ನಿಯಂತ್ರಿಸಲು ಯತ್ನಿಸಿದ ಅಣ್ಣನ ಮೇಲೆ ಹಲ್ಲೆ

ಮಡಿಕೇರಿ, ಜು. 31: ತಮ್ಮಂದಿರಿಬ್ಬರ ನಡುವಿನ ಜಗಳವನ್ನು ನಿಯಂತ್ರಿಸಲು ಹೋದ ಅಣ್ಣನ ಮೇಲೆ ಹಲ್ಲೆಯಾದ ಘಟನೆ ಮೂರ್ನಾಡುವಿನ ಕುಂಬಳದಾಳುವಿನಲ್ಲಿ ನಡೆದಿದೆ.

ಕುಂಬಳದಾಳುವಿನ ಸುಬ್ರಮಣಿ ಎಂಬವರ ತೋಟದ ಲೈನ್‍ಮನೆಯಲ್ಲಿ ವಾಸಿವಿದ್ದ ರಾಜು ಸಮೀಪದ ಪೂಣಚ್ಚ ಎಂಬವರ ಲೈನ್‍ಮನೆಯಲ್ಲಿ ವಾಸವಿದ್ದ ತನ್ನ ಅಣ್ಣ ಸಿದ್ದುವಿನ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ ಘಟನೆ ತಾ. 30ರ ಮಧ್ಯಾಹ್ನ ಸುಮಾರು 2.30ಕ್ಕೆ ನಡೆದಿದೆ. ಆರೋಪಿ ರಂಜು ಹಾಗೂ ಸಹೋದರ ರಾಜು ಒಂದೇ ಲೈನ್‍ಮನೆಯಲ್ಲಿ ವಾಸವಿದ್ದು, ಕ್ಷುಲ್ಲಕ ಕಾರಣಕ್ಕೆ ಇವರಿಬ್ಬರ ನಡುವೆ ಜಗಳ ಪ್ರಾರಂಭವಾಯಿತು. ಇಬ್ಬರನ್ನೂ ಸಮಾಧಾನಿಸಿದ ಅಣ್ಣ ಸಿದ್ದು ಓರ್ವ ಸಹೋದರ ರಾಜು ಅವರನ್ನು ಸಮೀಪದ ತನ್ನ ಲೈನ್‍ಮನೆಗೆ ಕರೆದೊಯ್ದಿದ್ದಾರೆ. ಇದರಿಂದ ಸಿಟ್ಟುಗೊಂಡ ರಂಜು ಅಣ್ಣ ಸಿದ್ದುವಿನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದು, ಕುತ್ತಿಗೆಯ ಎಡ ಭಾಗಕ್ಕೆ ಗಾಯವಾಗಿದೆ. ಘಟನೆಯ ನಂತರ ಆರೋಪಿ ರಂಜು ಅಲ್ಲಿಂದ ಪರಾರಿಯಾಗಿದ್ದಾನೆ. ಗಾಯಾಳು ಸಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್ ಅವರು ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.