ವೀರಾಜಪೇಟೆ, ಜು. 31: ವೀರಾಜಪೇಟೆ ತಾಲೂಕು ಹುದಿಕೇರಿ ಹೋಬಳಿ ಹೈಸೊಡ್ಲೂರು ಗ್ರಾಮದಲ್ಲಿ 74 ಕುಟುಂಬಗಳು ಗುಡಿಸಲು ಕಟ್ಟಿಕೊಂಡು ವಾಸವಿದ್ದು, ಈ ಕುಟುಂಬಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ತಾಲೂಕು ಆಡಳಿತ ನಿರ್ಲಕ್ಷ್ಯ ತೋರುತ್ತಿದೆ. ಇದೇ ರೀತಿ ಮುಂದುವರೆದರೆ ಆಗಸ್ಟ್ 15 ರಂದು ಹುದಿಕೇರಿ ಹೋಬಳಿ ನಾಡ ಕಚೇರಿ ಮುಂದೆ ಅನಿರ್ಧಿಷ್ಟಾವಧಿಯವರೆಗೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ದ.ಸಂ.ಸ. ವಿಭಾಗ ಸಂಚಾಲಕ ಹೆಚ್.ಎಸ್. ಕೃಷ್ಣಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಜಮೀನು ಸರ್ವೆ ಸಂಖ್ಯೆ 181ಪಿ1 ರಲ್ಲಿ ಒಟ್ಟು 8 ಎಕರೆ ಪೈಸಾರಿ ಜಾಗ ಇದೆ. 7 ಎಕರೆ ಜಾಗವನ್ನು ಬಲಾಡ್ಯರು ಒತ್ತುವರಿ ಮಾಡಿಕೊಂಡಿದ್ದಾರೆ. ಉಳಿದ 1 ಎಕರೆ ಜಾಗದಲ್ಲಿ ಕಳೆದ 2 ವರ್ಷದಿಂದ ಪರಿಶಿಷ್ಟ ಪಂಗಡಕ್ಕೆ ಸೇರಿದ 74 ಕುಟುಂಬಗಳು ಶೆಡ್‍ಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ.

ತಾಲೂಕು ಆಡಳಿತ ಹಕ್ಕು ಪತ್ರ ನೀಡಲು ವಿಳಂಬ ಮಾಡುತ್ತಿದೆ. ಸರ್ಕಾರ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ. ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು 225 ಜನರು ಸರ್ಕಾರದ 8ಎ ಅರ್ಜಿಯನ್ನು ಬಿ.ಎಲ್.ಒಗಳ ಮೂಲಕ ನೀಡಲಾಗಿದೆ. ಈವರೆಗೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿಲ್ಲ ಎಂದರು.

ಸಂಘಟನೆಯ ಆಂತರಿಕ ಶಿಸ್ತು ಸಮಿತಿ ತರಬೇತಿ ವಿಭಾಗದ ಮುಖ್ಯಸ್ಥ ರಜನಿಕಾಂತ್ ಮಾತನಾಡಿ, ಕೇರಳ, ಅಸ್ಸಾಂ, ರಾಜಸ್ಥಾನ ಸೇರಿದಂತೆ ಬೇರೆ, ಬೇರೆ ರಾಜ್ಯಗಳಿಂದ ಬಂದವರಿಗೆ ಪಡಿತರ ಚೀಟಿ, ಎಲ್ಲವನ್ನು ನೀಡುತ್ತಿರುವ ಅಧಿಕಾರಿಗಳು ಇಲ್ಲಿಯೇ ಹುಟ್ಟಿ ಬೆಳೆದಿರುವ ಜನರಿಗೆ ಸೌಲಭ್ಯಗಳು ನೀಡುತ್ತಿಲ್ಲ ಎಂದು ದೂರಿದರು.

ಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್, ತಾಲೂಕು ಸಂಘಟನಾ ಸಂಚಾಲಕ ಗಣೇಶ್, ಕರ್ಕು ಉಪಸ್ಥಿತರಿದ್ದರು.