ಸಿದ್ದಾಪುರ, ಜು. 31: ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡುಗಳನ್ನು ಅರಣ್ಯಕ್ಕೆ ಅಟ್ಟುವಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಚೆಟ್ಟಳ್ಳಿ ಭಾಗದ ಮೋದೂರು, ಹೊರೂರು, ಈರಳೆಒಳಮುಡಿ ಗ್ರಾಮಗಳ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸುತ್ತಾ ಕೃಷಿ ಫಸಲುಗಳನ್ನು ನಾಶ ಪಡಿಸುತ್ತಿದ್ದವು.

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ ಮೇರೆಗೆ ಇಂದು ಮೀನುಕೊಲ್ಲಿ ಅರಣ್ಯ ವಲಯ ಹಾಗೂ ಆನೆಕಾಡು ವಲಯಗಳ ಜಂಟಿ ಕಾರ್ಯಾಚರಣೆ ಮೂಲಕ ಪಟಾಕಿಗಳನ್ನು ಸಿಡಿಸಿ ಕಾಡಾನೆಗಳನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಯಶಸ್ವಿಯಾದರು. ಕಾಡಾನೆಗಳನ್ನು ಕಾಡಿಗೆ ಅಟ್ಟುವ ಸಂದರ್ಭದಲ್ಲಿ ರೋಷಗೊಂಡ ಕಾಡಾನೆಗಳ ಹಿಂಡಿನ ಪೈಕಿ 2-3 ಕಾಡಾನೆಗಳು ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಅಟ್ಟಿಸಿಕೊಂಡು ಬಂದು ಅವರ ಮೇಲೆ ದಾಳಿ ನಡೆಸಲು ಮುಂದಾದವು.

ಈ ಸಂದರ್ಭ ಮಳೆಯ ಕೆಸರಿನ ನಡುವೆ ಎದ್ದುಬಿದ್ದು ಓಡಿ ಅರಣ್ಯ ಸಿಬ್ಬಂದಿಗಳು ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾದರು. ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಶ್ರಮವಹಿಸಿ ಕಾಡಿಗೆ ಅಟ್ಟಲು ಪ್ರಯತ್ನಿಸಿದರೂ ಕಾಡಾನೆಗಳು ಸುತ್ತಾಡಿಸುತ್ತಾ ಒಂದು ತೋಟದಿಂದ ಇನ್ನೊಂದು ತೋಟಕ್ಕೆ ಲಗ್ಗೆಯಿಡುತ್ತಿದ್ದವು. ಆದರೂ ಕೂಡ ಶ್ರಮಪಟ್ಟು ಕಾರ್ಯಾಚರಣೆ ನಡೆಸಿ ಕೊನೆಗೂ ಮೀನುಕೊಲ್ಲಿ ಅರಣ್ಯಕ್ಕೆ ಕಾಡಾನೆಗಳನ್ನು ಅಟ್ಟಿಸಲಾಯಿತು. ಈ ಸಂದರ್ಭದಲ್ಲಿ ಎರಡು ಮರಿ ಆನೆಗಳು ಸೇರಿದಂತೆ 10ಕ್ಕೂ ಅಧಿಕ ಕಾಡಾನೆಗಳು ಕಂಡು ಬಂದಿತು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಕಾರ್ಯಾಚರಣೆಯಲ್ಲಿ 20 ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಎ.ಸಿ.ಎಫ್ ನೆಹರೂ ಮಾರ್ಗದರ್ಶನದಲ್ಲಿ ಕುಶಾಲನಗರ ವಲಯ ಅರಣ್ಯ ಅಧಿಕಾರಿ ಅನನ್ಯ ಕುಮಾರ್ ನೇತೃತ್ವದಲ್ಲಿ ಉಪ ವಲಯಾರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಮಹಾದೇವ್ ನಾಯಕ್, ಅರಣ್ಯ ರಕ್ಷಕರಾದ ಚರಣ್, ಗಣೇಶ, ರವಿ ಉತ್ನಾಲ್, ದಿನೇಶ್ ಹಾಗೂ ಮೀನುಕೊಲ್ಲಿ ಹಾಗೂ ಆನೆಕಾಡು ವಿಭಾಗದ ಆರ್.ಆರ್.ಟಿ ತಂಡದ ಸಿಬ್ಬಂದಿಗಳು, ಚಾಲಕ ವಾಸು ಹಾಗೂ ಚಂದ್ರ ಪಾಲ್ಗೊಂಡಿದ್ದರು.

-ವರದಿ: ವಾಸು ಎ.ಎನ್