ಮಡಿಕೇರಿ, ಜು. 30: ಜಿಲ್ಲೆಯ ಕೊರೊನಾ ಸಾವಿನ ಪಟ್ಟಿಗೆ ಇಂದು ಇಬ್ಬರು ಸೇರ್ಪಡೆಯಾಗುವ ಮೂಲಕ ಕೊರೊನಾ ಸಂಬಂಧ ಸಾವಿನ ಸಂಖ್ಯೆ 9ಕ್ಕೆ ಏರಿದೆ. ಮಡಿಕೇರಿ ಆಜಾದ್ ನಗರದ ನಿವಾಸಿ, 54 ವರ್ಷದ ಮಹಿಳೆ ಹಾಗೂ ಪಾಲಿಬೆಟ್ಟದ 45 ವರ್ಷದ ಪುರುಷ ಆರೋಗ್ಯಕರ್ತ, ಇವರಿಬ್ಬರೂ ಮೃತಪಟ್ಟಿದ್ದು, ಬಳಿಕ ಕೊರೊನಾ ‘ಪಾಸಿಟಿವ್’ ವರದಿ ಬಂದಿದ್ದು, ಕೊರೊನಾ ಸಾವು ಎಂದೇ ಪರಿಗಣಿಸಲಾಗಿದೆ. ಇವರಿಬ್ಬರೂ ತಾ. 29 ರಂದೇ ನಿಧನರಾಗಿದ್ದಾರೆ. ಮೃತಪಟ್ಟವರ ವಿವರ ಪಾಲಿಬೆಟ್ಟದ ನಿವಾಸಿ ಹಾಗೂ ಪಾಲಿಬೆಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದ 45 ವರ್ಷದ ಪುರುಷ (Sಐಇ) ಕಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಹಿಂದಿನಿಂದಲೂ ಚಿಕಿತ್ಸೆ ಪಡೆಯುತ್ತಿದ್ದರು. ತಾ. 19 ರಂದು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ತಾ.20 ರಂದು ಇವರ ಗಂಟಲು/ಮೂಗು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು, ತಾ.21 ರಂದು ‘ನೆಗೆಟಿವ್’ ವರದಿ ಬಂದಿತ್ತು. ನಂತರ ಇವರನ್ನು ಜಿಲ್ಲಾಸ್ಪತ್ರೆ (ಅಶ್ವಿನಿ)ಗೆ ಸ್ಥಳಾಂತರಿಸಲಾಗಿತ್ತು. ಮಧುಮೇಹ ಹಾಗೂ (Sಐಇ) ಕಾಯಿಲೆಗೆ ಇಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ತಾ. 29 ರಂದು ಇವರ ಆರೋಗ್ಯದಲ್ಲಿ ತೀವ್ರ ಏರುಪೇರು ಆಗಿದ್ದರಿಂದ ಪುನಃ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿ ತಕ್ಷಣವೇ ಐ.ಸಿ.ಯು. ಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ತಾ. 29 ರ ರಾತ್ರಿ 8:50 ಕ್ಕೆ ಮೃತಪಟ್ಟರು. ಇವರ ಶರೀರವನ್ನು ವಾರಿಸುದಾರರಿಗೆ ಹಸ್ತಾಂತರಿಸಲಾಯಿತು. ತಾ.30 ರಂದು ಬಂದ ವರದಿಯಲ್ಲಿ ಇವರಿಗೆ ಸೋಂಕು ಇದ್ದದ್ದು ಖಚಿತವಾಯಿತು. ಆದ್ದರಿಂದ ಕೊರೊನಾ ಸಾವು ಎಂದೇ ಪರಿಗಣಿಸಲಾಗಿದೆ.

ಮಡಿಕೇರಿಯ ಆಜಾದ್ ನಗರದ ನಿವಾಸಿ, 54 ವರ್ಷದ ಮಹಿಳೆಯೊಬ್ಬರಿಗೆ ಹಲವು ದಿನಗಳಿಂದ ಜ್ವರ ಇದ್ದು, ನಗರದ ಖಾಸಗಿ ಕ್ಲಿನಿಕ್‍ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.

(ಮೊದಲ ಪುಟದಿಂದ) ತಾ.29 ರಂದು ರಾತ್ರಿ ಉಸಿರಾಟದ ಸಮಸ್ಯೆ ತೀವ್ರವಾಗಿ ಕಾಣಿಸಿಕೊಂಡ ಕಾರಣ ರಾತ್ರಿ 7.30 ಗಂಟೆಗೆ ಮಡಿಕೇರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ತಕ್ಷಣ ಚಿಕಿತ್ಸೆ ನೀಡಿದರೂ ಸಹ ಫಲಕಾರಿಯಾಗದೆ ಅದೇ ದಿನ ರಾತ್ರಿ 8.45ಕ್ಕೆ ಸಾವನ್ನಪ್ಪಿದರು. ಅವರ ಗಂಟಲು ದ್ರವ ಮಾದರಿಯನ್ನು ಆ್ಯಂಟಿಜೆನ್ ಕಿಟ್ ಮೂಲಕ ಪರೀಕ್ಷಿಸಲಾಗಿ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮೃತಪಟ್ಟ ಎಲ್ಲಾ ಪ್ರಕರಣಗಳಲ್ಲೂ ಉಸಿರಾಟದ ತೊಂದರೆಯಿದ್ದು, ಕೋವಿಡ್ ಆಸ್ಪತ್ರೆಗೆ ತಡವಾಗಿ ಬಂದ ಪ್ರಕರಣಗಳಾಗಿವೆ. ಆದ್ದರಿಂದ ಉಸಿರಾಟದ ಸಮಸ್ಯೆ ಇರುವವರು ತಕ್ಷಣವೇ ಕೋವಿಡ್ ಆಸ್ಪತ್ರೆಗೆ ಬಂದು ದಾಖಲಾಗಲು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.

ಹೊಸ 25 ಪ್ರಕರಣಗಳು

ಹೆಬ್ಬಾ¯ ಸಮೀಪದ ಹುಲುಸೆಯ 45 ವರ್ಷದ ಮಹಿಳೆ, 52 ವರ್ಷದ ಪುರುಷ, 33 ವರ್ಷದ ಪುರುಷ, 23 ವರ್ಷದ ಮಹಿಳೆ, 2 ವರ್ಷದ ಬಾಲಕಿ, 27 ವರ್ಷದ ಪುರುಷÀ ಮತ್ತು 40 ವರ್ಷದ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಎಮ್ಮೆಮಾಡುವಿನ 52 ವರ್ಷದ ಪುರುಷ, ಸಿದ್ದಾಪುರದ 64 ವರ್ಷದ ಮಹಿಳೆ, ನೆಲ್ಲಿಹುದಿಕೇರಿಯ 33 ವರ್ಷದ ಪುರುಷ ಮತ್ತು ಮಡಿಕೇರಿ ಮಹದೇವಪೇಟೆಯ ಎ.ವಿ. ಸ್ಕೂಲ್ ಬಳಿಯ 54 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ವೀರಾಜಪೇಟೆಯ ಮೊಗರಗಳ್ಳಿಯ 37 ವರ್ಷದ ಮಹಿಳೆ ಮತ್ತು 16 ವರ್ಷದ ಬಾಲಕ, ಕಾಕೋಟುಪರಂಬುವಿನ 14 ವರ್ಷದ ಬಾಲಕಿ, ಮೇಕೇರಿ ಬಳಿಯ ಸುಭಾಷ್ ನಗರದ 31 ವರ್ಷದ ಪುರುಷ, ಸುಂಟಿಕೊಪ್ಪದ ಕಾನ್‍ಬೈಲ್ ಸಮೀಪದ ಮಂಜಿಕೆರೆಯ 50 ವರ್ಷದ ಪುರುಷ, ಕುಶಾಲನಗರ ಬಳಿಯ ಬಸವನಹಳ್ಳಿಯ 51 ವರ್ಷದ ಪುರುಷ, ಪಾಲಂಗಾಲದ 60 ವರ್ಷದ ಮಹಿಳೆ ಮತ್ತು 34 ವರ್ಷದ ಪುರುಷ, ಚೆಯ್ಯಂಡಾಣೆ ಸಮೀಪದ ಮರಂದೋಡು ಗ್ರಾಮದ 9ನೇ ಮೈಲಿನ 40 ವರ್ಷದ ಮಹಿಳೆ ಹಾಗೂ 56 ವರ್ಷದ ಪುರುಷ, ಮಡಿಕೇರಿ ಎಫ್.ಎಂ.ಸಿ ಬಳಿಯ 32 ವರ್ಷದ ಮಹಿಳೆ, ಮಡಿಕೇರಿಯ ಗದ್ದಿಗೆ ಸಮೀಪದ ತ್ಯಾಗರಾಜ ಕಾಲೋನಿಯ 68 ವರ್ಷದ ಮಹಿಳೆ, ಮಡಿಕೇರಿ ಮಹದೇವಪೇಟೆಯ 25 ವರ್ಷದ ಮಹಿಳೆ, ಪಾಲಿಬೆಟ್ಟ ಆರೋಗ್ಯ ಕೇಂದ್ರದ 45 ವರ್ಷದ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್-19 ದೃಢಪಟ್ಟಿದೆ.

ಜಿಲ್ಲೆಯಲ್ಲಿ ಇದುವರೆಗೆ 399 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 289 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 9 ಮಂದಿ ಸಾವನ್ನಪ್ಪಿದ್ದು, 101 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯಾದ್ಯಂತ 99 ನಿಯಂತ್ರಿತ ಪ್ರದೇಶಗಳಿವೆ.