*ಸಿದ್ದಾಪುರ, ಆ. 7 : ಮಹಾಮಳೆಯಿಂದ ವಾಲ್ನೂರು ತ್ಯಾಗತ್ತೂರು ಗ್ರಾಮ ವ್ಯಾಪ್ತಿಯಲ್ಲಿ ಅನಾಹುತಗಳು ಸಂಭವಿಸುತ್ತಲೇ ಇದ್ದು, ಇಂದು ಸುರಿದ ಧಾರಾಕಾರ ಮಳೆಗೆ ನೂರಾರು ಎಕರೆ ಕಾಫಿ ತೋಟ ಮತ್ತು ಗದ್ದೆಗಳು ಮುಳುಗಡೆಯಾಗಿವೆ.

ಕಳೆದ ಎರಡು ವರ್ಷಗಳಿಂದ ಈ ಪ್ರದೇಶ ಮುಳುಗಡೆಯಾಗುತ್ತಿದ್ದು, ಪ್ರಸ್ತುತ ವರ್ಷ ಏನೂ ಆಗಲಾರದು ಎನ್ನುವ ವಿಶ್ವಾಸದಲ್ಲಿ ನಷ್ಟದ ನಡುವೆಯೇ ಬೆಳೆಗಾರರು ತೋಟಕ್ಕೆ ಸಾಕಷ್ಟು ಖರ್ಚು ಮಾಡಿದ್ದರು. ಆದರೆ ಈಗ ಕಳೆದ ವರ್ಷಕ್ಕಿಂತ ಹೆಚ್ಚು ಪ್ರವಾಹದ ನೀರು ಆವರಿಸಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸುಮಾರು 30 ಎಕರೆಯಷ್ಟು ಕಾಫಿ ತೋಟವನ್ನು ಕಳೆದುಕೊಂಡಿರುವ ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ಮಾಜಿ ಅಧ್ಯಕ್ಷ ಭುವನೇಂದ್ರ ಅವರು ನಷ್ಟದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಕೇವಲ ಮನೆ ಕಳೆದುಕೊಂಡವರಿಗೆ ಮಾತ್ರ ಪರಿಹಾರ ನೀಡದೆ ಕೃಷಿ ಮತ್ತು ತೋಟಗಾರಿಕೆಯನ್ನೇ ಬದುಕಾಗಿಸಿ ಕೊಂಡವರಿಗೂ ತುರ್ತು ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಬೆಳೆಗಾರರ ಕಷ್ಟ, ನಷ್ಟಕ್ಕೆ ಸರ್ಕಾರ ಮೊದಲು ಸ್ಪಂದಿಸಲಿ ಎಂದು ಹೇಳಿದ್ದಾರೆ.

ಕಳೆದ ವರ್ಷ ನಷ್ಟ ಅನುಭವಿಸಿದ ಸಾಕಷ್ಟು ಬೆಳೆಗಾರರಿಗೆ ಇಲ್ಲಿಯವರೆಗೆ ಪರಿಹಾರ ಸಿಗದೆ ಇರುವುದನ್ನು ಇಲ್ಲಿ ಸ್ಮರಿಸಿಕೊಳ್ಳ ಬಹುದಾಗಿದೆ.

-ಸುಧಿ