ಮಡಿಕೇರಿ, ಆ. 10: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಟಿ.ಕೆ. ಭವಾನಿ ಅವರಿಗೆ ದಿನಬಳಕೆಯ ದಿನಸಿ ಸಾಮಗ್ರಿಗಳನ್ನು ಒದಗಿಸಲಾಯಿತು. ವೀರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದ ವಿದ್ಯಾರ್ಥಿನಿಯಾದ ಟಿ.ಕೆ. ಭವಾನಿ ಅವರು ಬಹಳ ಕಷ್ಟದಿಂದ ಜೀವನವನ್ನು ನಿರ್ವಹಣೆ ಮಾಡುತ್ತಿದ್ದರು. ಆದರೂ ತನ್ನ ಕಷ್ಟಗಳನ್ನು ಲೆಕ್ಕಿಸದೆ ಈಕೆ ಓದುವ ಛಲದಿಂದ ಪಿ.ಯು.ಸಿ.ಯಲ್ಲಿ ಉತ್ತಮ ಅಂಕ ಗಳಿಸಿದ್ದಳು. ಈ ಕುರಿತು ಪತ್ರಿಕಾ ವರದಿ ಪ್ರಕಟವಾಗಿತ್ತು. ವಿಚಾರ ಅರಿತ ದಲಿತ ಸಂಘರ್ಷ ಸಮಿತಿಯು, ಜಿಲ್ಲಾ ಸಂಚಾಲಕರ ಸಮ್ಮುಖದಲ್ಲಿ, ಸಂಘಟನೆಯ ಸದಸ್ಯರೊಡನೆ ಭವಾನಿಯ ಮನೆಗೆ ಭೇಟಿ ನೀಡಿ ದಿನಸಿ ಪದಾರ್ಥಗಳನ್ನು ನೀಡಿದರು. ಆಕೆಗೆ ಯಾವುದೇ ನೆರವು ಬೇಕಿದ್ದರೂ ಸಂಘಟನೆ ಒದಗಿಸುವುದಾಗಿ ಭರವಸೆಯನ್ನು ಸಂಘಟನೆಯ ಸದಸ್ಯರು ನೀಡಿದರು.
ಡಿ.ಎಸ್.ಎಸ್.ನ ವಿಭಾಗೀಯ ಸಂಚಾಲಕ ಎನ್. ವೀರಭದ್ರಯ್ಯ, ಜಿಲ್ಲಾ ಸಂಚಾಲಕ ದಿವಾಕರ್ ಹೆಚ್.ಎಲ್, ತಾಲೂಕು ಸಂಚಾಲಕ ದೀಪಕ್ ಎ.ಪಿ, ಎಲ್ಐಸಿ ಅಭಿವೃದ್ಧಿ ಅಧಿಕಾರಿ ಸೋಮೇಶ್, ಖಲೀಲ್, ಸಿದ್ದೇಶ್, ಮಾದೇವ್ ಹಾಗೂ ಇತರರು ಹಾಜರಿದ್ದರು.
-ವರದಿ : ಚಂದನ್ ನಂದರಬೆಟ್ಟು