ಗೋಣಿಕೊಪ್ಪಲು, ಆ. 1: ಹಸುವಿನ ಮಾಲೀಕನ ಮುಂದೆಯೇ ಹುಲಿಯು ಹಸುವನ್ನು ಕೊಂದ ಘಟನೆ ಚಿಕ್ಕರೇಷ್ಮೆ ಹಾಡಿಯಲ್ಲಿ ನಡೆದಿದೆ.
ಚನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಂಗಿ ಗ್ರಾಮದ ವೈ.ಆರ್.ಸುರೇಶ್ ಎಂಬವರು ಶನಿವಾರ ಬೆಳಿಗ್ಗೆ 11 ಗಂಟೆಗೆ ತಮ್ಮ ಹಸುವನ್ನು ಎಂದಿನಂತೆ ಮೇಯಲು ಬಿಟ್ಟು ಸಮೀಪದ ಅಂಗಡಿಗೆ ತೆರಳಿ ವಾಪಾಸು ಬರುತ್ತಿದ್ದ ಸಂದರ್ಭ ಸಮೀಪದ ಅರಣ್ಯದಿಂದ ಆಗಮಿಸಿದ ಹುಲಿಯು ಹಸುವಿನ ಮೇಲೆರಗಿ ಕೊಂದು ಹಾಕಿದೆ.
ಕಣ್ಣ ಮುಂದೆಯೇ ನಡೆದ ಘಟನೆಯಿಂದ ಗಾಬರಿಗೊಂಡ ಸುರೇಶ್ ಜೋರಾಗಿ ಬೊಬ್ಬೆ ಹಾಕಿದಾಗ ಹುಲಿಯು ಹಸುವನ್ನು ಬಿಟ್ಟು ಕಾಡಿನಲ್ಲಿ ಮರೆಯಾಗಿದೆ. ವಿಷಯ ತಿಳಿಸಲು ಮನೆಗೆ ಹೋಗಿ ಬರುವಷ್ಟರಲ್ಲಿ ಹುಲಿಯು ಸತ್ತ ಹಸುವನ್ನು ಮತ್ತೆ ಎಳೆದೊಯ್ದು ಅರಣ್ಯ ಸೇರಿದೆ.
ಗ್ರಾಮದ ಜನರು ಒಟ್ಟಾಗಿ ಸೇರಿ ಬೊಬ್ಬೆ ಹಾಕಿದಾಗ ಹುಲಿಯು ಅರಣ್ಯದಲ್ಲಿ ಮಾಯವಾಗಿದೆ.ಗ್ರಾಮದ ಮುಖಂಡರಾದ ಸಿದ್ದಪ್ಪ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸುದ್ದಿ ಮುಟ್ಟಿಸಿದರು.
ಸ್ಥಳಕ್ಕೆ ಅರಣ್ಯ ಇಲಾಖೆಯ ವನ್ಯಜೀವಿ ಸಂರಕ್ಷಣಾ ವಿಭಾಗದ ರಮಣಗೌಡ ಹಾಗೂ ಶಿವಪ್ಪ ಆಗಮಿಸಿ ಪರಿಶೀಲನೆ ನಡೆಸಿದರು.
ಪರಿಹಾರ ನೀಡುವ ಭರವಸೆ ನೀಡಿದ ಅಧಿಕಾರಿಗಳು ಹುಲಿಯ ಸೆರೆಗೆ ಕ್ರಮ ಕೈಗೊಳ್ಳುವಂತೆ ಆದಿವಾಸಿಗಳು ಒತ್ತಾಯಿಸಿದ್ದಾರೆ.
- ಹೆಚ್.ಕೆ. ಜಗದೀಶ್