ಕುಶಾಲನಗರ, ಆ. 7: ಕೊಡಗು ಜಿಲ್ಲೆಯ ಪ್ರಸ್ತುತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ರಾಜ್ಯ ಸರಕಾರದ ಮೂಲಕ ವಿಶೇಷ ಕ್ರಿಯಾಯೋಜನೆ ರೂಪಿಸಲಾಗುವುದು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಅವರು ಕುಶಾಲನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ ಕಳೆದ ಮೂರು ವರ್ಷಗಳಿಂದ ಕಾವೇರಿ ನದಿ ಪ್ರವಾಹದಿಂದ ತಗ್ಗು ಪ್ರದೇಶದ ಜನತೆ ನಿರಂತರ ಸಮಸ್ಯೆಗೆ ಒಳಗಾಗಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನದಿ ನಿರ್ವಹಣೆ ಕಾಮಗಾರಿಗೆ ಯೋಜನೆ ರೂಪಿಸಲಾಗುವುದು ಎಂದರಲ್ಲದೆ; ಕುಶಾಲನಗರದಲ್ಲಿ ಈ ಬಾರಿ ನಡೆದ ನದಿ ಕಾಮಗಾರಿಯಿಂದ ದಿಢೀರ್ ಪ್ರವಾಹ ತಪ್ಪಿದಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನದಿ ತಟಗಳಲ್ಲಿ ಬಡಾವಣೆ ನಿರ್ಮಾಣಕ್ಕೆ ಯಾವುದೇ ರೀತಿಯ ಅವಕಾಶ ಕಲ್ಪಿಸುವುದಿಲ್ಲ. ನಿಯಮಬಾಹಿರವಾಗಿ ಬಡಾವಣೆಗಳು ನಿರ್ಮಾಣಗೊಂಡಲ್ಲಿ ಅಧಿಕಾರಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು. ನದಿ ತಟದಿಂದ 100 ಮೀ ಅಂತರದಲ್ಲಿ ಮನೆಗಳ ನಿರ್ಮಾಣ ಮಾಡಿದಲ್ಲಿ ಯಾವುದೇ ಸಮಸ್ಯೆಗಳು ಉಂಟಾಗಲು ಸಾಧ್ಯವಿಲ್ಲ ಎಂದ ಸಚಿವರು ಮುಂದಿನ ದಿನಗಳಲ್ಲಿ ಕುಶಾಲನಗರ ಸೇರಿದಂತೆ ಅಗತ್ಯವುಳ್ಳ ಪ್ರದೇಶಗಳಲ್ಲಿ ಕಾವೇರಿ ನದಿ ನಿರ್ವಹಣೆಗಾಗಿ ಮತ್ತು ಅಭಿವೃದ್ಧಿ ಕಾಮಗಾರಿಗಾಗಿ ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು. ಈ ಬಗ್ಗೆ ಈಗಾಗಲೇ ಕಾವೇರಿ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಈ ಸಂದರ್ಭ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಇದ್ದರು.