ಮಡಿಕೇರಿ, ಆ.7: ಜಿಲ್ಲೆಯಲ್ಲಿನ ಪ್ರವಾಹ ಪರಿಸ್ಥಿತಿ ಎದುರಿಸಲು ಅಗ್ನಿಶಾಮಕ ಇಲಾಖೆ ಸಂಪೂರ್ಣ ಸಜ್ಜು ಗೊಂಡಿದೆ ಎಂದು ಮೈಸೂರು ಪ್ರಾಂತ್ಯದ ಅಗ್ನಿಶಾಮಕ ಅಧಿಕಾರಿ ಸಿ. ಗುರುಲಿಂಗಯ್ಯ ಅವರು ತಿಳಿಸಿದ್ದಾರೆ.

ಭಾಗಮಂಡಲದಲ್ಲಿ ಮಾತನಾಡಿ ಪ್ರವಾಹ ಪರಿಸ್ಥಿತಿ ಎದುರಿಸುವ ಸಂಬಂಧ ಅವರು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಕಳೆದ 4-5 ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿನ ನದಿ ಪಾತ್ರದ ಭಾಗದಲ್ಲಿ ಮತ್ತು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸು ವುದು ಮತ್ತು ಪ್ರವಾಹ ಪರಿಸ್ಥಿತಿ ನಿರ್ವಹಿಸಲು ಅಗ್ನಿಶಾಮಕ ಇಲಾಖೆ ಸಂಪೂರ್ಣ ಸಜ್ಜಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 60 ಜನರ ತಂಡವಿದ್ದು, ಮಂಗಳೂರಿನಿಂದ 20 ಮತ್ತು ಬೆಂಗಳೂರಿನಿಂದ 23 ಜನರ ಹೆಚ್ಚುವರಿ ಎಸ್‍ಡಿಆರ್ ಎಫ್ ತಂಡ ಕರೆಸಿಕೊಳ್ಳಲಾಗಿದೆ. ಅಲ್ಲದೆ ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮತ್ತು ಮಡಿಕೇರಿ, ಗೋಣಿಕೊಪ್ಪ, ಕುಶಾಲನಗರ ಜಿಲ್ಲಾ ಅಗ್ನಿಶಾಮಕ ಸಿಬ್ಬಂದಿಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಅವಶ್ಯ ಸಂದರ್ಭ ಒದಗಿ ಬಂದಲ್ಲಿ ಈಗಾಗಲೇ ಹೆಚ್ಚಿನ ತಂಡವು ಸಿದ್ದವಿದೆ. ಈಜುವುದು ಮತ್ತು ಪ್ರವಾಹ ನಿರ್ವಹಣೆಯಲ್ಲಿ ಸಿಬ್ಬಂದಿಗಳು ತರಬೇತಿ ಪಡೆದಿದ್ದು, ಒಡಿಸ್ಸಾದಲ್ಲಿ ಈ ತಂಡಕ್ಕೆ ಕಠಿಣ ತರಬೇತಿ ನೀಡಲಾಗಿದೆ ಎಂದು ಅವರು ತಿಳಿಸಿದರು. ಸಕಲ ರಕ್ಷಣಾ ಸಲಕರಣೆಗಳೊಂದಿಗೆ 24 ಗಂಟೆಗಳ ಕಾಲವು ಅಗ್ನಿಶಾಮಕ ತಂಡ ಸಿದ್ಧವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.