ಮಡಿಕೇರಿ, ಆ. 6: 2018 ಹಾಗೂ 2019ರ ಮಳೆ ಗಾಲದಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಉಂಟಾಗಿ ಸತತ ಎರಡು ವರ್ಷಗಳಲ್ಲೂ ಭಾರೀ ಅನಾಹುತ ಸಂಭವಿಸಿತ್ತು. ಮಾನವ-ಜಾನುವಾರು ಪ್ರಾಣಹಾನಿಗಳು, ಭೂಕುಸಿತ, ಬೆಟ್ಟಕುಸಿತ, ಬರೆಜರಿತ ಮನೆಗಳು ಜಲಾವೃತಗೊಂಡು ನೆಲಸಮಗೊಂಡಿದ್ದಲ್ಲದೆ ಸಾಕಷ್ಟು ಸಾರ್ವಜನಿಕ ಆಸ್ತಿ-ಪಾಸ್ತಿಗಳು ಘಟಿಸಿ ಹೋಗಿದ್ದವು.

ಈ ಆತಂಕದ ನೆನಪಿನ ನಡುವೆ ಈ ಬಾರಿ ಕೊರೊನಾ ಪರಿಸ್ಥಿತಿಯ ತೀವ್ರತೆಯೊಂದಿಗೆ 2020ರ ಮುಂಗಾರು ಮಳೆಯ ಅವಧಿಯೂ ಎದುರಾಯಿತು. ವಾಡಿಕೆಯಂತೆ ಜಿಲ್ಲೆಯಲ್ಲಿ ಜೂನ್ ತಿಂಗಳಿನಿಂದಲೇ ಮಳೆಗಾಲ ಆರಂಭಗೊಳ್ಳುತ್ತದೆಯಾದರೂ ಕೆಲವು ವರ್ಷಗಳಿಂದ ಇದು ಹೀಗೆಯೇ ಎಂದು ಹೇಳಲಾಗುತ್ತಿಲ್ಲ. ಇದೇ ರೀತಿಯಲ್ಲಿ ಜೂನ್-ಜುಲೈ ತಿಂಗಳು ಒಂದು ರೀತಿಯಲ್ಲಿ ಮಳೆಯ ತೀವ್ರತೆ ಕಾಣದೆ ಬಿಸಿಲಿನ ವಾತಾವರಣದೊಂದಿಗೇ ಸರಿದು ಹೋಗಿದ್ದವು.

ಆದರೆ ಆಗಸ್ಟ್ 2ರ ಭಾನುವಾರ ಅಪರಾಹ್ನದ ನಂತರ ಜಿಲ್ಲೆಯ ಚಿತ್ರಣವೇ ಬದಲಾಗಿ ಹೋಯಿತು. ಕೇವಲ ನಾಲ್ಕೇ ದಿನಗಳಲ್ಲಿ ಅದೆಷ್ಟೋ ಮರಗಳು ಧರೆಗುರುಳಿದವು. ವಿದ್ಯುತ್ ಕಂಬ-ಟ್ರಾನ್ಸ್‍ಫಾರ್ಮರ್‍ಗಳು ನೆಲಕಚ್ಚಿದವು. ವಿವಿಧ ರೀತಿಯ ಬೆಳೆಗಳು ಧರಾಶಾಹಿಯಾಗುವುದರೊಂದಿಗೆ ಬಹುತೇಕ ಕಡೆಗಳಲ್ಲಿ ನೀರಿನ ಹರಿವು ಅಧಿಕಗೊಂಡು ಜಲದಿಗ್ಭಂಧನದಂತಹ ಸನ್ನಿವೇಶವೂ ಸೃಷ್ಟಿಗೊಂಡಿತು.

ಕೆಲವಾರು ರಸ್ತೆಗಳು ಜಖಂಗೊಂಡರೆ, ಬರೆ ಜರಿತದಿಂದ ಇನ್ನಷ್ಟು ಅಪಾಯ ಎದುರಾಗುವಂತಾಗಿದೆ. ಹಲವೆಡೆ ನದಿ ಪಾತ್ರಗಳಲ್ಲಿನ ಜಾಗ ಜಲಾವೃತಗೊಳ್ಳುತ್ತಿರುವುದರಿಂದ ಗಂಜಿ ಕೇಂದ್ರಗಳು ಸ್ಥಾಪನೆಯಾಗುತ್ತಿವೆ. ಹಲವೆಡೆ ಬೆಟ್ಟ-ಗುಡ್ಡಗಳು ಕುಸಿತಕ್ಕೊಳಗಾಗುವ ಆತಂಕಕಾರಿ ಸನ್ನಿವೇಶ ನಿರ್ಮಾಣಗೊಂಡಿವೆ.

ಇದು ಮಾತ್ರವಲ್ಲದೆ ವಿದ್ಯುತ್ ವ್ಯತ್ಯಯದಿಂದಾಗಿ ಜಿಲ್ಲೆ ಕಾರ್ಗತ್ತಲಲ್ಲಿ ಮುಳುಗಿದೆ. ಅದರಲ್ಲೂ ದಕ್ಷಿಣ ಕೊಡಗಿನಲ್ಲಿ ಸೋಮವಾರದಿಂದಲೇ ವಿದ್ಯುತ್ ಪೂರೈಕೆ ಇಲ್ಲದಂತಾಗಿದ್ದು, ಹೊರ ಜಗತ್ತಿನ ಕುರಿತ ಯಾವುದೇ ಮಾಹಿತಿಯೂ ಜನತೆಗೆ ಲಭ್ಯ ವಾಗುತ್ತಿಲ್ಲ. ಇವೆಲ್ಲದರ ನಡುವೆ ದೂರವಾಣಿ-ಮೊಬೈಲ್ ಸಂಪರ್ಕ ವಿಲ್ಲದೆ ಪರಸ್ಪರ ಸಂಪರ್ಕವೂ ಸಾಧ್ಯವಾಗುತ್ತಿಲ್ಲ. ಎಲ್ಲೆಡೆ ಮೊಬೈಲ್ ಟವರ್‍ಗಳಿದ್ದರೂ ನೆಟ್‍ವರ್ಕ್ ಇಲ್ಲದೆ ಜನತೆ ಪರದಾಡುತ್ತಿದ್ದಾರೆ.

ಜಿಲ್ಲೆಯಾದ್ಯಂತ ಭಾರೀ ಗಾಳಿಯಿಂದಾಗಿ ರಸ್ತೆಗೆ, ತೋಟಗಳಲ್ಲಿ, ಮನೆಗಳ ಮೇಲೆ ಮರಗಳು ಬೀಳುತ್ತಿರುವುದು ಜನತೆ ಭಯದ ನೆರಳಲ್ಲಿ ಬದುಕು ಸಾಗಿಸುವಂತಾಗಿದೆ. ಅರಣ್ಯ ಇಲಾಖೆ ಸೇರಿದಂತೆ, ಪೊಲೀಸರು, ಕಂದಾಯ ಇಲಾಖೆ ಮತ್ತಿತರ ಇಲಾಖೆಗಳು ಪರಿಸ್ಥಿತಿ ನಿಭಾಯಿಸಲು ಪ್ರಯಾಸಪಡುತ್ತಿದ್ದಾರೆ.

ಒಂದು ರೀತಿಯಲ್ಲಿ ಈ ಬಾರಿ ಆಗಸ್ಟ್ ಆರಂಭದ ತನಕವೂ ಮಳೆ-ಗಾಳಿಯ ತೀವ್ರತೆ ಇಲ್ಲದೆ ನಿರಾಳರಾಗಿದ್ದ ಜನತೆ ಕೇವಲ ನಾಲ್ಕು ದಿನಗಳಲ್ಲಿನ ಪ್ರಕೃತಿಯ ಬದಲಾವಣೆಯಿಂದಾಗಿ ಪರಿತಪಿಸುತ್ತಿದ್ದು, ಇನ್ನೂ ಮಳೆ-ಗಾಳಿ ಮುಂದುವರಿಯುವಂತಹ ಪರಿಸ್ಥಿತಿಯಿಂದ ಭೀತಿಯ ನೆರಳಲ್ಲೇ ದಿನದೂಡುವಂತಾಗಿದೆ.

ದಾರುಣ ಘಟನೆ

ಜಿಲ್ಲೆಯಲ್ಲಿ ಹಲವಾರು ರೀತಿಯ ದುರಂತಗಳು ಸಂಭವಿಸಿದೆಯಾದರೂ ಈ ಬಾರಿ ಪ್ರಾಣಹಾನಿಯಂತಹ ಸನ್ನಿವೇಶ ನಡೆದಿರಲಿಲ್ಲ. ಆದರೆ ತಾ. 5ರ ರಾತ್ರಿಯ ಘಟನೆ ಇಡೀ ಜಿಲ್ಲೆಯನ್ನು ಕಂಗೆಡಿಸಿದ್ದು, ಜನತೆ ದಿಗ್ಭ್ರಮೆಗೊಂಡಿದ್ದಾರೆ. ತಲಕಾವೇರಿಯಲ್ಲಿ ಬ್ರಹ್ಮಗಿರಿ ಬೆಟ್ಟ ಜರಿತದಿಂದ ಕಾವೇರಿಯ ಪ್ರಧಾನ ಅರ್ಚಕ ನಾರಾಯಣಾಚಾರ್ ಸೇರಿದಂತೆ ಅವರ ಕುಟುಂಬ ಸದಸ್ಯರು ನಾಪತ್ತೆಯಾಗಿರುವ ಕರುಣಾಜನಕವಾದ ಭೀಭತ್ಸ ಘಟನೆ 2020ರ ವರ್ಷದ ಕರಾಳತೆಯಾಗಿ ಮಾರ್ಪಟ್ಟಿದೆ. ಈ ವಿಚಾರ ಹೊರ ಜಗತ್ತಿಗೆ ತಿಳಿದು ಬಂದೊಡನೆ ಎಲ್ಲರ ಮನ ಮುದುಡಿದೆ. ಬೇರೆಲ್ಲಾ ಸನ್ನಿವೇಶಗಳನ್ನು ಎದುರಿಸುವಲ್ಲಿ ಮುಂದಾಗಿದ್ದರೂ ಈ ಕಹಿ ಘಟನೆ ಎಲ್ಲರನ್ನು ತಲ್ಲಣಗೊಳಿಸಿದೆ. -ಶಶಿ