ಮಡಿಕೇರಿ, ಆ. 10: ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಸುರಿದ ಭಾರೀ ಮಳೆಗೆ ಜಿಲ್ಲೆಯ ಗ್ರಾಮ ಪಟ್ಟಣಗಳು ಜಲಾವೃತಗೊಂಡಿತ್ತಲ್ಲದೇ, ಭೂಕುಸಿತ, ಮನೆ ಹಾನಿಗಳು ಸಂಭವಿಸಿದ್ದವು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಸಮಿತಿ ಹೆಲ್ಪ್ ಡೆಸ್ಕ್ ಮತ್ತು ಕ್ಯೂಟೀಂ ಅಧೀನದಲ್ಲಿ ಜಿಲ್ಲೆಯ ಹಲವೆಡೆ ಕಾರ್ಯಕರ್ತರು ಮಳೆ ಹಾನಿಗೆ ತುತ್ತಾದ ಮನೆಗಳ ದುರಸ್ತಿ, ಅಪಾಯಕಾರಿ ಸ್ಥಳಗಳಿಂದ ನಿವಾಸಿಗಳನ್ನು ಸ್ಥಳಾಂತರಿಸುವುದು, ಜಲಾವೃತಗೊಂಡಿದ್ದ ಧಾರ್ಮಿಕ ಸ್ಥಳಗಳು, ವಿದ್ಯಾಸಂಸ್ಥೆಗಳು, ಮನೆಗಳ ಶುಚೀಕರಣ ಮುಂತಾದ ಕಾರ್ಯಾಚರಣೆ ನಡೆಸಿದರು.
ಜಿಲ್ಲೆಯಲ್ಲಿ ಭಾರೀ ಮಳೆಗೆ ಗಾಳಿಗೆ ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈ ಸಂದರ್ಭ ಎಸ್ಸೆಸ್ಸೆಫ್ ಅಯ್ಯಂಗೇರಿ ಯೂನಿಟ್ ವತಿಯಿಂದ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಮಳೆಗೆ ಜಲಾವೃತಗೊಂಡಿದ್ದ ಕೊಟ್ಟಮುಡಿಯ ಮರ್ಕಝ್ ವಿದ್ಯಾಸಂಸ್ಥೆಯ ಮಸೀದಿ, ಶಾಲಾ, ಕಾಲೇಜು ಕಟ್ಟಡಗಳನ್ನು, ಮನೆಗಳನ್ನು ಎಸ್ಸೆಸ್ಸೆಫ್ ಕೊಟ್ಟಮುಡಿ ಶಾಖೆಯ ಕಾರ್ಯಕರ್ತರು ಸ್ವಚ್ಛಗೊಳಿಸಿದರು.
ಜಲಾವೃತಗೊಂಡಿದ ಚೆರಿಯಪರಂಬು ಮಸ್ಜಿದ್, ಮದರಸವನ್ನು ಎಸ್ಸೆಸ್ಸೆಫ್ ಚೆರಿಯಪರಂಬು ಶಾಖೆಯ ಕಾರ್ಯಕರ್ತರು ಸ್ವಚ್ಛಗೊಳಿಸಿದರು. ಎಮ್ಮೆಮಾಡುವಿನ ಹಲವು ಮನೆಗಳು ಹಾನಿಗೊಳಗಾಗಿದ್ದು, ಆ ಮನೆಗಳನ್ನು ಸರಿಪಡಿಸಲು ಎಸ್ಸೆಸ್ಸೆಫ್ ಎಮ್ಮೆಮ್ಮಾಡು ಶಾಖೆಯ ಕಾರ್ಯಕರ್ತರು ಧಾವಿಸಿದ್ದರು. ಹಲವು ಮನೆಗಳ ಮೇಲ್ಛಾವಣೆಗಳನ್ನು ಸರಿಪಡಿಸಿಕೊಟ್ಟರು. ಸಂಪೂರ್ಣ ಹಾನಿಗೊಳಗಾಗಿದ್ದ ಮನೆಯ ಶೀಟ್‍ಗಳನ್ನು ಬದಲಾಯಿಸಿ ಹೊಸ ಶೀಟ್‍ಗಳನ್ನು ಹಾಕಿ ಸರಿಪಡಿಸಿದರು. ಕೊಂಡಂಗೇರಿಯ ಜಲಾವೃತ ಪ್ರದೇಶದ ಮನೆಗಳನ್ನು ಎಸ್ಸೆಸ್ಸೆಫ್ ಕೊಂಡಂಗೇರಿ ಶಾಖೆಯ ಕಾರ್ಯಕರ್ತರು ಸ್ವಚ್ಛಗೊಳಿಸಿದರು.
ಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಸಮಿತಿ ಹೆಲ್ಪ್ ಡೆಸ್ಕ್ ಜಿಲ್ಲೆಯ ಹಲವು ಭಾಗಗಳಲ್ಲಿ ಕಾರ್ಯಕರ್ತರನ್ನು ಸಜ್ಜುಗೊಳಿಸಿದೆ. ಈಗಾಗಲೇ ಹಲವು ಪ್ರಳಯಭಾದಿತ ಪ್ರದೇಶಗಳಲ್ಲಿ ಕಾರ್ಯಾಚರಣೆಗಿಳಿದಿದೆ. ಅದಲ್ಲದೇ ಕೊಡಗಿನ ಮೂರು ತಾಲೂಕಿನಲ್ಲಿಯೂ ಹೆಲ್ಪ್‍ಲೈನ್ ಪ್ರಾರಂಭಿಸಿದ್ದು, ಸಂದಿಗ್ಧ ಪರಿಸ್ಥಿತಿಯಲ್ಲಿ ಧರ್ಮ, ಜಾತಿ ಭೇದ, ಭಾವವಿಲ್ಲದೆ ಎಲ್ಲರೂ ಸದುಪಯೋಗಪಡಿಸಿಕೊಳ್ಳುವಂತೆ ಎಸ್ಸೆಸ್ಸೆಫ್ ಜಿಲ್ಲಾ ಸಮಿತಿ ಕೋರಿದೆ.