ಶನಿವಾರಸಂತೆ, ಆ. 1: ಸಮೀಪದ ಕೊಡ್ಲಿಪೇಟೆಯ ಹ್ಯಾಂಡ್‍ಪೋಸ್ಟ್ ನಲ್ಲಿರುವ ಮಸ್ಜಿದುನ್ನೂರ್‍ನಲ್ಲಿ ತ್ಯಾಗ ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದವರು ಸರ್ಕಾರದ ನಿಯಮ ಪಾಲಿಸಿ ಸರಳವಾಗಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ಕೊಡ್ಲಿಪೇಟೆ ಶಾಫಿ ಮಸೀದಿಗೆ ಒಳಪಡುವ ಮೊಹಲ್ಲಾ ವ್ಯಾಪ್ತಿಯ ಹ್ಯಾಂಡ್‍ಪೋಸ್ಟ್‍ನ ಕೇಂದ್ರ ಮಸ್ಜಿದ್ ಮಸ್ಜಿದುನ್ನೂರ್ ಅಧೀನದಲ್ಲಿರುವ ಬ್ಯಾಡಗೊಟ್ಟ ಮತ್ತು ಕಲ್ಲುಕೋರೆ ಮಸ್ಜಿದ್ ಸೇರಿ 3 ಕಡೆ ಪ್ರಾರ್ಥನೆ ನಡೆಯಿತು.
ಪ್ರಾರ್ಥನೆಗೆ ಬರುವವರು ಪಾಲಿಸಬೇಕಾದ ನಿಯಮಗಳ ಫಲಕವನ್ನು ಮಸೀದಿ ಮುಂಭಾಗ ಅಳವಡಿಸಿದ್ದು, ಮಸ್ಜಿದುನ್ನೂರು ಆಡಳಿತ ಮಂಡಳಿ ಸದಸ್ಯರು ಪ್ರವೇಶ ದ್ವಾರದಲ್ಲೇ ಥರ್ಮಲ್ ಸ್ಕ್ಯಾನರ್ ಮೂಲಕ ಎಲ್ಲರನ್ನೂ ಸ್ಕ್ರೀನಿಂಗ್ ಮಾಡಿ ಒಳಬಿಡುತ್ತಿರುವ ದೃಶ್ಯ ಕಂಡುಬಂತು.
ಮಸ್ಜಿದುನ್ನೂರು ಪ್ರಮುಖ ಧರ್ಮ ಗುರು ಝಹೀರ್ ನಿಜಾಮಿ ಕಾರ್ಯಕ್ರಮ ನಿರ್ವಹಿಸಿದರು. ಕಲ್ಲುಕೋರೆ ಹಾಗೂ ಬ್ಯಾಡಗೊಟ್ಟ ಮಸ್ಜಿದ್‍ನಲ್ಲಿ ಧರ್ಮಗುರುಗಳಾದ ರಶೀದ್ ಅಮೀನಿ ಹಾಗೂ ಸಮೀರ್ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು.
ಆಡಳಿತ ಸಮಿತಿ ಅಧ್ಯಕ್ಷ ಡಿ.ಎ. ಸುಲೈಮಾನ್, ಪ್ರಧಾನ ಕಾರ್ಯದರ್ಶಿ ಹನೀಫ್, ಖಜಾಂಚಿ ಇಬ್ರಾಹಿಂ ಮಲ್ಲಳ್ಳಿ, ಸಹಕಾರ್ಯದರ್ಶಿ ಮಹಮ್ಮದ್, ಸದಸ್ಯರಾದ ಬಾಸಿತ್, ಸಾಬ್‍ಜಾನ್, ಸುಲೈಮಾನ್, ರಝಾಕ್ ಅರ್ಮಿ, ರಫೀಕ್, ಅಶ್ರಫ್ ರಹೀಂ, ನೌಫಲ್ ಇತರರು ಹಾಜರಿದ್ದರು.