ಭಾನುವಾರದ ಲಾಕ್‍ಡೌನ್ ರದ್ದು
ಬೆಂಗಳೂರು, ಜು. 30: ಕೇಂದ್ರ ಸರ್ಕಾರ ಅನ್‍ಲಾಕ್-3 ಮಾರ್ಗಸೂಚಿ ಬಿಡುಗಡೆ ಮಾಡಿದ ಮಾರನೇ ದಿನವೇ ರಾಜ್ಯ ಸರ್ಕಾರ ಸಹ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಆಗಸ್ಟ್ 2 ರಿಂದಲೇ ಜಾರಿಗೆ ಬರುವಂತೆ ಭಾನುವಾರದ ಲಾಕ್‍ಡೌನ್ ಅನ್ನು ರದ್ದುಗೊಳಿಸಿದೆ. ಅಲ್ಲದೇ ರಾತ್ರಿ ಕಫ್ರ್ಯೂವನ್ನು ಸಹ ರದ್ದು ಮಾಡಿದೆ.
ಮೂವರು ಯೋಧರು ಹುತಾತ್ಮ
ಇಂಫಾಲ್, ಜು. 30: ಮಯನ್ಮಾರ್ ಗಡಿಯಲ್ಲಿನ ನಾಲ್ಕನೇ ಅಸ್ಸಾಂ ರೈಫಲ್ಸ್ ಯೂನಿಟ್ ಮೇಲೆ ಉಗ್ರರು ದಾಳಿ ನಡೆಸಿದ್ದು ಮೂವರು ಯೋಧರು ಹುತಾತ್ಮರಾಗಿದ್ದಾರೆ. ಮಯನ್ಮಾರ್‍ನ ಗಡಿಯ ಸಮೀಪ ಮಣಿಪುರದ ಚಾಂಡೆಲ್ ಜಿಲ್ಲೆಯಲ್ಲಿ ಸ್ಥಳೀಯ ಗುಂಪಿನ ಪೀಪಲ್ಸ್ ಲಿಬರೇಶನ್ ಆರ್ಮಿಯ ಭಯೋತ್ಪಾದಕರು ಹೊಂಚು ಹಾಕಿ ದಾಳಿ ನಡೆಸಿದ್ದಾರೆ. ಇದರಲ್ಲಿ 4 ಅಸ್ಸಾಂ ರೈಫಲ್ಸ್ ಘಟಕದ ಮೂವರು ಯೋಧರು ಪ್ರಾಣ ಕಳೆದುಕೊಂಡಿದ್ದು ನಾಲ್ವರು ಗಾಯಗೊಂಡಿದ್ದಾರೆ. ಗಸ್ತಿನಲ್ಲಿದ್ದ ಭಾರತೀಯ ಯೋಧರ ಮೇಲೆ ಭಯೋತ್ಪಾದಕರು ಐಇಡಿ ಸ್ಫೋಟಿಸಿದ್ದು ಬಳಿಕ ಗುಂಡಿನ ದಾಳಿ ನಡೆಸಿದ್ದಾರೆ. ಮಯನ್ಮಾರ್ ಬಂಡುಕೋರರಿಗೆ ಚೀನಾ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದ್ದು ಈ ಮೂಲಕ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿದೆ ಎಂಬ ಹೇಳಿಕೆ ಬೆನ್ನಲ್ಲೇ ಇದೀಗ ಉಗ್ರರು ಭಾರತೀಯ ಸೇನೆ ಮೇಲೆ ದಾಳಿ ನಡೆಸಿದ್ದಾರೆ. ಮಯನ್ಮಾರ್ ಹಿರಿಯ ಜನರಲ್ ಮಿನ್ ಆಂಗ್ ಹೇಲಿಂಗ್ ಅವರು ಮಯನ್ಮಾರ್‍ನಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕರ ಸಂಘಟನೆಗಳನ್ನು ಬಲಾಢ್ಯರಾಷ್ಟ್ರ ಬೆಂಬಲಿಸುತ್ತಿದೆ ಎಂದು ಹೇಳಿದರು.
ಎಂಎಲ್‍ಸಿಗಳಿಂದ ಪ್ರಮಾಣ ವಚನ
ಬೆಂಗಳೂರು, ಜು. 30: ನಾಮ ನಿರ್ದೇಶನಗೊಂಡ ಐವರು ವಿಧಾನ ಪರಿಷತ್ ಸದಸ್ಯರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸಿನಿಮಾ ಕ್ಷೇತ್ರದಿಂದ ಸಿ.ಪಿ. ಯೋಗೇಶ್ವರ್, ಸಾಹಿತ್ಯ ಕ್ಷೇತ್ರದಿಂದ ಹೆಚ್. ವಿಶ್ವನಾಥ್, ಸಮಾಜ ಸೇವೆ ಶಾಂತಾರಾಮ್ ಸಿದ್ದಿ, ಭಾರತಿ ಶೆಟ್ಟಿ ಹಾಗೂ ಶಿಕ್ಷಣ ಕ್ಷೇತ್ರದಿಂದ ಡಾ. ತಳವಾರ್ ಸಾಬಣ್ಣ ಅವರು ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ನೂತನ ಶಾಸಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ತಮಿಳುನಾಡಿನಲ್ಲಿ ಲಾಕ್‍ಡೌನ್ ವಿಸ್ತರಣೆ
ಚೆನ್ನೈ, ಜು. 30: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ನಿಯಂತ್ರಣ ಮೀರಿ ಏರಿಕೆಯಾಗುತ್ತಲೇ ಇರುವ ಹಿನ್ನೆಲೆ ತಮಿಳುನಾಡು ಸರ್ಕಾರ ಆ. 31 ರವರೆಗೆ ಲಾಕ್‍ಡೌನ್ ವಿಸ್ತರಿಸಿ ಆದೇಶ ಹೊರಡಿಸಿದೆ. ಈ ಹಿಂದೆ ನೀಡಿದ್ದ ವಿನಾಯಿತಿ ಮತ್ತು ನಿರ್ಬಂಧಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರ ಅಬಿಪ್ರಾಯಗಳ ಆಧಾರದ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ತಿಳಿಸಿದ್ದಾರೆ.