ಮಡಿಕೇರಿ, ಜು. 31: ಪಟ್ಟಣದ ಮೂಲಭೂತ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸದ ವೀರಾಜಪೇಟೆ ಪ.ಪಂ. ‘ಭ್ರಷ್ಟಾಚಾರದ ಕೂಪ’ವಾಗಿ ಪರಿವರ್ತನೆಯಾಗಿದೆ ಎಂದು ಆರೋಪಿಸಿರುವ ವೀರಾಜಪೇಟೆ ನಾಗರಿಕ ಸಮಿತಿ ಹೋರಾಟ ರೂಪಿಸುವುದಾಗಿ ಹೇಳಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಡಾ. ಐ.ಆರ್. ದುರ್ಗಾಪ್ರಸಾದ್, ಪಟ್ಟಣದ ನಾಗರಿಕರು ಎದುರಿಸುತ್ತಿರುವ ಕುಡಿಯುವ ನೀರು, ರಸ್ತೆ, ಚರಂಡಿ, ಸಂಚಾರ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿಗಳು, ಮುಖ್ಯಾಧಿಕಾರಿಗಳು ಗಮನಹರಿಸಿ ಬಗೆಹರಿಸುವ ಪ್ರಯತ್ನಗಳನ್ನು ನಡೆಸುತ್ತಿಲ್ಲ. ಪಟ್ಟಣ ಪಂಚಾಯಿತಿಯಲ್ಲಿ ಲಂಚವಿಲ್ಲದೆ ಕೆಲಸವಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಸಮಿತಿ ಸದಸ್ಯ ಸೋಮ ಲೋಕನಾಥ್ ಮಾತನಾಡಿ, 2018 ಮತ್ತು 19ನೇ ಸಾಲಿನ ಪ್ರಾಕೃತಿಕ ವಿಕೋಪದ ಸಂದರ್ಭ ವೀರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಸಾಕಷ್ಟು ಮನೆಗಳಿಗೆ ಹಾನಿಯಾಗಿದ್ದು, ಇದನ್ನು ಪಟ್ಟಿಮಾಡಿ ಪರಿಹಾರವನ್ನು ವಿತರಿಸಲಾಗಿದೆ. ಇದರ ಪುನರ್ ಪರಿಶೀಲನೆಯ ಹಂತದಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭ ಕೇವಲ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡ, ಅಲ್ಪ ಪ್ರಮಾಣದ ಗೋಡೆ ಕುಸಿತದಂತಹ ಪ್ರಕರಣಗಳಲ್ಲಿ ಶೇ. 70 ರಿಂದ ಶೇ. 100 ಹಾನಿಯಾಗಿದೆ ಎಂದು ನಮೂದಿಸಿ ಪರಿಹಾರವನ್ನು ನೀಡಲಾಗಿದೆ ಎಂದು ಟೀಕಿಸಿದರು.
ಸಮಿತಿ ಸದಸ್ಯ ಎಲ್.ಜಿ. ಅಶೋಕ್ ಮಾತನಾಡಿ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಹುತೇಕ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿದೆ ಎಂದು ದೂರಿದರು. ಗೋಷ್ಠಿಯಲ್ಲಿ ಅನಿತಾ ತೆರೆಸಾ ಲೋಬೊ, ನೆಲ್ಲಮಕ್ಕಡ ಗಣಪತಿ, ಪಿ.ಕೆ. ಅಬ್ದುಲ್ ರೆಹಮಾನ್ ಮಾತನಾಡಿದರು.