ಮಡಿಕೇರಿ, ಆ. 6: ಕಳೆದ ಐದು ದಿನಗಳಿಂದ ಸುರಿದ ಬಿರುಗಾಳಿ ಸಹಿತ ಮಳೆಗೆ ಸಾಕಷ್ಟು ಹಾನಿ ಉಂಟಾಗಿದೆ. ಜಿಲ್ಲೆಯ ಹಲವು ಕಡೆ ರಸ್ತೆಗೆ ಮತ್ತು ವಿದ್ಯುತ್ ಕಂಬಕ್ಕೆ ಮರಗಳು ಬಿದ್ದು ತೆರವುಗೊಳಿಸಿ ಸಾರಿಗೆ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಹಾಗೆಯೇ ಹೆದ್ದಾರಿಗಳಲ್ಲಿ ಮಣ್ಣು ಕುಸಿದಿರುವುದನ್ನು ತೆರವುಗೊಳಿಸಿ, ಸುಗಮ ಸಾರಿಗೆ ಸಂಚಾರಕ್ಕೆ ವ್ಯತ್ಯಯ ಉಂಟಾಗದಂತೆ ಜಿಲ್ಲಾಡಳಿತ ಕ್ರಮವಹಿಸಿದೆ.

ಪ್ರವಾಹ ಪೀಡಿತ ಪ್ರದೇಶಗಳಾದ ಕರಡಿಗೋಡು, ಗುಹ್ಯ, ನೆಲ್ಯಹುದಿಕೇರಿ, ವೀರಾಜಪೇಟೆಯ ನೆಹರು ನಗರ, ಅಯ್ಯಪ್ಪ ಸ್ವಾಮಿ ಬಡಾವಣೆಯ ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಹೀಗೆ ಹಲವು ರಕ್ಷಣಾ ಕಾರ್ಯಗಳಲ್ಲಿ ಜಿಲ್ಲಾಡಳಿತ, ಪೊಲೀಸ್, ಅರಣ್ಯ, ಸೆಸ್ಕ್, ಅಗ್ನಿ ಶಾಮಕ, ಎನ್‍ಡಿಆರ್‍ಎಫ್ ತಂಡಗಳು ಕಾರ್ಯ ಪ್ರವೃತ್ತವಾಗಿವೆ.

ನಾಡಿನ ಜೀವನದಿ ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಉಕ್ಕಿ ಹರಿಯುತ್ತಿವೆ. ಬಲಮುರಿ ಸೇರಿದಂತೆ ಹಲವು ಕಡೆಗಳಲ್ಲಿ ಪ್ರವಾಹ ಉಂಟಾಗಿದೆ. ಮಲ್ಲಳ್ಳಿ, ಅಬ್ಬಿ, ಇರ್ಪು, ಚೇಲಾವರ ಸೇರಿದಂತೆ ಹಲವು ಜಲಪಾತಗಳು ಭೋರ್ಗರೆಯುತ್ತಿವೆ.

ಕುಶಾಲನಗದ ಕುವೆಂಪು ಬಡಾವಣೆ, ಸಾಯಿ ಬಡಾವಣೆಗಳಿಗೆ ನೀರು ನುಗ್ಗಿದ್ದು, ಅಲ್ಲಿನ ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳಾಂತರಿಸಲಾಗಿದೆ.

ಮಡಿಕೇರಿ-ಸೋಮವಾರಪೇಟೆ ರಸ್ತೆ, ಸಂಪಿಗೆಕಟ್ಟೆ, ಪಿಂಟೋಟರ್ನ್ ಬಳಿ ವಿದ್ಯುತ್ ತಂತಿ ಮೇಲೆ ಮರ ಬಿದ್ದಿದ್ದು, ವಿದ್ಯುತ್ ಕಂಬಗಳು ತುಂಡಾಗಿವೆ. ಈ ಪ್ರದೇಶದಲ್ಲಿ ತೆರವು ಕಾರ್ಯ ಪ್ರಗತಿಯಲ್ಲಿದೆ.

ಬೇತ್ರಿಯಲ್ಲಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ. ಮಡಿಕೇರಿ-ಪ್ರಾದೇಶಿಕ ಸಾರಿಗೆ ಕಚೇರಿ ರಸ್ತೆ ಮಾರ್ಗದಲ್ಲಿ ಪೆÇಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡದವರಿಂದ ಮರ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ಎಮ್ಮೆಮಾಡು ಗ್ರಾ.ಪಂ. ವ್ಯಾಪ್ತಿಯ ಮನೆ ಮೇಲೆ ಬುಧವಾರ ರಾತ್ರಿ ಮರ ಬಿದ್ದು ಮನೆಗೆ ಹಾನಿಯಾಗಿದೆ. ಈ ಮನೆಯ ಎಲ್ಲಾ ಸದಸ್ಯರನ್ನು ಬುಧವಾರ ರಾತ್ರಿಯೇ ಅವರ ಸಂಬಂಧಿಕರ ಮನೆಗಳಿಗೆ ಕಳುಹಿಸಲಾಗಿದೆ ಹಾಗೂ ಅವರ ಮನೆಯ ವಸ್ತುಗಳನ್ನು ಪಕ್ಕದ ಮನೆಗೆ ಸಾಗಿಸಲಾಗಿದೆ.

ಗೋಣಿಕೊಪ್ಪ-ಪಾಲಿಬೆಟ್ಟ ಮಾರ್ಗದ ರಸ್ತೆಯಲ್ಲಿ ಬಿದ್ದಿದ್ದ ಮರವನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ. ಮಾದಾಪುರ ಹೊಸತೋಟದ ಬಳಿಯ ಬಸ್ ನಿಲ್ದಾಣದಲ್ಲಿ ಬಿದ್ದಿದ್ದ ಬೃಹತ್ ಮರ ತೆರವುಗೊಳಿಸಲಾಗಿದೆ.

ಎಮ್ಮೆಮಾಡು ಗ್ರಾಮದ ಪಡಿಯಾಣಿ ಭಾಗದ ಕೊಯಮ್ಮ ಅವರ ಮನೆಯು ಕಾವೇರಿ ಹೊಳೆಯ ಹಿನ್ನೀರಿನಲ್ಲಿ ಮುಳುಗಿದೆ. ಮನೆಯ ಎಲ್ಲಾ ಸದಸ್ಯರನ್ನು ಸಂಬಂಧಿಕರ ಮನೆಗೆ ಕಳುಹಿಸಲಾಗಿದೆ. ಅವರ ಮನೆಯ ವಸ್ತುಗಳನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ.

ಎಮ್ಮೆಮಾಡುವಿನ ಗ್ರಾಮದ ದೊಡ್ಡ ಮಸೀದಿ ಹಿಂಭಾಗದ ಮನೆಗೆ ಕಾವೇರಿ ಹೊಳೆ ನೀರು ಬಂದಿದ್ದು, ಕುಟುಂಬದವರನ್ನು ಸಂಬಂಧಿಕರ ಮನೆಗೆ ಕಳುಹಿಸಲಾಗಿದೆ.

ವೀರಾಜಪೇಟೆ ತಾಲೂಕಿನ ನಾಲ್ಕೇರಿ ರಸ್ತೆ ಮಾರ್ಗ 7 ರಿಂದ 10 ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದಿದ್ದು, ತೆರವು ಕಾರ್ಯ ಪ್ರಗತಿಯಲ್ಲಿದೆ.

ನೆಲ್ಯಹುದಿಕೇರಿ ಬೆಟ್ಟದ ಕಾಡು ಗ್ರಾಮದ 150 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಉಳಿದವರನ್ನೂ ಸ್ಥಳಾಂತರ ಮಾಡಲಾಗುವುದು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಚಂದನ್ ತಿಳಿಸಿದ್ದಾರೆ.

ಮಡಿಕೇರಿ-ವೀರಾಜಪೇಟೆ ರಸ್ತೆಯ ಬೇತ್ರಿಯಲ್ಲಿ ಕಾವೇರಿ ನದಿ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಬೇತ್ರಿ ಸೇತುವೆ ಮೇಲಿನ ಸಂಚಾರವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.

ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಉಂಟಾಗುವ ಅನಾನುಕೂಲಗಳನ್ನು ಎದುರಿಸಲು ಜಿಲ್ಲಾಡಳಿತವು ಸಜ್ಜಾಗಿದ್ದು, ಜಿಲ್ಲೆಯ ಜನತೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಆದಾಗ್ಯೂ ಗುಡ್ಡಗಾಡು ಮತ್ತು ಬೆಟ್ಟದ ತಪ್ಪಲಿನಲ್ಲಿ ವಾಸಿಸುವ ಜನರು ಸ್ವಲ್ಪ ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಮನವಿ ಮಾಡುತ್ತದೆ.

ಯಾವುದೇ ತುರ್ತು ಸಂದರ್ಭದಲ್ಲಿ ಜಿಲ್ಲಾಡಳಿತದ ನಿಯಂತ್ರಣ ಕೊಠಡಿ ಸಂ: 221077 ಮತ್ತು ವಾಟ್ಸಪ್ ಸಂ: 8550001077ನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಇದರೊಂದಿಗೆ ತಾ. 7ರ ವರೆಗೂ ಹೆಚ್ಚಿನ ಮಳೆ ಮುಂದುವರೆಯಲಿದ್ದು, ನದಿ ಪಾತ್ರದ ಜನತೆ, ಬೆಟ್ಟ-ಗುಡ್ಡಗಳ ತಪ್ಪಲಿನಲ್ಲಿರುವ ಜನರು ಎಚ್ಚರಿಕೆ ವಹಿಸುವಂತೆ ಕೋರಲಾಗಿದೆ.

ಜಿಲ್ಲೆಯಲ್ಲಿ ತಾ. 7ರ ವರೆಗೆ ಮಳೆ ಮುಂದುವರೆಯಲಿದ್ದು, ಈ ನಿಟ್ಟಿನಲ್ಲಿ ಹಾರಂಗಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹರಿಬಿಡುವ ಸಾಧ್ಯತೆ ಇದ್ದು ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.