ಮಡಿಕೇರಿ, ಜು. 31: ಶ್ರಾವಣ ಮಾಸದಲ್ಲಿ ನಾಗರಪಂಚಮಿ ಬಳಿಕ ಹಿಂದೂ ಬಾಂಧವರು ಆಚರಿಸುವ ಶ್ರೀವರಮಹಾಲಕ್ಷ್ಮಿ ಹಬ್ಬವನ್ನು ಇಂದು ಮನೆ ಮನೆಗಳಲ್ಲಿ ಸರಳ ರೀತಿಯಲ್ಲಿ ಆಚರಿಸಲಾಯಿತು. ವರ್ಷಂಪ್ರತಿ ಎಲ್ಲೆಡೆ ಮಾರುಕಟ್ಟೆ ಗಳಲ್ಲಿ ಹೂವು, ಹಣ್ಣು, ಪೂಜಾ ಸಾಮಾಗ್ರಿಗಳ ಭರಾಟೆಯ ಮಾರಾಟ ವಾಗುತ್ತಿದ್ದರೆ, ಈ ಬಾರಿ ಕೊರೊನಾ ಸೋಂಕಿನ ಆತಂಕ ನಡುವೆ ಬಹು ಭಾಗಗಳಲ್ಲಿ ಜನರೇ ಕಾಣಿಸಿ ಕೊಳ್ಳಲಿಲ್ಲ; ತೀರಾ ಕಡಿಮೆ ವ್ಯಾಪಾರಿಗಳು ಅಲ್ಲಲ್ಲಿ ಪೂಜಾ ವಸ್ತುಗಳ ಮಾರಾಟದಲ್ಲಿ ತೊಡಗಿದ್ದರೂ ಜನ ಸಂದಣಿ ಕಾಣಿಸಲಿಲ್ಲ.
ದೇವ ಮಂದಿರಗಳಲ್ಲಿಯೂ ಸಾಮೂಹಿಕ ಪೂಜೆಗೆ ಅವಕಾಶ ಇಲ್ಲದ್ದರಿಂದ ಬಹುತೇಕ ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿ ಸಿಕ್ಕ ವಸ್ತುಗಳನ್ನು ಹೊಂದಿಸಿಕೊಂಡು ಸರಳ ರೀತಿಯಲ್ಲಿ
(ಮೊದಲ ಪುಟದಿಂದ) ವರಮಹಾಲಕ್ಷ್ಮಿ ಪೂಜೆ ನೆರವೇರಿಸಿದ್ದು ಕಂಡುಬಂತು.
ಕಣಿವೆ: ಈ ಬಾರಿ ಇಡೀ ನಾಡನ್ನು ಬಿಟ್ಟು ಬಿಡದೇ ಕಾಡುತ್ತಿರುವ ಕೊರೊನಾ ನಡುವೆಯೂ ಮಹಿಳಾಮಣಿಯರು ತಮ್ಮ ಅಚ್ವುಮೆಚ್ಚಿನ “ವರಮಹಾಲಕ್ಷ್ಮಿ ಪೂಜೆ’’ಯನ್ನು ಆಚರಿಸಿದರು. ತಮ್ಮ ತಮ್ಮ ಮನೆಗಳಿಗೆ ವರಮಹಾಲಕ್ಷ್ಮಿಯನ್ನು ಬರಮಾಡಿಕೊಳ್ಳಲು ಪೂಜಿಸುವ ಪೂಜಾ ಸಾಮಗ್ರಿಗಳನ್ನು ಕೊರೊನಾ ಭಯದಿಂದಲೇ ಖರೀದಿಸಿದ ಮಹಿಳೆಯರು ಶುಕ್ರವಾರ ಮುಂಜಾನೆ ತಮ್ಮ ಮನೆಗಳನ್ನು ಸ್ವಚ್ಛಗೊಳಿಸಿ ರಂಗೋಲಿ ಹಚ್ಚಿ ತೋರಣಗಳನ್ನು ಕಟ್ಟಿ ಮನೆಯಲ್ಲಿ ಲಕ್ಷ್ಮಿ ದೇವತೆಯ ವಿಗ್ರಹಗಳಿಗೆ ಸೀರೆ ತೊಡಿಸಿ ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸಿ, ಹಣ್ಣುಗಳೊಂದಿಗೆ ವಿವಿಧ ತಿನಿಸುಗಳನ್ನು ಇಟ್ಟು ಪೂಜಿಸಿದರು.
ಕಳೆದ ವರ್ಷ ಇದೇ ವರಮಹಾಲಕ್ಷ್ಮಿ ವ್ರತ 2019ರ ಆಗಸ್ಟ್ 7ರಂದು ಬಂದಾಗ ಆ ದಿನ ಕಣಿವೆ, ಕೂಡಿಗೆ, ಮುಳ್ಳುಸೋಗೆ, ಕುಶಾಲನಗರ ವ್ಯಾಪ್ತಿಯ ಕಾವೇರಿ ನದಿ ದಂಡೆಯ ಬಡಾವಣೆಗಳು ಕಾವೇರಿ ನೀರಲ್ಲಿ ಮುಳುಗಿದ ಪರಿಣಾಮ ವರಮಹಾಲಕ್ಷ್ಮಿ ಆಚರಣೆ ನಡೆದಿರಲಿಲ್ಲ. ಇನ್ನು ಈ ಬಾರಿ ಕಾಡುತ್ತಿರುವ ಕೊರೊನಾ ನಡುವೆಯೂ ದಾರಿದ್ರ್ಯ ನಿವಾರಿಸುವ ಲಕ್ಷ್ಮಿ ಪೂಜೆಯನ್ನು ಮಹಿಳೆಯರು ಆಚರಿಸಿದರು. ಬಳಿಕ ನೆರೆಹೊರೆಯ ಗೃಹಿಣಿಯರು ಹಾಗೂ ನೆಂಟರಿಷ್ಟರನ್ನು ಆಮಂತ್ರಿಸಿ ಅರಿಶಿಣ ಕುಂಕುಮ ಬಳೆಗಳನ್ನು ನೀಡುವ ಮೂಲಕ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು.
ಸಿದ್ದಾಪುರ: ಸಿದ್ದಾಪುರ ಸುತ್ತಮುತ್ತ ಪ್ರದೇಶಗಳಲ್ಲಿ ವರ ಮಹಾಲಕ್ಷ್ಮಿ ಪೂಜೆಯನ್ನು ಆಚರಿಸಲಾಯಿತು. ಕೆಲವರು ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಮತ್ತೆ ಕೆಲವರು ತಮ್ಮ ತಮ್ಮ ಮನೆಗಳಲ್ಲಿ ಹಬ್ಬಗಳನ್ನು ಆಚರಿಸಿಕೊಂಡರು.
ಸುಂಟಿಕೊಪ್ಪ
ಜಿಲ್ಲಾಡಳಿತದ ಮಾರ್ಗಸೂಚಿಯಂತೆ ವರಮಹಾಲಕ್ಷ್ಮಿ ಹಾಗೂ ಬಕ್ರೀದ್ ಹಬ್ಬವನ್ನು ಹಿಂದೂಗಳು ಹಾಗೂ ಮುಸ್ಲಿಮರು ಸಡಗರ ಸಂಭ್ರಮವಿಲ್ಲದೆ ಆಚರಿಸಿಕೊಂಡರು.
ವರಮಹಾಲಕ್ಷ್ಮಿ ಪೂಜೆಯ ಅಂಗವಾಗಿ ಬಾರಿ ಕೊರೊನಾ ಸೋಂಕು ಹಿನ್ನೆಲೆ ದೇವಸ್ಥಾನಗಳಿಗೆ ಬೆರಳೆಣಿಕೆ ಮಂದಿ ಆಗಮಿಸಿ ಪೂಜೆಯನ್ನು ಸಲ್ಲಿಸಿ ಹಿಂತೆರಳಿದರು.
ಮಹಿಳೆಯರು ಹೂ ಹಣ್ಣು ಹಂಪಲು ದುಬಾರಿಯಾದರೂ ಮನೆಗಳಲ್ಲಿ ಹಲವು ವರಮಹಾಲಕ್ಷ್ಮಿಯ ಮೂರ್ತಿಯನ್ನು ಸಿಂಗರಿಸಿ ಹೂ ಹಣ್ಣು ಹಂಪಲು ಇರಿಸಿ ಪೂಜೆ ಪುನಸ್ಕಾರದಲ್ಲಿ ತೊಡಗಿಸಿಕೊಂಡರು.
ಕೂಡಿಗೆಯಲ್ಲಿ ಪೂಜೆ
ಕುಶಾಲನಗರ ಹೋಬಳಿ ವ್ಯಾಪ್ತಿಯ ಕೂಡಿಗೆ ಕೂಡುಮಂಗಳೂರು ಮುಳ್ಳುಸೋಗೆ ಹೆಬ್ಬಾಲೆ ಶಿರಂಗಾಲ ವ್ಯಾಪ್ತಿಯ ಗ್ರಾಮಗಳಲ್ಲಿ ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿ ಶ್ರಧ್ಧಾಭಕ್ತಿಯಿಂದ ಲಕ್ಷ್ಮಿಪೂಜೆಯನ್ನು ನೆರವೇರಿಸಿದರು.
ಗ್ರಾಮಗಳಲ್ಲಿ ಮಹಿಳೆಯರು ತಮ್ಮ ಮನೆ ಮುಂದೆ ರಂಗೋಲಿಯಿಂದ ಮಹಾಲಕ್ಷ್ಮಿ ಪೂಜೆ ಅಂಗವಾಗಿ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿದರು.
ಸೋಮವಾರಪೇಟೆ
ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಶ್ರಾವಣ ಮಾಸದ ವರಮಹಾಲಕ್ಷ್ಮಿ ಹಬ್ಬವನ್ನು ಶ್ರದ್ಧಾಭಕ್ತಿಯೊಂದಿಗೆ ಆಚರಿಸಲಾಯಿತು.
ವಿಶೇಷವಾಗಿ ಮಹಿಳೆಯರು ತಮ್ಮ ಮನೆಗಳಲ್ಲಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು.
ಪಟ್ಟಣದ ವಿದ್ಯಾಗಣಪತಿ ದೇವಾಲಯ, ಸೋಮೇಶ್ವರ, ಬಸವೇಶ್ವರ, ಅಯ್ಯಪ್ಪ ಸ್ವಾಮಿ ದೇವಾಲಯ, ಯಡೂರು ಸೋಮೇಶ್ವರ ದೇವಾಲಯ, ದೊಡ್ಡಮಳ್ತೆಯ ಶ್ರೀ ಹೊನ್ನಮ್ಮತಾಯಿ ಕ್ಷೇತ್ರಗಳಲ್ಲಿ ದಿನದ ಅಂಗವಾಗಿ ವಿಶೇಷ ಪೂಜೆಗಳು ನಡೆದವು.
ಹೂವಿನ ವ್ಯಾಪಾರ ಜೋರು...!
ಗೋಣಿಕೊಪ್ಪಲು : ಈ ಭಾರಿ ವರಮಹಾಲಕ್ಷ್ಮಿ ಹಾಗೂ ಬಕ್ರೀದ್ ಹಬ್ಬವು ಒಂದೇ ದಿನ ಬಂದ ಹಿನ್ನೆಲೆ ಗೋಣಿಕೊಪ್ಪಲುವಿನಲ್ಲಿ ಮುಂಜಾನೆಯೇ ವರಮಹಾಲಕ್ಷ್ಮಿ ಹಬ್ಬ ಆಚರಿಸುವವರು ಪೂಜೆಗಾಗಿ ಹೂವುಗಳನ್ನು ಖರೀದಿಸಿದರು. ಹಲವು ದಿನಗಳಿಂದ ಕೊರೊನಾ ಭಯದಿಂದ ನಾಗರಿಕರು ಹೆಚ್ಚಾಗಿ ನಗರದಲ್ಲಿ ಕಾಣಿಸಿಕೊಂಡಿರಲಿಲ್ಲ. ಹಬ್ಬ ದಿನದಂದು ಮುಂಜಾನೆಯೆ ನಗರಕ್ಕೆ ಆಗಮಿಸಿ ತಮ್ಮ ಪೂಜೆಗೆ ಬೇಕಾದ ಹೂವುಗಳಾದ ಮಲ್ಲಿಗೆ, ಕಾಕಡ, ಕನಕಾಂಬರ, ಸೇವಂತಿಗೆ ಹಾಗೂ ಇನ್ನಿತರ ಹೂವುಗಳನ್ನು ಖರೀದಿಸಿದರು.
ಗಡಿ ಭಾಗ ಪಿರಿಯಾಪಟ್ಟಣದಿಂದ ಆಗಮಿಸಿದ ರೈತರು ಹೆಚ್ಚಾಗಿ ಹೂವುಗಳನ್ನು ಮಾರಾಟಕ್ಕೆ ತಂದಿದ್ದರು. ಹತ್ತು ಗಂಟೆಯಾಗುತ್ತಿದ್ದಂತೆ ಹೂವುಗಳೆಲ್ಲವೂ ಮಾರಾಟವಾಗಿ ರೈತರು ನಗು ಮುಖದಿಂದಲೇ ತಮ್ಮ ಊರಿನತ್ತ ಮುಖ ಮಾಡಿದರು. ನಗರದ ಉಮಾಮಹೇಶ್ವರಿ ದೇವಸ್ಥಾನ ಸೇರಿದಂತೆ ಸುತ್ತ ಮುತ್ತಲಿನ ದೇವಸ್ಥಾನಗಳಲ್ಲಿ ಮಹಿಳೆಯರು, ಮಕ್ಕಳು ಹೊಸ ಉಡುಪು ಧರಿಸಿ ಕಾಣಿಸಿಕೊಂಡರು. ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಭಕ್ತಾಧಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಪೂಜೆ ನಡೆಸಲು ಅವಕಾಶ ಕಲ್ಪಿಸಿದ್ದರು.
ಸರಳ ಆಚರಣೆ
ವೀರಾಜಪೇಟೆ ಪಟ್ಟಣ ವ್ಯಾಪ್ತಿಯ ದೇವಾಲಯಗಳಲ್ಲಿ ಇಂದು ವರಮಹಾಲಕ್ಷ್ಮಿ ವೃತದ ಅಂಗವಾಗಿ ಸದ್ದು ಗದ್ದಲ ಆಡಂಬರ ಇಲ್ಲದೆ ವರಲಕ್ಷ್ಮಿಗೆ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಕೈಗೊಳ್ಳಲಾಯಿತು.
ಕೊರೊನಾ ಹಿನ್ನೆಲೆಯಲ್ಲಿ ಮನೆಗಳಲ್ಲಿಯೇ ಮುತ್ತೈದೆಯರು ಸಾಂಪ್ರದಾಯಿಕವಾಗಿ ವರಮಹಾಲಕ್ಷ್ಮಿ ಪೂಜೆಯನ್ನು ಕೈಗೊಂಡರು.
ವರ್ಷಂಪ್ರತಿ ಇಲ್ಲಿನ ವಿವಿಧ ಸಂಘಟನೆಗಳು ಎಲ್ಲ ಮುತ್ತೈದೆಯರನ್ನು ಸೇರಿಸಿ ಸಾಮೂಹಿಕವಾಗಿ ವರಲಕ್ಷ್ಮಿ ಪೂಜೆಯನ್ನು ಸಂಭ್ರಮದಿಂದ ಶಾಸ್ತ್ರೋಕ್ತವಾಗಿ ಆಚರಿಸುತ್ತಿದ್ದರು. ಆದರೆ ಕೊರೊನಾ ಹಿನೆÀ್ನಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ವರಮಹಾಲಕ್ಷ್ಮಿ ವ್ರತದ ಸಾಮೂಹಿಕ ಪೂಜೆಗಳು ನಡೆಯಲಿಲ್ಲ. ವೀರಾಜಪೇಟೆ ಪಟ್ಟಣದಲ್ಲಿರುವ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯಿತು.
ಕುಶಾಲನಗರ: ವರಮಹಾಲಕ್ಷ್ಮಿ ವ್ರತದ ಅಂಗವಾಗಿ ಕುಶಾಲನಗರ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಮನೆಮನೆಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಮಹಿಳೆಯರು ತಮ್ಮ ತಮ್ಮ ದೇವರ ಮನೆಗಳನ್ನು ಅಲಂಕರಿಸಿ ಲಕ್ಷ್ಮಿಪೂಜೆಯಲ್ಲಿ ಪಾಲ್ಗೊಂಡ ದೃಶ್ಯಗಳು ಕಂಡುಬಂದವು. ಪಟ್ಟಣದ ದೇವಾಲಯಗಳಲ್ಲಿ ಬೆಳಗಿನ ವೇಳೆ ಭಕ್ತಾದಿಗಳ ಸಂಖ್ಯೆಯಲ್ಲಿ ಹೆಚ್ಚಳ ಗೋಚರಿಸಿತು.
ಶನಿವಾರಸಂತೆ
ಕೋವಿಡ್-19 ಹಿನ್ನೆಲೆ ಪಟ್ಟಣದ ಜನತೆ ಶುಕ್ರವಾರ ವರಮಹಾಲಕ್ಷ್ಮಿ ವ್ರತ ಹಾಗೂ ಹಬ್ಬವನ್ನು ತಮ್ಮ ತಮ್ಮ ಮನೆಗಳಲ್ಲಿ ಶ್ರದ್ಧಾಭಕ್ತಿಯಿಂದ ಸರಳವಾಗಿ ಆಚರಿಸಿದರು.
ಪ್ರತಿವರ್ಷ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುವ ಯಶಸ್ವಿನಿ ರಾಜೇಶ್ ಕೋಟ್ಯಾನ್ ಅವರ ಮನೆಯಲ್ಲಿ ಪೀಠದ ಮೇಲೆ ಕಳಶಕ್ಕೆ ಲಕ್ಷ್ಮಿಯ ಬೆಳ್ಳಿಯ ಮುಖವಾಡವಿರಿಸಿ, ರೇಷ್ಮೆ ಸೀರೆ ಉಡಿಸಿ, ಬಾಳೆಗಿಡ, ಮಾವಿನ ತೋರಣ ಕಟ್ಟಿ, ಕಮಲ, ಕನಕಾಂಬರ, ಮಲ್ಲಿಗೆ, ಸೇವಂತಿಗೆ ಹೂವುಗಳೊಂದಿಗೆ ಚಿನ್ನಾಭರಣ ತೊಡಿಸಿ ವಿಶೇಷವಾಗಿ ಅಲಂಕರಿಸಿದ್ದರು. ದೇವಿಗೆ ಇಷ್ಟವಾದ ಹೋಳಿಗೆ, ಪಾಯಸ, ಪುಳಿಯೋಗರೆ, ವಿಶೇಷ ಭಕ್ಷ್ಯಗಳನ್ನು ನೈವೇದ್ಯ ಮಾಡಿ ಬ್ರಾಹ್ಮೀ ಮುಹೂರ್ತದಲ್ಲಿ ಪೂಜಾ ಕಾರ್ಯ ನೆರವೇರಿಸಿದರು.
ಅಂತರ ಕಾಯ್ದುಕೊಳ್ಳುವ ನಿಯಮ ಪಾಲನೆಯೊಂದಿಗೆ ಬಂಧು ಬಳಗದವರು, ಸ್ನೇಹಿತರನ್ನು ಕರೆಯುವಂತಿಲ್ಲವಾದ ಕಾರಣ, ಕುಟುಂಬದ ಮಹಿಳೆಯರು, ಹೆಣ್ಣುಮಕ್ಕಳಿಗೆ ಕಂಕಣ ಕಟ್ಟಿ, ಹೂವು, ಹಣ್ಣು, ವೀಳ್ಯದೆಲೆ, ಅರಶಿನ - ಕುಂಕುಮ, ಬಳೆ ನೀಡಿ, ಉಡುಗೊರೆಯೊಂದಿಗೆ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು.
ಮುಳ್ಳೂರು ವ್ಯಾಪ್ತಿ
ವರ ಮಹಾಲಕ್ಷ್ಮಿ ಹಬ್ಬವನ್ನು ಈ ವರ್ಷ ಕೋವಿಡ್-19 ಸೋಂಕು ಹೆಚ್ಚಾಗುತ್ತಿರುವುದ್ದರಿಂದ ಮುಂಜಾಗ್ರತಾ ಕ್ರಮವಾಗಿ ಮನೆಗಳಲ್ಲಿ ಸರಳವಾಗಿ ಸಾಂಪ್ರದಾಯಿಕವಾಗಿ ಆಚರಿಸಿದ್ದಾರೆ. ಶನಿವಾರಸಂತೆ ಪಟ್ಟಣ ಸೇರಿದಂತೆ ಶುಕ್ರವಾರ ನಡೆದ ವರ ಮಹಾಲಕ್ಷ್ಮಿ ಹಬ್ಬವನ್ನು ತಮ್ಮ ತಮ್ಮ ಮನೆಗಳಲ್ಲಿ ಅತ್ಯಂತ ಸರಳವಾಗಿ ಮತ್ತು ಸಾಂಪ್ರದಾಯಿಕವಾಗಿ ಆಚರಣೆ ಮಾಡಿದರು. ಕೆಲವು ಮನೆಗಳಲ್ಲಿ ಬೆಳಗ್ಗೆ ಮತ್ತೆ ಕೆಲವು ಮನೆಗಳಲ್ಲಿ ಸಂಜೆ ವೇಳೆಯಲ್ಲಿ ವರ ಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದರು.