ಸಿದ್ದಾಪುರ, ಆ. 8: ನದಿತೀರದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳಬೇಕೆಂದು ಶಾಸಕ ಅಪ್ಪಚ್ಚು ರಂಜನ್ ಮನವಿ ಮಾಡಿಕೊಂಡಿದ್ದಾರೆ. ನೆಲ್ಲಿಹುದಿಕೇರಿ ಗ್ರಾಮದ ಪ್ರವಾಹ ಪೀಡಿತ ಪ್ರದೇಶಕ್ಕೆ ಹಾಗೂ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಬಳಿ ಮಾಹಿತಿ ಪಡೆದುಕೊಂಡರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು; ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ತೀರದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತಿಳಿಸಿದರು. ಕಳೆದ ಬಾರಿಯ ಪ್ರವಾಹಕ್ಕೆ ಸಿಲುಕಿ ನದಿತೀರದ ಮನೆಗಳು ನೆಲಸಮಗೊಂಡಿವೆ. ಹಲವಾರು ಮನೆಗಳು ಹಾನಿಗೊಳಗಾಗಿತ್ತು. ಈ ಹಿನ್ನೆಲೆಯಲ್ಲಿ ಸರಕಾರದ ವತಿಯಿಂದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈಗಾಗಲೇ ಜಾಗವನ್ನು ಗುರುತಿಸಿ ಫಲಾನುಭವಿಗಳನ್ನು ಆಯ್ಕೆ ಗೊಳಿಸಲಾಗಿದೆ, ಮಳೆಗಾಲ ಮುಗಿದ ಬಳಿಕ ತ್ವರಿತಗತಿಯಲ್ಲಿ ಕಾಮಗಾರಿ ಗಳನ್ನು ಪ್ರಾರಂಭಿಸಿ ಸರಕಾರದಿಂದ ಪುನರ್ವಸತಿಗೆ ರೂ. 5ಲಕ್ಷ ನೀಡಲಾಗುವುದೆಂದು ಮಾಹಿತಿ ನೀಡಿದರು.

ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಕೇಂದ್ರದಲ್ಲಿ ಆಸರೆ ಪಡೆದಿರುವ ಕುಟುಂಬಗಳಿಗೆ ಪಡಿತರ ಸಾಮಗ್ರಿಗಳನ್ನು ಒದಗಿಸಿ ಕೊಡಲಾಗುವುದು ಎಂದು ಹೇಳಿದರು. ಪರಿಹಾರ ಕೇಂದ್ರಕ್ಕೆ ಭೇಟಿ ನೀಡುವ ಮುನ್ನ ಅತ್ತಿಮಂಗಲದಿಂದ ಬರಡಿ ಗ್ರಾಮಕ್ಕೆ ತೆರಳುವ ರಸ್ತೆ ವಿವಾದದ ಬಗ್ಗೆ ಖಾಸಗಿ ತೋಟದ ಮಾಲೀಕರೊಂದಿಗೆ ಮಾತುಕತೆ ನಡೆಸಿದರು. ಮುಚ್ಚಿರುವ ರಸ್ತೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಅಪ್ಪಚ್ಚು ರಂಜನ್ ರಸ್ತೆ ವಿವಾದದ ಬಗ್ಗೆ ಕಾಫಿ ತೋಟದ ಮಾಲೀಕರೊಂದಿಗೆ ಚರ್ಚಿಸಲಾಗಿದೆ, ರಸ್ತೆ ಸಮಸ್ಯೆಯನ್ನು ಸೌಹಾರ್ದತೆ ಯಿಂದ ಬಗೆಹರಿಸುವುದಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು, ತಾಲೂಕು ಕಾರ್ಯನಿರ್ವಹಣಾಧಿಕಾರಿ ಸುನಿಲ್ ಕುಮಾರ್, ಕುಶಾಲನಗರ ಹೋಬಳಿ ಕಂದಾಯ ಪರಿವೀಕ್ಷಕ ಮಧುಸೂದನ್, ಗ್ರಾಮಲೆಕ್ಕಿಗ ಸಂತೋಷ್, ಪಿಡಿಒ ಅನಿಲ್‍ಕುಮಾರ್, ಜಿಲ್ಲಾ ಬಿಜೆಪಿ ಮುಖಂಡರುಗಳಾದ ವಿ.ಕೆ. ಲೋಕೇಶ್, ಪಿ.ಸಿ. ಅಚ್ಚಯ್ಯ, ಟಿ.ಸಿ. ಅಶೋಕ್, ವಸಂತಕುಮಾರ್ ಹೊಸಮನೆ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳು, ಇನ್ನಿತರರು ಹಾಜರಿದ್ದರು.