ಕಣಿವೆ, ಆ. 9: ಕಳೆದ ನಾಲ್ಕು ದಿನಗಳ ಕಾಲ ಕಾವೇರಿ ನದಿಯಿಂದ ಉಂಟಾದ ಪ್ರವಾಹಕ್ಕೆ ಸಿಲುಕಿದ ಮನೆಗಳೆಲ್ಲಾ ಜಲಾವೃತಗೊಂಡಿದ್ದವು. ಆದರೆ ಮಳೆ ಇದೀಗ ಕ್ಷೀಣಿಸಿದ್ದರಿಂದ ಪ್ರವಾಹವೂ ಇಳಿಮುಖಗೊಳ್ಳುತ್ತಿದೆ.
ಇದರಿಂದಾಗಿ ನಿವಾಸಿಗಳು ಒಂದಷ್ಟು ನಿಟ್ಟುಸಿರು ಬಿಟ್ಟಿದ್ದು, ಪ್ರವಾಹದ ನೀರು ಇಳಿಕೆಯಾದ ಮನೆಗಳಲ್ಲಿ ಉಳಿಕೆಯಾಗಿದ್ದ ಮಣ್ಣು, ಕಸ-ಕಡ್ಡಿ, ಎರೆಹುಳು ಮೊದಲಾದ ಜಲಚರಗಳನ್ನು ತೆರವುಗೊಳಿಸುವಲ್ಲಿ ನಿವಾಸಿಗಳು ತೊಡಗಿಸಿಕೊಂಡ ಚಿತ್ರಣ ಭಾನುವಾರ ನದಿಯಂಚಿನ ಕೆಲವು ಬಡಾವಣೆಗಳಲ್ಲಿ ಗೋಚರಿಸಿತು. ಮನೆಯೊಳಗಿನ ಪ್ರತಿ ಕೋಣೆಗಳಲ್ಲಿ ತ್ಯಾಜ್ಯ ನೀರಿನಲ್ಲಿ ಮಿಳಿತವಾದ ಮಣ್ಣಿನ ಕಣಗಳು ರಾಶಿ ರಾಶಿಯಾಗಿ ಬಿದ್ದಿದ್ದು ಅದನ್ನು ಸ್ವಚ್ಛಗೊಳಿಸುವುದು ಒಂದೆಡೆಯಾದರೆ, ಶೌಚಾಲಯದ ತ್ಯಾಜ್ಯ ನೀರು ಮನೆಯೆಲ್ಲಾ ವ್ಯಾಪಿಸುವುದರಿಂದ ಅದನ್ನು ಸ್ವಚ್ಛಗೊಳಿಸುವುದು ನಿವಾಸಿಗಳಿಗೆ ಬಹು ದೊಡ್ಡಸಾಹಸವಾಗಿದೆ.
ಅಂಗಡಿಗಳಲ್ಲಿ ಬ್ರಷ್ ಹಾಗೂ ಪೆÇರಕೆಗಳನ್ನು ಖರೀದಿಸಿ ಮುಳುಗಿದ ಮನೆಗಳ ಗೋಡೆ ಹಾಗೂ ಕಾಂಪೌಂಡ್‍ಗಳ ಗೋಡೆಗಳನ್ನು ಉಜ್ಜಿ ತೊಳೆಯುವಲ್ಲಿ ಮಹಿಳೆಯರು ಹಾಗೂ ಮಕ್ಕಳು ತೊಡಗಿಸಿಕೊಂಡಿದ್ದಾರೆ. ಮುಳ್ಳುಸೋಗೆಯ ಕುವೆಂಪು ಬಡಾವಣೆಯಲ್ಲಿ ಬಹುತೇಕ ನೌಕರರು ವಾಸವಿರುವುದರಿಂದ ಮುಳುಗಡೆ ಗೊಂಡ ಮನೆಗಳ ಬಹುತೇಕ ನೌಕರರು ಸ್ವಚ್ಛತೆಯಲ್ಲಿ ತೊಡಗಿಸಿ ಕೊಂಡಿದ್ದಾರೆ.
ಇನ್ನು ಕೆಲವು ಮನೆಗಳಲ್ಲಿ ನೆಂಟರಿಷ್ಟರು, ಸ್ನೇಹಿತರು ಕೂಡ ಸೇರಿಕೊಂಡು ಸ್ವಚ್ಛ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಕಾವೇರಿ ನೆರೆ ಬರುವ ಮುನ್ನಾ ದಿನ ಕುವೆಂಪು ಬಡಾವಣೆ ನಿವಾಸಿ ನಿವೃತ್ತ ಯೋಧ ಹವಾಲ್ದಾರ್ ಜನಾರ್ಧನ್ ಬಡಾವಣೆಯ ಪ್ರತಿ ಮನೆಗಳಿಗೂ ತೆರಳಿ ಪ್ರವಾಹದ ಬಗ್ಗೆ ಮಾಹಿತಿ ನೀಡಿ ಮನೆಗಳ ಸಾಮಾನುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ನಿವಾಸಿಗಳು ತೆರಳುವಂತೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ನೆರೆ ಬಂದು ಇಳಿದ ಬಡಾವಣೆಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಸ್ಥಳೀಯ ಪಂಚಾಯತಿ ವತಿಯಿಂದ ಅಗತ್ಯ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎಸ್. ರಾಜಶೇಖರ್ ತಿಳಿಸಿದ್ದಾರೆ. ಪ್ರತೀ ವರ್ಷವೂ ಮನೆಗಳ ಗೋಡೆಗಳು ನೀರು ಕುಡಿದು ಹಾಳಾಗುತ್ತಿವೆ. ಇನ್ನು ಮರದ ಕಿಟಕಿ ಬಾಗಿಲು ಹಾಗೂ ಪೀಠೋಪಕರಣ ಗಳಂತು ಹೇಳತೀರದ್ದು ಎಂದು ಇಲ್ಲಿನ ನಿವಾಸಿ ಪಟ್ಟಂದಿ ಬೀನಾ ಸೀತಾರಾಂ ಹೇಳುತ್ತಾರೆ. ಒಟ್ಟಾರೆ ಈಗ ನೆರೆ ಬಂದು ಇಳಿದದ್ದಾಯಿತು. ಇಲ್ಲಿನ ನಿವಾಸಿಗಳಲ್ಲಿ ಕಳೆದ ಜೂನ್ ತಿಂಗಳಿಂದಲೂ ಮನೆ ಮಾಡಿದ್ದ ಆಗಸ್ಟ್ ಆತಂಕವೂ ದೂರ ಸರಿಯಿತು. ಮುಂದಿನದನ್ನು ತಾಯಿ ಕಾವೇರಿಯೇ ಕಾಪಾಡಬೇಕು ಅಷ್ಟೇ. -ಮೂರ್ತಿ