ಛೀ! ಹೀಗಾಗಬಾರದಿತ್ತು, ಏಕೆ ಹೀಗಾಯ್ತು? ಎಂದು ಬೋರ ಹಪಹಪಿಸುತಿದ್ದ. ಕಾಳಿ ಕೇಳಿದಳು: ಏನ್ ಬೋರ ಹೀಗೆ ಚಡಪಡಿಸುತ್ತಿದ್ದೀಯಾ? ಬೋರ ದುಃಖದ ಕಟ್ಟ್ಟೆಯೊಡೆದು ನುಡಿದ: ನಮ್ಮನ್ನು ಸಲಹುತ್ತಿರುವ ಜಲದೇವತೆಯ ತವರಿನಲ್ಲಿ ಅವಳಿಗೆ ನಿತ್ಯ ಆರತಿ ಎತ್ತುವ ಕುಟುಂಬ ವರುಣಾರ್ಭಟದಲ್ಲಿ ಬ್ರಹ್ಮಗಿರಿಯ ಭೋರ್ಗರೆತದಲ್ಲಿ ಅವಶೇಷವೂ ಉಳಿಯದಂತಾದರಲ್ಲ; ಯಾರಿಗೂ ಇಂತಹ ಅಂತ್ಯ ಬರದಿರಲಿ ಎಂದು ಮಮ್ಮಲ ಮರುಗಿದ. ಅಷ್ಟರಲ್ಲಿ ಮಧ್ಯೆ ಪ್ರವೇಶಿಸಿದ ಕಾಳ ಕೇಳಿದ: ಏಕಾಯಿತು ಬೋರ ಇಂತಹ ದುರಂತ? ಬೋರ ಹೇಳಿದ ನೋಡಪ್ಪ ನಾಲ್ಕು ವರ್ಷಗಳ ಹಿಂದೆ ಅರಣ್ಯ ಇಲಾಖೆ ಬೆಟ್ಟ ಕೊರೆದು ಅಲ್ಲಲ್ಲಿ ಬೃಹತ್ ಇಂಗು ಗುಂಡಿ ಅಗೆಯಿತು. ಮರ ಬೆಳೆಸುವ ನೆಪದಲ್ಲಿ ಬ್ರಹ್ಮಗಿರಿಯಲ್ಲಿ ಬಾವಿ ಕೊರೆದಂತೆ ಕೊರೆಯಿತು. ಕಳೆದ ಬಾರಿ ಸರಿಪಡಿಸಲು ಹೋಗಿ ತಡೆಗೋಡೆ ಕಟ್ಟಿ ಅದರ ಸಹಿತ ಮಣ್ಣು ಕುಸಿದು ಈಗ ಮತ್ತೆ ಅನಾಹುತವಾಯಿತು. ಅಷ್ಟರಲ್ಲಿ ಕಾಳಿ ಕೇಳಿದಳು ಇನ್ನೇನೋ ರೆಸಾರ್ಟ್ ಪಸಾರ್ಟ್ ಅಂತನೂ ಹೇಳ್ತಿದ್ದರಲ್ಲಾ ಗುರು? ಬೋರ: ಹೌದು ಕಾಳಿ, ಕಂದಾಯ ಇಲಾಖೆಯ ಒಬ್ಬಾತ ಸರಕಾರಿ ಉದ್ಯೋಗ ಮಾಡುವ ಬದಲು ಅಲ್ಲಿ ಸಂಬಳ ಪಡೆಯುತ್ತ ಇಲ್ಲಿ ಜಲದೇವತೆಯ ಮಡಿಲಿನಲ್ಲಿ ಭೂಮಿಯನ್ನು ಕೊರೆದು, ಜೆಸಿಬಿ ತಂದು ಬೆಟ್ಟ-ಗುಡ್ಡವನ್ನೇ ನೆಲಸಮ ಮಾಡಿದ. ಕಾಳ ಕೇಳಿದ: ನಮ್ಮ ನಾಯಕ್ರೂ, ಆಡಳಿತದವ್ರೂ ಏನ್ಮಾಡ್ತಿದ್ದಾರೆ?
ಬೋರ: “ಅಯ್ಯೋ , ಪಾಪ ಬಡವ, ಸರ್ಕಾರಿ ಸಂಬ್ಳ-ಗಿಂಬ್ಳ ಎಲ್ಲಿ ಸಾಕಾಗುತ್ತೆ? ಬದ್ಕಿಕೊಳ್ಳಿ ಬಿಡಿ!” ಎಂದು ಮಳೆಗಾಲದ ಶೀತಕ್ಕೆ ಬೆಚ್ಗೆ ಹೊದ್ಕೊಂಡು ಮಲಗಿದ್ರಂತೆ! ಕಣ್ಲಾ...
ಕಾಳ: ಇನ್ನೋಂದೇನೋ ಕೇಳ್ದೆ ಬೋರ, ಅಲ್ಲಿ ಕಲ್ಲಿನ ದೇವ್ರನ್ನ ಮಲಗಿಸಿ ಬಿಟ್ಟಾವ್ರಂತೆ. ಬೋರ: ಶಿವ ಶಿವಾ ಮರ್ತೇ ಹೋಗಿತ್ತು ನೋಡು. ಮಹಾನ್ ಲಿಂಗವ ಅಗಸ್ತ್ಯರು ಇಟ್ಟಿದ್ರಂತೆ. ಭಿನ್ನವಾಗಿತ್ತು ಅಂತ ಈ ಹಿಂದೆ ಹೊಸ ದೇವ್ರನ್ನ ಕೂರ್ಸೋವಾಗ ಹಿರಿಯ ತಂತ್ರಿ ಅವರೇ ಹೇಳಿ ಹಳೇ ಶಕ್ತಿಯನ್ನ ಅದರ ಕೆಳಗಿಟ್ಟಿದ್ರಂತೆ, ಮತ್ತೆ ಕವ್ಡೆ ಮಹಿಮೆಯಿಂದ ಹೊಸಬರು ಅದನ್ನ ತೆಗೆದ್ರಂತೆ. ಆಗ ಕೋರ್ಟು ಮಧ್ಯೆ ಬಂದು ‘ಆ ಲಿಂಗ ಎಲ್ಲ್ಲಿತ್ತೋ ಮತ್ತೆ ಅಲ್ಲೇ ಇಡಿ’ ಎಂದು ಛೀಮಾರಿ ಹಾಕ್ತಂತೆ. ಆದ್ರೆ, ಆ ಬಗ್ಗೆ ಕಮಿಟಿ ಮೌನ ವಹಿಸಿತು. ಆ ಮಹಾನ್ ಶಕ್ತಿ ತ್ರಿಶಂಕುವಿನಂತೆ ಈಗ ಹೊರಗೆ ಅನಾಥವಾಗಿ ಇಡಲ್ಪಟ್ಟು ದಾರಿ ಕಾಣದೆ ಉಗ್ರತೆಯಲ್ಲಿದೆ. ಅದರ ಪರಿಣಾಮ ಜಿಲ್ಲೆಗಾಗುತ್ತಿದೆ. ಕಳೆದ ವರ್ಷವೂ ಇದೇ ಹೋಬ್ಳೀಲಿ ಮಳೆ ಆರ್ಭಟದಲ್ಲಿ ಆರು ಮಂದಿ ಪರಂಧಾಮಕ್ಕೆ ಹೋದ್ರು, ಈ ಬಾರಿಯೂ ಐದು ಮಂದಿ ಹೋದ್ರು. ಮುಂದೇನು ಗತಿ ಎನ್ನುವಂತಾಗಿದೆ. ಆಶ್ಚರ್ಯ ಏನ್ ಗೊತ್ತ ಕಾಳ... ಈ ಬಗ್ಗೆ ‘ನೀವೇ ಏನಾದ್ರೂ ಮಾಡೀ’ ಅಂತ ಕಮಿಟಿಯವ್ರು ಈ ಹಿಂದೆ ಆಚಾರ್‍ರಿಗೆ ಒಪ್ಪಿಸಿದ್ರಂತೆ... ಈಗ ಅವ್ರೇ ಇಲ್ಲ. ಮುಂದೆ ‘ಶಾಸಕ್ರೇ ನೀವೇ ಏನಾದ್ರು ಮಾಡೀಂತ’ ಹೇಳೋಣ ಬಾ ಕಾಳ.