ಭಾಗಮಂಡಲ, ಆ. 1: ಭಾಗಮಂಡಲದಲ್ಲಿ ಮೇಲ್ಸೇತುವೆ ಕಾಮಗಾರಿ ಆರಂಭವಾದಂದಿನಿಂದ ಒಂದಲ್ಲ ಒಂದು ಸಮಸ್ಯೆ ಸ್ಥಳೀಯರನ್ನು ಕಾಡುತ್ತಿದೆ. ಭಾಗಮಂಡಲ- ನಾಪೋಕ್ಲು ರಸ್ತೆಯಲ್ಲಿ ಸುಮಾರು 300 ಮೀ. ಅಂತರದ ರಸ್ತೆ ಕೆಸರುಮಯವಾಗಿದೆ. ರಸ್ತೆಯ ಮಧ್ಯೆ ದೊಡ್ಡ ದೊಡ್ಡ ಹೊಂಡಗಳಾಗಿದ್ದು, ಕೆಸರಿನ ನಡುವೆ ವಾಹನಗಳ ಸಂಚಾರ ದುಸ್ತರವಾಗಿದೆ. ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಕೆಸರಿನ ಮಧ್ಯೆ ಸಿಲುಕಿ ಪರದಾಡುವಂತಾಗಿದೆ.
ಮೇಲ್ಸೇತುವೆಗೆ ಮಾಡಿದ ಪಿಲ್ಲರಿನ ಕಬ್ಬಿಣದ ತುಂಡುಗಳು ವಾಹನಗಳಿಗೆ ತಗಲುತಿದ್ದು, ವಾಹನ ಚಾಲಕರಿಗೆ ತೊಂದರೆ ಆಗುತ್ತಿದೆ. ಕೆಸರಿನಿಂದಾವೃತವಾದ ರಸ್ತೆಗೆ ಜಲ್ಲಿ ಹಾಗೂ ಕಲ್ಲು ಹಾಕಿ ಕೆಸರಿನಿಂದ ಮುಕ್ತಗೊಳಿಸಿ ವಾಹನ ಸಂಚಾರಕ್ಕೆ ಹಾಗೂ ನಡೆದಾಡಲು ಅವಕಾಶ ಮಾಡಿಕೊಡಬೇಕೆಂದು ಜನರು ಒತ್ತಾಯಿಸಿದ್ದಾರೆ.