ಸುಂಟಿಕೊಪ್ಪ, ಆ. 6: ಇತ್ತೀಚೆಗೆ ಸುಂಟಿಕೊಪ್ಪದ ಆಸುಪಾಸಿನ ತೋಟಗಳಿಂದ ಬೀಟಿ ಮರಗಳು ದಿಢೀರನೆ ನಾಪತ್ತೆಯಾಗುತ್ತಿದ್ದು, ಅರಣ್ಯ ಇಲಾಖೆಗೆ ಮಾಲೀಕರುಗಳು ದೂರು ನೀಡುತ್ತಿಲ್ಲ. ಇಲಾಖೆಯವರು ಅಷ್ಟಾಗಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ!

ಇದಕ್ಕೆ ತಾಜಾ ಉದಾಹರಣೆ ಇತ್ತೀಚೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸುಂಟಿಕೊಪ್ಪದ ಹೃದಯಭಾಗದ ತೋಟವೊಂದರಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದನ್ನು ಕಾಡಿಗೆ ಅಟ್ಟಲು ತೆರಳಿದಾಗ ಅಚ್ಚರಿ ಕಾದಿತ್ತು. ಕಾಡಾನೆಗಳ ಹಿಂಡು ನಿಂತಿದ್ದ ಜಾಗದಲ್ಲಿ ಬೀಟಿ ಮರಗಳನ್ನು ಯಾರೋ ಕಡಿದು ಕೊರಡುಗಳಾಗಿ ಪರಿವರ್ತಿಸಿ ಇಟ್ಟಿದ್ದರು. ಅರಣ್ಯ ಇಲಾಖೆಯವರು ನಂಬರ್ ಹಾಕಿ ದಿಮ್ಮಿಗಳನ್ನು ವಶಪಡಿಸಿಕೊಂಡಿದ್ದರು. ಅಲ್ಲದೆ 2 ದಿನಗಳ ನಂತರ ಬೀಟಿ ಮರದ ಕೊರಡುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವಾಗ ಆನೆಕಾಡು ಬಳಿಯಲ್ಲಿ ಜೀಪ್ ಹಾಗೂ ಮಾಲನ್ನು ವಶಪಡಿಸಿಕೊಂಡಿದ್ದರು. ಆದರೆ ಬೀಟಿ ಮರವು ಕಳ್ಳತನಗೊಂಡಿರುವ ಬಗ್ಗೆ ಪೊಲೀಸರಿಗೆ ಹಾಗೂ ಅರಣ್ಯ ಇಲಾಖೆಗೆ ದೂರು ಸಲ್ಲಿಸಲೇ ಇಲ್ಲ. ಆದರೆ ಇಲ್ಲಿಂದ ಯಾರು ಬೀಟಿ ಮರ ಕಳ್ಳತನ ಮಾಡಿದರು ಎಂಬ ಪ್ರಶ್ನೆ ಉದ್ಭವಿಸಿದೆ.

ಕೇವಲ ಈ ತೋಟದಿಂದ ಮಾತ್ರವಲ್ಲದೆ ಸುಂಟಿಕೊಪ್ಪ ಆಸುಪಾಸಿನ ತೋಟಗಳಿಂದ ಅಕ್ರಮ ಬೀಟಿ ಮರಗಳನ್ನು ಸಾಗಾಟಗೊಳಿಸಲಾಗುತ್ತಿದೆ ಎನ್ನಲಾಗುತ್ತಿದೆ. ಭಾರೀ ಮೌಲ್ಯದ ವಾಹನಗಳಲ್ಲಿ ಸಭ್ಯರ ಸೋಗಿನಲ್ಲಿ ರಾತ್ರಿ ವೇಳೆಯಲ್ಲಿ ಅಕ್ರಮ ಬೀಟಿ ಮರಗಳನ್ನು ಸಾಗಿಸುತ್ತಿರುವ ಬಗ್ಗೆ ಪೊಲೀಸರು ಮತ್ತು ಅರಣ್ಯ ಇಲಾಖೆಯವರಿಗೆ ಸೂಕ್ಷ್ಮತೆಯ ಅರಿವಿದ್ದರೂ ಕಣ್ಣುಮುಚ್ಚಿ ಕುಳಿತಿದ್ದಾರೆ ಎಂಬ ಸಂಶಯವಿದೆ. ಪ್ರಭಾವಿಗಳು ಮತ್ತು ರಾಜಕಾರಣಿಗಳು ಅಕ್ರಮ ಬೀಟಿ ಮರ ಸಾಗಾಟದಲ್ಲಿ ಶಾಮೀಲಾಗಿದ್ದಾರೆ ಎಂಬ ವದಂತಿ ಇದ್ದು, ಅರಣ್ಯ ಇಲಾಖೆ, ಪೊಲೀಸ್ ಅಧಿಕಾರಿಗಳು ಖುದ್ದು ಕಾರ್ಯಾಚರಣೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.