ಕುಶಾಲನಗರ, ಆ. 6: ರಾಜ್ಯದ ಕೆಲವು ಕಡೆ ಸೇರಿದಂತೆ ಕೊಡಗು ಜಿಲ್ಲೆಯಲ್ಲೂ ಮಳೆಯಿಂದ ಸಾಕಷ್ಟು ಹಾನಿ, ಕಷ್ಟ- ನಷ್ಟ ಸಂಭವಿಸಿದೆ. ಕಳೆದ ಮೂರು ದಿನಗಳಲ್ಲಿ ದಾಖಲೆ ಮಳೆ ಆಗಿದೆ. ಜಿಲ್ಲೆಯಲ್ಲಿ ಸಂಭವಿಸಬಹುದಾದ ವಿಪತ್ತನ್ನು ಎದುರಿಸಲು ಹೆಚ್ಚುವರಿಯಾಗಿ 20 ಮಂದಿಯ ಎನ್‍ಡಿಆರ್‍ಎಫ್ ತಂಡ ತಾ. 7ರಂದು (ಇಂದು) ಜಿಲ್ಲೆಗೆ ಆಗಮಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಕುಶಾಲನಗರದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಈಗಾಗಲೇ ಜಿಲ್ಲೆಯಲ್ಲಿ 23 ಮಂದಿ ಎನ್‍ಡಿಆರ್‍ಎಫ್ ತಂಡ ಇದ್ದು, ನಾಳೆ ಬೆಳಿಗ್ಗೆ ಬೆಂಗಳೂರು ಹಾಗೂ ಮೈಸೂರಿನಲ್ಲಿ 20 ಮಂದಿ ಆಗಮಿಸಲಿದ್ದಾರೆಂದು ತಿಳಿಸಿದರು.
(ಮೊದಲ ಪುಟದಿಂದ) ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿದಿದ್ದು, ನೋವಿನ ಸಂಗತಿ, ಹಿಂದಿನ ಘಟನೆ ಮರುಕಳಸಬಾರದೆಂದು ಎನ್‍ಡಿಆರ್‍ಎಫ್ ತಂಡವನ್ನು ಮೊದಲೇ ಕರೆಸಿದ್ದೆವು. ನಾಳೆ ತಲಕಾವೇರಿ, ಕರಡಿಗೋಡು, ವೀರಾಜಪೇಟೆಯ ಅಯ್ಯಪ್ಪಬೆಟ್ಟ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಈ ಪ್ರದೇಶಗಳ ಜನತೆಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಮನವೊಲಿಸುವುದಾಗಿ ಹೇಳಿದರು. ಬರಗಾಲ, ಪ್ರವಾಹ ಹಾಗೂ ಕೋವಿಡ್ ಸಮಸ್ಯೆ ಬಗೆಹರಿಸಲು ಸರಕಾರ ಬದ್ಧವಾಗಿದೆ ಎಂದು ಹೇಳಿದ ಸಚಿವರು, 2-3 ದಿನಗಳ ಕಾಲ ಜಿಲ್ಲೆಯಲ್ಲಿದ್ದು. ಪ್ರವಾಹ ಪೀಡಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಿಂದ ರಾಜ್ಯಕ್ಕೆ 300 ಕೋಟಿ ಬಿಡುಗಡೆ ಆಗಿದೆ. ಜನತೆಯ ನೆರವಿಗೆ ಮೊದಲು ಸ್ಪಂದಿಸುವಂತೆ ಮುಖ್ಯಮಂತ್ರಿ ಹೇಳಿದ್ದಾರೆ.
ಕಳೆದ ಬಾರಿ 500 ಕೋಟಿ ಘೋಷಿಸಿ 200 ಕೋಟಿ ಬಿಡುಗಡೆ ಮಾಡಿದ್ದೇವೆ. ಬರಗಾಲ, ಪ್ರವಾಹ ಕೋವಿಡ್-19 ರಿಂದ ಸಾಕಷ್ಟು ಸಮಸ್ಯೆಗಳು ಉಂಟಾಯಿತು. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯವನ್ನು ಸರ್ಕಾರ ಮಾಡಿದೆ. 1200 ಕೋಟಿಗೂ ಹೆಚ್ಚಿನ ಹಣ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ ಎಂದು ತಿಳಿಸಿದರು.
ಶಾಸಕರಾದ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ ಇದ್ದರು.