಳು ಜಲಾವೃತಗೊಂಡಿದ್ದು, ಇಲ್ಲಿಯೂ ಕೂಡ ಮನೆಗಳು ಶಿಥಿಲಗೊಂಡಿದ್ದು ಅಪಾಯದ ಸ್ಥಿತಿಯಲ್ಲಿ ಇದೆ. ಸಿದ್ದಾಪುರದ ಗ್ರಾಮ ಪಂಚಾಯಿತಿ ಪಿಡಿಒ ವಿಶ್ವನಾಥ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ನೆಲ್ಲಿಹುದಿಕೇರಿ ಗ್ರಾಮ ಪಂಚಾಯತಿ ಆಡಳಿತಾಧಿಕಾರಿ ಜಯಣ್ಣ ಹಾಗೂ ಪಿಡಿಒ ಅನಿಲ್‍ಕುಮಾರ್ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಅಲ್ಲದೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು. ಕರಡಿಗೋಡು ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರ ಆರೋಗ್ಯವನ್ನು ಮಾಲ್ದಾರೆ ಆರೋಗ್ಯ ಘಟಕದ ವೈದ್ಯರಾದ ಡಾ. ಶೃಂಗಶ್ರೀ ಹಾಗೂ ಆರೋಗ್ಯ ನಿರೀಕ್ಷಕ ಸುದರ್ಶನ್ ಆರೋಗ್ಯ ತಪಾಸಣೆ ಮಾಡಿದರು. ಇದೇ ರೀತಿ ನೆಲ್ಲಿಹುದಿಕೇರಿ ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರನ್ನು ಆರೋಗ್ಯ ಸಿಬ್ಬಂದಿ ಲೀನಾ ಆರೋಗ್ಯ ತಪಾಸಣೆ ಮಾಡಿದರು. -ಚನ್ನನಾಯಕ, ವಾಸು, ಡಿ.ಎಂ. ರಾಜ್‍ಕುಮಾರ್