*ಕೊಡ್ಲಿಪೇಟೆ, ಆ. 8: ಕೊಡ್ಲಿಪೇಟೆ ಸಮೀಪದ ಕಲ್ಲಾರೆ ಗ್ರಾಮದಲ್ಲಿ ಮನೆಗೆ ನುಗ್ಗಿ ನಗದು ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕಲ್ಲಾರೆ ಗ್ರಾಮದ ಬಷೀರ್ (ಸೋಫ ಬಾಬು) ಎಂಬವರ ಮನೆಯ ಮೇಲ್ಛಾವಣಿಯ ಹೆಂಚು ತೆಗೆದು ಒಳ ನುಗ್ಗಿ ನಗದು ಕಳ್ಳತನ ಮಾಡಲಾಗಿದೆ.
ಬಷೀರ್ ಅವರು ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದರಿಂದ ಮನೆಯಲ್ಲಿ ಯಾರೂ ಇರಲಿಲ್ಲ. ಈ ಸಮಯ ನೋಡಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.
ಮನೆಯ ಹೆಂಚು ತೆಗೆದು ಒಳನುಗ್ಗಿರುವ ಕಳ್ಳರು, ಬೆಡ್ ರೂಂ ನಲ್ಲಿದ್ದ ಗಾಡ್ರೇಜ್ ಬೀರು ತೆಗೆದು ಐವತ್ತು ಸಾವಿರ ನಗದು ಕಳವು ಮಾಡಿ, ಒಳಗಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.
ಮನೆ ಮಾಲೀಕ ಬಷೀರ್ ಅವರು ಶನಿವಾರಸಂತೆ ಠಾಣೆಗೆ ಈ ಬಗ್ಗೆ ದೂರು ನೀಡಿದ ಮೇರೆ, ಮಡಿಕೇರಿಯಿಂದ ಆಗಮಿಸಿದ ಬೆರಳಚ್ಚು ತಜ್ಞರ ತಂಡ ಮತ್ತು ಶ್ವಾನದಳ ಪರಿಶೀಲನೆ ನಡೆಸಿತು.
ಸ್ಥಳಕ್ಕೆ ಸೋಮವಾರಪೇಟೆ ಪೆÇಲೀಸ್ ವೃತ್ತ ನಿರೀಕ್ಷಕ ನಂಜುಂಡೇ ಗೌಡ, ಶನಿವಾರಸಂತೆ ಠಾಣಾಧಿಕಾರಿ ದೇವರಾಜ್, ಸಿಬ್ಬಂದಿಗಳಾದ ಲೋಕೇಶ್, ವಿನಯ್, ಕೊಡ್ಲಿಪೇಟೆ ಉಪ ಠಾಣೆಯ ಮುಖ್ಯಪೇದೆ ಡಿಂಪಲ್ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಕಾರ್ಯೋನ್ಮುಖರಾಗಿದ್ದಾರೆ.