ಮಡಿಕೇರಿ, ಆ. 6: ಕೊಡಗು ಜಿಲ್ಲಾದ್ಯಂತ ವ್ಯಾಪಕ ಗಾಳಿ-ಮಳೆ ಮುಂದುವರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಳ್ಳುತ್ತಿದೆ. ಈ ಪರಿಸ್ಥಿತಿಯಿಂದಾಗಿ ಅಲ್ಲಲ್ಲಿ ಭಾರೀ ಅನಾಹುತಗಳು ಸಂಭವಿಸುತ್ತಿದ್ದು, ಜಿಲ್ಲೆ ನಲುಗುವಂತಾಗಿದೆ. ತಲಕಾವೇರಿಯಲ್ಲಿ ಬ್ರಹ್ಮಗಿರಿ ಬೆಟ್ಟದ ಭಾಗವೊಂದು ಜರಿದಿದ್ದು, ಇಲ್ಲಿನ ಪ್ರಧಾನ ಅರ್ಚಕರಾಗಿದ್ದ ನಾರಾಯಣಾಚಾರ್ ಸೇರಿದಂತೆ ಐದು ಮಂದಿ ಜೀವಂತ ಸಮಾಧಿಯಾಗಿರುವ ಶಂಕೆ ವ್ಯಕ್ತಗೊಂಡಿರುವ ಭಾರೀ ದುರ್ಘಟನೆಯೊಂದು ಕಳೆದ ರಾತ್ರಿ ಘಟಿಸಿದೆ.ಇದರೊಂದಿಗೆ ಕಾವೇರಿ ನದಿ, ಲಕ್ಷ್ಮಣ ತೀರ್ಥ ನದಿಗಳಲ್ಲಿ ಪ್ರವಾಹ ಹೆಚ್ಚಾಗುತ್ತಿದ್ದು, ಬೇತ್ರಿ, ಭಾಗಮಂಡಲ, ನಾಪೋಕ್ಲು, ಕರಡಿಗೋಡು, ಚೆಟ್ಟಳ್ಳಿಮಾರ್ಗ ಸೇರಿದಂತೆ ಅಲ್ಲಲ್ಲಿ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಪ್ರವಾಹ ಪರಿಸ್ಥಿತಿಯಿಂದಾಗಿ ಜಿಲ್ಲೆಯ ಮೂರು ಕಡೆಗಳಲ್ಲಿ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.ವಾಯು-ವರುಣನ ಆರ್ಭಟಕ್ಕೆ ಮರಗಳು ಧರೆಗುರುಳಿ ವಿದ್ಯುತ್ ತಂತಿಗಳು ಕಡಿತಗೊಂಡು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕಗ್ಗತ್ತಲು ಆವರಿಸಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಕಳೆದ 3-4 ದಿನಗಳಿಂದ ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿಯೂ ನಿನ್ನೆ ರಾತ್ರಿಯಿಂದಲೇ ವಿದ್ಯುತ್ ಕಣ್ಣಾಮುಚ್ಚಾಲೆ ಕಂಡುಬಂದಿದ್ದು, ಇಂದೂ ಕೂಡ ಮಧ್ಯಾಹ್ನದ ನಂತರ ವಿದ್ಯುತ್ ಸ್ಥಗಿತಗೊಂಡಿತ್ತು.
(ಮೊದಲ ಪುಟದಿಂದ) ಸಂಪರ್ಕ ಕಡಿತ: ಅಲ್ಲಲ್ಲಿ ಮರಗಳು ರಸ್ತೆಗುರುಳಿ, ಮಣ್ಣು ಕುಸಿದು ರಸ್ತೆ ಸಂಪರ್ಕ ಕಡಿತಗೊಳ್ಳುತ್ತಿದ್ದು, ಜಿಲ್ಲಾಡಳಿತ ಸಮರೋಪಾದಿಯಲ್ಲಿ ರಸ್ತೆ ತೆರವು ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಬಹುತೇಕ ಕಡೆಗಳಲ್ಲಿ ಪ್ರವಾಹ ಉಕ್ಕಿ ರಸ್ತೆ ಸಂಪರ್ಕ ಕಡಿತಗೊಂಡಿವೆ.
ಮನೆ-ಕಟ್ಟಡ ಜಖಂ: ಇನ್ನು ಕೆಲವೆಡೆ ಮರಗಳು ಬಿದ್ದು ಮನೆ ಹಾಗೂ ಕಟ್ಟಡಗಳಿಗೆ ಹಾನಿಯುಂಟಾಗಿವೆ. ಸರಕಾರಿ ಕಟ್ಟಡಗಳಿಗೂ ಹಾನಿಯುಂಟಾಗಿವೆ.
ರಸ್ತೆಗಳಲ್ಲಿ ನೀರು: ಜುಲೈ ತಿಂಗಳು ಕಳೆದರೂ ಎಲ್ಲಿಯೂ ಜಲ ಉಕ್ಕಿರಲಿಲ್ಲ. ಆದರೆ ಇದೀಗ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಗಾಳಿ-ಮಳೆಯಿಂದಾಗಿ ಎಲ್ಲೆಡೆ ಜಲ ಹುಟ್ಟಿಕೊಂಡಿದೆ. ವಿಶೇಷವೆಂದರೆ ಇದೀಗ ರಸ್ತೆಯಲ್ಲೂ ನೀರಿನ ಬುಗ್ಗೆಗಳು ಪುಟಿದೇಳುತ್ತಿವೆ. ಗ್ರಾಮೀಣ ರಸ್ತೆಗಳು ಪೂರಾ ನದಿ-ತೊರೆಗಳಂತೆ ಗೋಚರಿಸುತ್ತಿದ್ದು, ನಡೆದಾಡಲು, ವಾಹನ ಸಂಚಾರಕ್ಕೂ ದುಸ್ತರವಾಗಿದೆ. ಹೆಚ್ಚಾಗಿ ಭಾಗಮಂಡಲ ವ್ಯಾಪ್ತಿಯಲ್ಲಿ ಈ ರೀತಿಯ ದೃಶ್ಯ ಗೋಚರಿಸುತ್ತಿದೆ...!
ಕರಿಕೆ ಗ್ರಾಮಕ್ಕೆ ಸಂಪರ್ಕ ಕಡಿತ
ಕೊರೊನಾದಿಂದಾಗಿ ಕೇರಳದ ಸಂಪರ್ಕ ಕಡಿತಗೊಂಡಿದ್ದ ಕರಿಕೆ ಗ್ರಾಮ ಈಗ ಕೊಡಗಿನ ಸಂಪರ್ಕವನ್ನೂ ಕಡಿದುಕೊಂಡಿದೆ.
ಭಾಗಮಂಡಲ-ಕರಿಕೆ ರಸ್ತೆಯಲ್ಲಿನ ಪಟ್ಟಿ ಬಾಚಿಮಲೆ ಬಳಿ ಭೂಕುಸಿತ ಸಂಭವಿಸಿದ್ದು, ರಸ್ತೆ ಸಂಚಾರ ಬಂದ್ ಆಗಿದೆ.
ಅತ್ತ ಕೇರಳ ಇತ್ತ ಕೊಡಗು ಸಂಪರ್ಕ ಕಳೆದುಕೊಂಡ ಕರಿಕೆ ಗ್ರಾಮ ಈಗ ದ್ವೀಪದಂತಾಗಿದ್ದು, ದುಸ್ಥಿತಿ ಎದುರಿಸುತ್ತಿದೆ. ಕೇರಳ ಗಡಿಯಲ್ಲಿ ಮಣ್ಣು ಸುರಿದಿದ್ದು ಇದೀಗ ಭಾಗಮಂಡಲ ರಸ್ತೆಗೆ ಪ್ರಕೃತಿಯೇ ಮಣ್ಣು ಸುರಿದ ಪರಿಣಾಮ ಆಸ್ಪತ್ರೆ ಹಾಗೂ ಇತರ ತುರ್ತು ಸೇವೆಗಳಿಗೆ ಜನ ಪರದಾಡುವಂತಾಗಿದೆ. ಅಲ್ಲದೆ ರಸ್ತೆಗೆ ಬಿದಿರು ಮೆಳೆಗಳು ಉರುಳಿ ಬಿದ್ದಿದ್ದು, ಲೋಕೋಪಯೋಗಿ ಇಲಾಖೆ ಕೂಡಲೇ ರಸ್ತೆ ಸರಿಪಡಿಸಲು ಕ್ರಮ ವಹಿಸಬೇಕಿದೆ.
ನಾಪೆÇೀಕ್ಲು: ಮುಂದುವರಿದ ಪ್ರವಾಹ
ನಾಪೆÇೀಕ್ಲು ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ 8 ಗಂಟೆಯಿಂದ ಮಳೆಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಆದರೆ, ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಯ ಕಾರಣದಿಂದ ಕಾವೇರಿ ನದಿ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದ್ದು, ನಾಪೆÇೀಕ್ಲು-ಮಡಿಕೇರಿ, ನಾಪೆÇೀಕ್ಲು-ಮೂರ್ನಾಡು ರಸ್ತೆ ಸಂಚಾರ ಕಡಿತ ಹಾಗೆಯೇ ಮುಂದುವರಿದಿದೆ.
ತಡಿಯಂಡಮೋಳ್ ಬೆಟ್ಟ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಗೊಂಡ ಹಿನ್ನೆಲೆಯಲ್ಲಿ ಕಕ್ಕಬ್ಬೆ ಹೊಳೆಯಲ್ಲಿ ನೀರಿನ ಪ್ರಮಾಣ ಕಡಿಮೆಗೊಂಡು ಕಕ್ಕಬ್ಬೆ ಇಗ್ಗುತ್ತಪ್ಪ ದೇವಳ ರಸ್ತೆ ಸಂಚಾರಕ್ಕೆ ಮುಕ್ತಗೊಂಡಿದೆ.
ಅರಮನೆ ಆವರಣ ಗೋಡೆ ಕುಸಿತ: ಇತಿಹಾಸ ಪ್ರಸಿದ್ಧ ಕಕ್ಕಬ್ಬೆ ಸಮೀಪದ ನಾಲ್ಕುನಾಡು ಅರಮನೆಯ ಆವರಣಗೋಡೆ ಮಳೆಯ ಕಾರಣದಿಂದ ಕುಸಿತಗೊಂಡಿದೆ. ಕಳೆದ ವರ್ಷದ ಮಳೆಗಾಲದಲ್ಲಿ ಆವರಣ ಗೋಡೆಯ ಕೆಲವು ಕಡೆಗಳಲ್ಲಿ ಕುಸಿತ ಕಂಡು ಬಂದಿತ್ತು. ಈ ಬಗ್ಗೆ ‘ಶಕ್ತಿ’ಯಲ್ಲಿ ಸವಿಸ್ತಾರವಾಗಿ ವರದಿ ಪ್ರಕಟಿಸಲಾಗಿತ್ತು. ಆದರೆ, ಪ್ರಾಚ್ಯ ವಸ್ತು ಸಂಗ್ರಹ ಇಲಾಖೆ, ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮಕೈಗೊಂಡಿರಲಿಲ್ಲ. ಮಳೆಯ ಕಾರಣ ಇನ್ನುಳಿದ ಆವರಣ ಗೋಡೆಗಳು ಕುಸಿದು ಬಿದ್ದಿವೆ.
ಹಾರಿದ ದೇವಳದ ಹೆಂಚು: ಸಮೀಪದ ಪೇರೂರು ಪೆರ್ಮೆ ಶ್ರೀ ಇಗ್ಗುತ್ತಪ್ಪ ದೇವಳದ ಸುಮಾರು 300 ಹೆಂಚುಗಳು ಗಾಳಿಗೆ ಹಾರಿಹೋಗಿ ನಷ್ಟ ಸಂಭವಿಸಿದೆ.
ನಾಪೋಕ್ಲು ಬಳಿಯ ಚೆರಿಯಪರಂಬುವಿನಲ್ಲಿ ಅನಧಿಕೃತವಾಗಿ ಮನೆ, ಗುಡಿಸಲು ನಿರ್ಮಾಣ ಮಾಡಿಕೊಂಡಿರುವ ಪ್ರದೇಶ ಕಾವೇರಿ ನೀರಿನಿಂದ ಜಲಾವೃತವಾಗಿದೆ. ವರ್ಷಂಪ್ರತಿ ಈ ಪ್ರದೇಶ ಮುಳುಗಡೆಗೊಳ್ಳುತ್ತಿದ್ದು, ಈ ಪ್ರದೇಶಕ್ಕೆ ಇಂದು ಕಂದಾಯ ಇಲಾಖಾಧಿಕಾರಿಗಳು, ಸಿಬ್ಬಂದಿಗಳು ತೆರಳಿ ಪರಿಶೀಲನೆ ಮಾಡಿದರು. ಅಪಾಯದ ಸ್ಥಳದಿಂದ ಸ್ಥಳಾಂತಗೊಳ್ಳುವಂತೆ ಒಂದು ತಿಂಗಳ ಹಿಂದೆಯೇ ನೋಟೀಸ್ ನೀಡಲಾಗಿತ್ತಾದರೂ ಯಾರೂ ತೆರಳಿರಲಿಲ್ಲ. ಇದೀಗ ಜಲಾವೃತ್ತಗೊಂಡ ಹಿನ್ನೆಲೆಯಲ್ಲಿ ನಿವಾಸಿಗಳೇ ತಮ್ಮ ಸಂಬಂಧಿಕರ ಮನೆಗಳಿಗೆ ತೆರಳುತ್ತಿದ್ದಾರೆ. ಅಪಾಯದಂಚಿನಲ್ಲಿ ಅನಧಿಕೃತ ಮನೆಗಳಲ್ಲಿ ನೆಲೆಸಿರುವುದರಿಂದ ಇವರುಗಳು ಅತಂತ್ರರಾಗಿದ್ದಾರೆ.
ಮಳೆಯಿಂದಾಗಿ ನಾಪೋಕ್ಲು-ಕಲ್ಲುಮೊಟ್ಟೆ ಸಂಪರ್ಕ ಕಡಿತಗೊಂಡಿದೆ. ಹೊದ್ದೂರು-ಬೊಳಿಬಾಳೆಯಲ್ಲಿ ಜಲಾವೃತಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಮೂಟೇರಿ-ಹಳೆ ತಾಲೂಕು ಮಾರ್ಗ ಮಧ್ಯ ಸುಮಾರು 5 ಮರಗಳು ಉರುಳಿ ಬಿದ್ದಿದ್ದು, ಸಂಪರ್ಕ ಕಡಿತಗೊಂಡಿದೆ. ನಾಪೋಕ್ಲು ಸಮೀಪದ ಚೆರಿಯಪರಂಬು ದರ್ಗಾ ಪರಿಸರ ಜಲಾವೃತಗೊಂಡಿದೆ. ಚೆಯ್ಯಂಡಾಣೆ ಬಳಿಯ ಚೇಲಾವರ ಗ್ರಾಮದ ಕೋಳಿಮಾಡು ಕುಟ್ಟಪ್ಪ ಎಂಬವರ ಮನೆಯ ಛಾವಣಿ ಸಂಪೂರ್ಣ ಗಾಳಿಗೆ ಹಾರಿ ಹೋಗಿ ನಷ್ಟ ಸಂಭವಿಸಿದೆ.
ಹೆಮ್ಮಾಡುವಿನಲ್ಲಿ ಅಪಾಯ
ಕಡಂಗ: ಬೇತ್ರಿ, ಹೆಮ್ಮಾಡು ಮಸೀದಿ ರಸ್ತೆ ಮಾರ್ಗ ಕಾವೇರಿ ಪ್ರವಾಹದ ಅಪಾಯದ ಹಿನ್ನೆಲೆ ಸುಮಾರು 80ಕ್ಕೂ ಅಧಿಕ ಕುಟುಂಬಗಳಿಗೆ ಎಚ್ಚರಿಕೆ ನೀಡಲಾಗಿದ್ದು ತಾ. 5 ರಿಂದಲೇ ನಿವಾಸಿಗಳು ತಮ್ಮ ತಮ್ಮ ಬಂಧುಗಳ ಮನೆಗೆ ತೆರಳಿ ವಾಸ್ತವ್ಯ ಹೂಡಿರುವದಾಗಿ ವರದಿಯಾಗಿದೆ. ವೀರಾಜಪೇಟೆ ತಾಲೂಕಿನಲ್ಲಿ ಇಂದು ಬೆಳಿಗ್ಗೆಯಿಂದಲೇ ಮಳೆಯ ತೀವ್ರತೆ ಕಡಿಮೆಯಾಗಿದ್ದರೂ ಮಡಿಕೇರಿ ತಾಲೂಕು ಹಾಗೂ ಭಾಗಮಂಡಲದಲ್ಲಿ ಮಳೆಯು ಅಧಿಕಗೊಂಡಿರುವ ಹಿನ್ನೆಲೆ ಪ್ರವಾಹ ಪರಿಸ್ಥಿತಿ ಬೇತ್ರಿಯಲ್ಲಿ ಹೆಚ್ಚಾಗಿದೆ.
ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಎರಡನೇ ಮೊಣ್ಣಂಗೇರಿ ಶಾಲೆ ಬಳಿ ಮಳೆ ನೀರಿನ ಹರಿವಿನಿಂದಾಗಿ ಇತ್ತೀಚೆಗೆ ತಾನೇ ಗ್ರಾಮಸ್ಥರೇ ನಿರ್ಮಿಸಿದ ರಸ್ತೆ ಕೊಚ್ಚಿ ಹೋಗಿದೆ.
ಮನೆ ಮೇಲೆ ಮರ
ಭಾಗಮಂಡಲ ಬಳಿಯ ಸಣ್ಣಪುಲಿಕೋಟು ಗ್ರಾಮ ನಿವಾಸಿ ತಿಮ್ಮಯ್ಯ ಅವರ ಮನೆ ಮೇಲೆ ನಿನ್ನೆ ರಾತ್ರಿ ಮರ ಉರುಳಿ ಬಿದ್ದಿದೆ. ಬಿದ್ದ ಮರವು ತಿಮ್ಮಯ್ಯ ಅವರ ಮಲಗಿದ್ದ ಮಂಚಕ್ಕೆ ಬಡಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆಗೆ ಹಾನಿಯಾಗಿದೆ.
ಮರಬಿದ್ದು ಮನೆ ಪೂರ್ಣ ನಾಶ
ಪೆÇನ್ನಂಪೇಟೆ: ಭಾರೀ ಗಾತ್ರದ ಮರ ಬಿದ್ದು ವಾಸದ ಮನೆವೊಂದು ಸಂಪೂರ್ಣವಾಗಿ ನಾಶವಾದ ಘಟನೆ ಎಮ್ಮೆಮಾಡು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಅದೃಷ್ಟವಶಾತ್ ಮನೆಯಲ್ಲಿದ್ದವರು ಚಿಕ್ಕಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾರಿ ಗಾತ್ರದ ಮರ ಮನೆಯ ಮಧ್ಯಭಾಗಕ್ಕೆ ಬಿದ್ದರೂ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿರುವುದಿಲ್ಲ.
ಎಮ್ಮೆಮಾಡು ಗ್ರಾಮದ ಪಡಿಯಾನಿಯ ಅರೆಯಂಡ ಅಬ್ದುಲ್ ರಹಿಮಾನ್ ಎಂಬುವರಿಗೆ ಸೇರಿದ್ದ 9 ಕೋಣೆಯ ವಾಸದ ಮನೆ ಇದೀಗ ಸಂಪೂರ್ಣವಾಗಿ ನೆಲಕಚ್ಚಿದ್ದು, ಇಡೀ ಕುಟುಂಬ ಅತಂತ್ರ ಸ್ಥಿತಿಯಲ್ಲಿದೆ. ಸಂಜೆ 7.30ರ ಘಟನೆ ವೇಳೆ ಮನೆಯಲ್ಲಿದ್ದ ಅಬ್ದುಲ್ ರಹಿಮಾನ್ ಅವರ ಕುಟುಂಬದ ಬಹುತೇಕ ಸದಸ್ಯರು ಮನೆಯ ಒತ್ತಿನಲ್ಲಿರುವ ಅಡಿಗೆಮನೆಯಲ್ಲಿದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಮರ ಬಿದ್ದ ವೇಳೆ ಹಿಂಭಾಗದ ಕೊಠಡಿಯಲ್ಲಿದ್ದ ಅಬ್ದುಲ್ ರಹಿಮಾನ್ ಅವರ ಪತ್ನಿ ಸಫಿಯಾ ಅವರ ಕೈಗೆ ಪೆಟ್ಟಾಗಿದೆ.
ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಬಂದ ಗ್ರಾಮಸ್ಥರು, ಸಂತ್ರಸ್ತ ಕುಟುಂಬವನ್ನು ಪಕ್ಕದ ಮನೆಗೆ ಸುರಕ್ಷಿತವಾಗಿ ಸ್ಥಳಾಂತರಿಸಿದರು.
ಕುಟುಂಬಗಳ ಸ್ಥಳಾಂತರ
ಭಾಗಮಂಡಲ ತ್ರಿವೇಣಿ ಸಂಗಮ ಮುಳುಗಿದೆ. ಭಾಗಮಂಡಲದ ಅಪಾಯದಲ್ಲಿರುವ 20 ಕುಟುಂಬಗಳನ್ನು ಸೇರಿದಂತೆ ವಿರಾಜಪೇಟೆ 17 ಹಾಗೂ ಕರಡಿಗೋಡು ಗ್ರಾಮದ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಟೆಮನೆ ಕಾಲೋನಿಯಲ್ಲಿ ಮನೆಯೊಂದು ಕುಸಿದು ಬಿದ್ದಿದೆ. ಅಲ್ಲದೆ ಮುಕ್ಕೋಡ್ಲು ಹೆಮ್ಮೆತ್ತಾಳುವಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಳೆದ 2018ರಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಧರೆಗುರುಳಿದ ಮರಗಳು ಬಂದು ಅಡ್ಡಲಾಗಿ ನಿಂತಿದ್ದು, ನೀರಿನ ಹರಿವಿಗೆ ಅಡಚಣೆಯುಂಟಾಗಿದೆ. ಸ್ಥಳಕ್ಕೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚಂಗಪ್ಪ, ಮಾಜಿ ಸದಸ್ಯ ಬಿ.ಎಸ್. ರಮೇಶ್, ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದರು.
ವರದಿ: ಸುನಿಲ್, ದುಗ್ಗಳ, ಪ್ರಭಾಕರ್, ಸುಧೀರ್, ನೌಫಲ್, ಇಸ್ಮಾಯಿಲ್, ರಫೀಕ್