ಮಡಿಕೇರಿ, ಜು. 31: ಇಸ್ಲಾಂ ಪದ್ಧತಿಯಂತೆ, ಅಲ್ಲಾಹುವಿನ ಆಜ್ಞೆಯಂತೆ ಬಲಿಕೊಡುವ ಸಂಪ್ರದಾ ಯದಂತೆ ಸಾಂಕೇತಿಕವಾಗಿ ಪ್ರಾಣಿ ಬಲಿಯೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುವ ಬಕ್ರೀದ್ ಹಬ್ಬವನ್ನು ಇಂದು ಅಲ್ಲಲ್ಲಿ ಆಚರಿಸಲಾಯಿತು. ಆ. 1 ರಂದು ಕೂಡ ಕೆಲವೆಡೆ ಈ ಆಚರಣೆ ನಡೆಯಲಿದೆ. ಇಸ್ಲಾಂ ಅನುಯಾಯಿಗಳ ಪ್ರಕಾರ ವರ್ಷದ ಕಡೆಯ ತಿಂಗಳಲ್ಲಿ ಅಕ್ಕಪಕ್ಕ ನಿವಾಸಿಗಳಿಗೆ ದಾನ ನೀಡುವ ಪದ್ಧತಿ ಇದಾಗಿದೆ. ಅಂತೆಯೇ ಇಂದು ಜಾಗತಿಕ ಕೊರೊನಾ ನಡುವೆ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು.ಜಿಲ್ಲೆಯಾದ್ಯಂತ 90ಕ್ಕೂ ಅಧಿಕ ಕಡೆಗಳಲ್ಲಿ ಇಂದು ಸಾಮಾಜಿಕ ಅಂತರ ಕಾಯ್ದುಕೊಂಡು ಮುಸ್ಲಿಂ ಬಾಂಧವರು ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯೊಳಗೆ ಪ್ರಾರ್ಥನೆ ನೆರವೇರಿಸಿದರು ಎಂದು ಮಾಹಿತಿ ಲಭಿಸಿದೆ. ಜಿಲ್ಲಾ ಕೇಂದ್ರ ಮಡಿಕೇರಿ ವ್ಯಾಪ್ತಿಯ (ಮೊದಲ ಪುಟದಿಂದ) 9 ಕಡೆಗಳಲ್ಲಿ ಪ್ರಾರ್ಥನೆ ನಡೆದಿದ್ದು, ಆ. 1 ರಂದು ಮೂರುಕಡೆ ನಡೆಯಲಿದೆ.ಮಡಿಕೇರಿ ಗ್ರಾಮಾಂತರ ಪ್ರದೇಶಗಳ 12 ಕಡೆಗಳಲ್ಲಿ, ನಾಪೋಕ್ಲು ಹಾಗೂ ತಾಲೂಕಿನ ಇತರ ಪ್ರಾರ್ಥನಾ ಮಂದಿರಗಳ 15 ಕಡೆ ಬಕ್ರೀದ್ ಆಚರಣೆಯೊಂದಿಗೆ, ಪ್ರಾರ್ಥನೆ ಸಲ್ಲಿಸಿರುವ ಮಾಹಿತಿ ಲಭಿಸಿದೆ. ಭಾಗಮಂಡಲ ವ್ಯಾಪ್ತಿಯ ಆರು ಕಡೆ ಹಾಗೂ ಸಂಪಾಜೆ, ಮದೆ, ಮೇಕೇರಿ, ಮರಗೋಡು, ಹಾಕತ್ತೂರು, ತೊಂಬತ್ತುಮನೆ ಮೊದಲಾದೆಡೆ ಪ್ರಾರ್ಥನೆಯೊಂದಿಗೆ ಹಬ್ಬ ಆಚರಿಸಲಾಯಿತು.
ದಕ್ಷಿಣ ಕೊಡಗು : ದಕ್ಷಿಣ ಕೊಡಗಿನ ವೀರಾಜಪೇಟೆ ತಾಲೂಕು ಕೇಂದ್ರ, ಪೊನ್ನಂಪೇಟೆ, ಗೋಣಿ ಕೊಪ್ಪಲು, ಕುಟ್ಟ, ಸಿದ್ದಾಪುರ ಮುಂತಾದ ಪ್ರದೇಶಗಳ ಮೂವತ್ತು ಕಡೆಗಳಲ್ಲಿ ಬಕ್ರೀದ್ ಆಚರಣೆ ಯೊಂದಿಗೆ ಅಲ್ಲಲ್ಲಿ ಪ್ರಾರ್ಥನೆ ನೆರವೇರಿಸಲಾಗಿದೆ.
ಉತ್ತರಕೊಡಗಿನ ಕೊಡ್ಲಿಪೇಟೆ, ಶನಿವಾರಸಂತೆ, ಸೋಮವಾರಪೇಟೆ, ಮಾದಾಪುರ, ಸುಂಟಿಕೊಪ್ಪ, ಕುಶಾಲನಗರ ವ್ಯಾಪ್ತಿಯ ಅಲ್ಲಲ್ಲಿ 35ಕ್ಕೂ ಅಧಿಕ ಕಡೆ ಪ್ರಾರ್ಥನೆ ಯೊಂದಿಗೆ ಆ. 1 ರಂದು (ಇಂದು) ಕೆಲವೆಡೆ ಹಬ್ಬ ಆಚರಣೆ ನಡೆಯಲಿದೆ. ಈ ಬಾರಿಯ ಬಕ್ರೀದ್ ಹಬ್ಬವನ್ನು ನಾಡಿನೆಲ್ಲೆಡೆ ಕೊರೊನಾ ಸೋಂಕಿನ ಆತಂಕದಿಂದಾಗಿ, ಮುಸ್ಲಿಂಬಾಂಧವರು ಅತ್ಯಂತ ಸರಳ ರೀತಿಯಲ್ಲಿ ಶಾಂತಿಪೂರ್ಣವಾಗಿ ಸರಕಾರದ ಮಾರ್ಗಸೂಚಿಯಂತೆ ಆಚರಿಸಿದ್ದಾಗಿ ಪೊಲೀಸ್ ಮೂಲಗಳು ಖಾತರಿ ಪಡಿಸಿವೆ. ಕೊಡಗಿನಲ್ಲಿ ಬಹುತೇಕ ಕಡೆಗಳಲ್ಲಿ ಇಂದು ಬಕ್ರೀದ್ ಆಚರಣೆಯೊಂದಿಗೆ, ಸಾಂಕೇತಿಕವಾಗಿ ಅಕ್ಕಪಕ್ಕ ನಿವಾಸಿಗಳಿಗೆ ದಾನ ನೀಡುವ ಸರಳ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆ. 1 ರಂದು ಇನ್ನು ಕೆಲವೆಡೆ ಹಬ್ಬ ಮುಂದುವರೆಯಲಿದೆ ಎಂದು ಕೊಡಗು ಮುಸ್ಲಿಂ ಒಕ್ಕೂಟದ ಮುಖಂಡ ಹನೀಫ್ ‘ಶಕ್ತಿ’ಗೆ ತಿಳಿಸಿದ್ದಾರೆ.
ನಾಪೆÇೀಕ್ಲು ಬಕ್ರೀದ್ ಹಬ್ಬ
ನಾಪೆÇೀಕ್ಲು: ಬಕ್ರೀದ್ ಹಬ್ಬವನ್ನು ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಆಚರಿಸಿದರು. ನಾಪೆÇೀಕ್ಲು ಪಟ್ಟಣಕ್ಕೆ ಆಗಮಿಸಿ ಹಬ್ಬದ ವಸ್ತುಗಳು, ಬಟ್ಟೆ ಬರೆ ಖರೀದಿ, ನೆಂಟರಿಷ್ಟರ ಮನೆಗೆ, ಸ್ನೇಹಿತರ ಮನೆಗೆ ತೆರಳುವದರೊಂದಿಗೆ ಸಂಭ್ರಮಿಸುತ್ತಾರೆ. ಆದರೆ ಈ ಬಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ನಾಪೆÇೀಕ್ಲು ಪಟ್ಟಣ ಸ್ತಬ್ಧವಾಗಿದ್ದು, ಸರಳ ಆಚರಣೆ ಕಂಡು ಬಂತು. ಸಮುದಾಯದ ಜನ ತಮ್ಮ ಸಮೀಪದ ಮಸೀದಿಯಲ್ಲಿ ಹಾಗೂ ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸುವದರ ಮೂಲಕ ಸರಳವಾಗಿ ಹಬ್ಬ ಆಚರಿಸಿದರು. ಸದಾ ಜನ ಸಂದಣಿಯಿಂದ ಕೂಡಿರುತ್ತಿದ್ದ ನಾಪೆÇೀಕ್ಲು ಪಟ್ಟಣ ಬಿಕೋ ಎನ್ನುತ್ತಿತ್ತು.
ಸಿದ್ದಾಪುರ: ಸಿದ್ದಾಪುರ ಹಾಗೂ ನೆಲ್ಯಹುದಿಕೇರಿಯಲ್ಲಿ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಲಾಯಿತು. ಮುಸ್ಲಿಂ ಬಾಂಧವರು ಮಸೀದಿಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಕೈಗೊಂಡರು. ಈ ಸಂದರ್ಭದಲ್ಲಿ ತಮ್ಮ ತಮ್ಮ ಮನೆಗಳಿಂದ ಚಾಪೆಗಳನ್ನು ತೆಗೆದುಕೊಂಡು ಹೋಗಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲದೇ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಿದರು.
ಸೋಮವಾರಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶದಲ್ಲಿ ಮುಸ್ಲಿಂ ಸಮುದಾಯ ದವರು ಬಕ್ರೀದ್ ಹಬ್ಬವನ್ನು ಆಚರಿಸಿದರು. ಬೆಳಗ್ಗೆ ಪ್ರಾರ್ಥನಾ ಮಂದಿರಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕೊರೊನಾ ವೈರಸ್ ಆತಂಕದ ಹಿನ್ನೆಲೆ ಮಸೀದಿಯೊಳಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಸಂಬಂಧಿಕರು, ಸ್ನೇಹಿತರಿಗೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಖಬರಸ್ತಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಮಸೀದಿಯೊಳಗೆ ಆಗಮಿಸುವ ಮಂದಿಯ ಜ್ವರ ತಪಾಸಣೆ ಮಾಡಲಾಯಿತು.
ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಈ ಬಾರಿಯ ಬಕ್ರೀದ್ ಆಚರಿಸಲಾಗಿದ್ದು, ಜಗತ್ತಿನ ಸಂಕಟವನ್ನು ದೂರಮಾಡಲೆಂದು ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ಬಜೆಗುಂಡಿ ಖಿಳಾರಿಯಾ ಮಸೀದಿಯ ಅಧ್ಯಕ್ಷ ಕೆ.ಎ. ಯಾಕೂಬ್ ತಿಳಿಸಿದರು.
ಗೋಣಿಕೊಪ್ಪಲು: ನಗರದ ಜುಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಸರಕಾರದ ನಿಯಮಾವಳಿಗಳನ್ನು ಪಾಲಿಸಿ, ಸಾಮಾಜಿಕ ಅಂತರ ಕಾಪಾಡುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮಸೀದಿಯ ಗುರುಗಳು ದೇಶವು ಕೊರೊನಾ ಮುಕ್ತವಾಗಲು, ಶಾಂತಿ ಸೌಹಾದರ್Àತೆ ಕಾಪಾಡಲು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮುಂಜಾನೆ 6.15ರಿಂದ 9.30ರವರೆಗೆ ವಿವಿಧ ತಂಡಗಳಲ್ಲಿ ಆಗಮಿಸಿದ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿ ತಮ್ಮ ತಮ್ಮ ಮನೆಗೆ ತೆರಳಿದರು. ಬಕ್ರೀದ್ ಹಬ್ಬದ ಅಂಗವಾಗಿ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಆಗಿಂದ್ದಾಗೆ ಸುರಿಯುತ್ತಿದ್ದ ಮಳೆಯಿಂದಾಗಿ ಜನ ಸಂಚಾರ ಅಷ್ಟಾಗಿ ಕಂಡು ಬರಲಿಲ್ಲ.
ಬಕ್ರೀದ್ ಹಬ್ಬದ ಮುನ್ನೆಚ್ಚರಿಕೆ ಕ್ರಮವಾಗಿ ಮುಂಜಾನೆಯಿಂದಲೇ ಪೊಲೀಸರು ಆಯಾಕಟ್ಟಿನ ಪ್ರದೇಶದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು. ಸಿ.ಪಿ.ಐ. ರಾಮರೆಡ್ಡಿ ಎಸ್ಐ ಸುರೇಶ್ ಬೋಪಣ್ಣ ಬಂದೋಬಸ್ತ್ ನೇತೃತ್ವ ವಹಿಸಿದ್ದರು.
ಕಡಂಗ : ಇಲ್ಲಿನ ಬದ್ರಿಯಾ ಮುಸ್ಲಿಂ ಜಮಾಹತ್ ಮತ್ತು ಮುಹ್ಯದ್ದೀನ್ ಮಸೀದಿಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಕೊರೊನಾ ವೈರಸ್ ಮುಕ್ತಕ್ಕಾಗಿ ಹಾಗೂ ಊರಿನಲ್ಲಿ ಶಾಂತಿ ಸೌಹಾರ್ದತೆ ನೆಲಸಲಿ ಎಂದು ಮಸೀದಿಯ ಗುರುಗಳಾದ ಹ್ಯಾರಿಸ್ ಸಖಾಫಿ ಮತ್ತು ಹಮೀದ್ ದಾರಿಮಿ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು
ಕಡಂಗ ಬದ್ರಿಯಾ ಮುಸ್ಲಿಂ ಜಮಾಹತ್ ಮತ್ತು ಮೋಯಿದ್ದಿನ್ ಮಸೀದಿಯಲ್ಲಿ ಸರ್ಕಾರದ ಆದೇಶವನ್ನು ಪಾಲಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಡಂಗ ಮುಸ್ಲಿಂ ಬಾಂಧವರಿಗೆ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿತ್ತು
ಮಸೀದಿ ಪ್ರವೇಶ ಸಂದರ್ಭ ತಪಾಸಣೆಗೆ ಒಳಪಡಿಸಿ ನಂತರ ಒಳಗೆ ಬಿಡಲಾಯಿತು. 60 ವರ್ಷದ ಮೇಲ್ಮಟ್ಟವರು ಸೇರಿದಂತೆ 14 ವರ್ಷದ ಒಳಗಿನ ಮಕ್ಕಳಿಗೂ ಮಸೀದಿಯ ಪ್ರವೇಶಕ್ಕೆ ಅವಕಾಶ ನೀಡಲಾಗಲಿಲ್ಲ. ಬೆಳಿಗ್ಗೆ 7 ಗಂಟೆಗೆ ವಿಶೇಷ ಪ್ರಾರ್ಥನೆ ನೆರವೇರಿತು.