60 ತುಂಬಿದವರು - 10 ರ ಕೆಳಗಿನವರು ಎಚ್ಚರದಿಂದಿರಿ... ಎಂಬ ದಿನಂಪ್ರತಿಯ ಘೋಷಣೆಗಳಲ್ಲಿ ಅರ್ಥವಿದೆಯಾದರೂ, ಆ ವಯಸ್ಕರು ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಲಾಕ್‍ಡೌನ್ ರದ್ದಾಗಿದ್ದರೂ ‘ಮನೆಬಿಟ್ಟು ಹೊರಬರಬೇಡಿ, ಇರುವುದೊಂದೇ ಜೀವ’ ಎಂಬ ಹಾಡಂತೂ ಮುಂಜಾನೆಯ ಪ್ರಾರ್ಥನೆಯಾಗಿ ನಗರ ಸಂಚಾರ ಮಾಡುತ್ತಿರುವುದು ಎಚ್ಚರಿಕೆಗಿಂತಾ, ಮಾನಸಿಕ ಕಾಯಿಲೆಗೆ ಇಂಬುಕೊಟ್ಟಂತಾಗುತ್ತಿದೆ.ಸುಮಾರು 5 ತಿಂಗಳ ಕಾಲದ ಕೊರೊನಾ ಅವಧಿಯಲ್ಲಿ ಏಳುಬೀಳುಗಳು, ಮಾನಸಿಕ ತಳಮಳಗಳು, ಆರ್ಥಿಕ ಹಿಂಜರಿಕೆ, ದೈಹಿಕ ಬಳಲಿಕೆ, ಸಾಮಾಜಿಕ ಬದಲಾವಣೆಗಳನ್ನು ನೋಡಿದ್ದೇವೆ.ಮೊದಲು ಚೀನಾ, ನಂತರ ಭಾರತ, ಆನಂತರ ಕರ್ನಾಟಕ, ಬಳಿಕ ಕೊಡಗು, ಇದೀಗ ನಮ್ಮ ಸುತ್ತಲೇ ಕೊರೊನಾ ಸುತ್ತುತ್ತಿರುವ ದಿನನಿತ್ಯದ ಬೆಳವಣಿಗೆಯಲ್ಲಿ ಕೊರೊನಾ ಆತಂಕ ಎಲ್ಲರನ್ನೂ ಆವರಿಸದೆ ಇರಲಾರದು.ಪಾಸಿಟಿವ್ ಆಗಿಬಿಟ್ಟರೆ ಹೇಗೆ ಎನ್ನುವ ದುಗುಡದಲ್ಲಿ ಹೆಚ್ಚಿನ ಜನ ಗಲಿಬಿಲಿಗೊಂಡಿದ್ದಾರೆ.

ಆದರೆ ಕೊರೊನಾ ಸೋಂಕಿಗೆ ಒಳಪಟ್ಟು ಚಿಕಿತ್ಸೆ ಪಡೆದು ಗುಣಮುಖರಾದವರು ಮಂದಹಾಸದಿಂದ ಹೊರಬಂದು ಧೈರ್ಯದ ಮಾತುಗಳನ್ನಾಡುತ್ತಿದ್ದಾರೆ.

ವ್ಯಸನಕ್ಕೆ ಒಳಗಾಗದಂತೆ - ಚಿಂತೆಗೆ ಮನಸ್ಸನ್ನು ತಳ್ಳದಂತೆ - ಧೈರ್ಯದ ಭರವಸೆಗಳನ್ನು ಸುತ್ತಮುತ್ತಲಿನ ಜನಕ್ಕೆ, ಮನೆ ಮಂದಿಗೆ, ಕುಟುಂಬದವರೊಂದಿಗೆ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿಯೂ ಸಾಕಷ್ಟು ಮಂದಿ ಯಾವುದೇ ಮುಜುಗರವಿಲ್ಲದೆ ತಮ್ಮ ಅನುಭವಗಳನ್ನು ‘ಶಕ್ತಿ’ಯ ಓದುಗರೊಂದಿಗೆ ಹಂಚಿಕೊಳ್ಳಲು ಮುಂದಾಗಿದ್ದಾರೆ.

ಅವರ ಸ್ವ ಅನುಭವ ಜಿಲ್ಲೆಯ ಜನತೆಯ ಮನೋಸ್ಥೈರ್ಯವನ್ನು ಹೆಚ್ಚಿಸಲು - ಆತಂಕವನ್ನು ದೂರಮಾಡಲು - ಈ ಸಂದರ್ಭ ಎದುರಾದರೆ ಧೈರ್ಯಗುಂದದೆ ಎದುರಿಸಲು ನೆರವಾಗಲಿ ಎನ್ನುವ ಉದ್ದೇಶ ಮಾತ್ರ ಹೊಂದಿದೆ.

ಅನುಭವಸ್ಥರ ಸಾಂತ್ವನದ ಧೈರ್ಯ ತುಂಬುವ ಮಾತುಗಳಿಗಷ್ಟೇ ಇಲ್ಲಿ ಒತ್ತು; ಅವರ ಊರು, ಮತ, ಧರ್ಮಗಳಿಗಲ್ಲ ಎಂಬದನ್ನು ಸ್ಪಷ್ಟಪಡಿಸುತ್ತಿದ್ದೇವೆ.

ಆಗಸ್ಟ್ 1 ರಿಂದ ಸರಣಿ ‘ಬದುಕು ಭರವಸೆ’ ಪ್ರಕಟಗೊಳ್ಳಲಿದೆ.

- ಸಂಪಾದಕ.