ನಾಪೋಕ್ಲು, ಆ. 1: ನಗರದ ಹಲಾಲ್ ಚಿಕನ್ ಮತ್ತು ಮಟನ್ ಸ್ಟಾಲ್‍ನಲ್ಲಿ ಇಂದು ಎಮು ಪಕ್ಷಿಯ ಮಾಂಸ ಮಾರಾಟ ಮಾಡಲಾಯಿತು. ಕೊರೊನಾ ಸಂಕಷ್ಟ ಸಮಯದಲ್ಲಿ ಮಾಂಸಕ್ಕೆ ಬೇಡಿಕೆ ಹೆಚ್ಚಿದೆ. ಎಮು ಪಕ್ಷಿಯ ಮಾಂಸವೂ ಇಲ್ಲಿ ಮಾರಾಟವಾಗುತ್ತಿದ್ದು, ಮಾಂಸಪ್ರಿಯರು ಖರೀದಿಸುತ್ತಿದ್ದಾರೆ. ಕಡಿಮೆ ಬೆಲೆಗೆ ಮಾಂಸ ಲಭಿಸುತ್ತಿರುವುದು ಗ್ರಾಹಕರಿಗೆ ವರದಾನವಾಗಿದೆ. ಇಲ್ಲಿನ ವ್ಯಾಪಾರಿ ಎಂ.ಎಂ. ಅಬೂಬಕರ್ ಮೊದಲಬಾರಿಗೆ ನಾಪೋಕ್ಲುವಿನಲ್ಲಿ ಎಮು ಮಾಂಸವನ್ನು ಗ್ರಾಹಕರಿಗೆ ಪರಿಚಯಿಸಿದ್ದಾರೆ. ಕುಶಾಲನಗರದಿಂದ ಮಾಂಸವನ್ನು ಖರೀದಿಸಿ ತಂದು ಇಲ್ಲಿ ಮಾರಾಟ ಮಾಡುತ್ತಿದ್ದಾರೆ. ಇತರೆಡೆ ಎಮು ಮಾಂಸಕ್ಕೆ ಕೆ.ಜಿ.ಗೆ ರೂ.500ರಿಂದ 600 ದರವಿದೆ. ಗ್ರಾಹಕರನ್ನು ಸೆಳೆಯಲು ಅಬೂಬಕರ್ ಕೆ.ಜಿ.ಗೆ ರೂ. 300 ದರಕ್ಕೆ ಮಾರಾಟ ಮಾಡುತ್ತಿದ್ದಾರೆ. 38 ಕೆ.ಜಿ. ತೂಕದ ಎಮು ಪಕ್ಷಿಯ ಮಾಂಸ ಇದೀಗ ನಾಪೋಕ್ಲುವಿನಲ್ಲಿ ಬಿಕರಿಯಾಗಿದೆ.

ಎಮು ಆಸ್ಟ್ರೇಲಿಯಾದ ಅತಿ ದೊಡ್ಡ ಪಕ್ಷಿಯಾಗಿದ್ದು, ಕರ್ನಾಟಕದಲ್ಲಿಯೂ ಎಮು ಸಾಕಣೆಯ ಒಲವು ಹೆಚ್ಚುತ್ತಿದೆ. ಮಾಂಸ ಮತ್ತು ಮೊಟ್ಟೆಗಾಗಿ ಎಮು ಪಕ್ಷಿಯನ್ನು ಸಾಕುತ್ತಿದ್ದಾರೆ. ನಾಪೋಕ್ಲುವಿನಲ್ಲಿ ಎಮು ಮಾಂಸ ಮಾರಾಟ ಆರಂಭಗೊಂಡಿದ್ದು, ಭರ್ಜರಿ ಬೇಡಿಕೆ ಕಂಡುಬಂದಿದೆ.