ಮಡಿಕೇರಿ, ಜು. 30: ಕೊಡಗಿನ ಏಕೈಕ ಹಾರಂಗಿ ಅಣೆಕಟ್ಟೆಗೆ ವರಮಹಾಲಕ್ಷ್ಮೀ ಹಬ್ಬದ ದಿನವಾದ ತಾ. 31 ರಂದು (ಇಂದು) ವಿಶೇಷ ಪೂಜೆಯೊಂದಿಗೆ ಬಾಗಿನ ಅರ್ಪಿಸುವ ಮೂಲಕ, ರೈತರ ಕೃಷಿ ಚಟುವಟಿಕೆಗೆ ಆಸರೆಯಾಗಿ, ನಾಲೆಗಳಿಗೆ ನೀರು ಬಿಡಲಾಗುವದು ಎಂದು, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ತಿಳಿಸಿದ್ದಾರೆ.ಇಂದು ರಾಜಧಾನಿ ಬೆಂಗಳೂರಿನಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಕಾವೇರಿ ಅಚ್ಚುಕಟ್ಟು ಪ್ರದೇಶದ ಜಲಾನಯನ ಪ್ರಾಧಿಕಾರ ಸಮಿತಿಯ ಸಭೆ ನಡೆದು, ರೈತರಿಗೆ ನಾಲೆಗಳ ಮೂಲಕ ಮುಂಗಾರು ಕೃಷಿಚಟುವಟಿಕೆಗೆ ತಕ್ಷಣ ನೀರು ಹರಿಸಲು ತೀರ್ಮಾನಕೈಗೊಳ್ಳ ಲಾಗಿದೆ ಎಂದು ಅವರು ತಿಳಿಸಿದ್ದಾರೆ.ಬೆಂಗಳೂರಿನಲ್ಲಿ ಇಂದು ನಡೆದ ಈ ಸಭೆಯಲ್ಲಿ ‘ಕಾಡಾ’ ವ್ಯಾಪ್ತಿಯ ಶಾಸಕರುಗಳಾದ ಎ.ಟಿ. ರಾಮಸ್ವಾಮಿ, ಮಹದೇವು, ಸಂಸದ ಪ್ರತಾಪ್ ಸಿಂಹ ಹಾಗೂ ತಾವು ಬಾಗಿಯಾಗಿದ್ದಾಗಿ ವಿವರಿಸಿದ ಅಪ್ಪಚ್ಚುರಂಜನ್ ಅವರು, ಸಂಬಂಧಿಸಿದ ಅಧಿಕಾರಿಗಳಿಗೆ ರೈತರ ಕೃಷಿಗಾಗಿ ನೀರು ಹರಿಸಲು ಸಚಿವರು ಸೂಚಿಸಿರುವದಾಗಿ ಮಾಹಿತಿ ನೀಡಿದರು. ಆ ದಿಸೆಯಲ್ಲಿ ತಾ. 31 ರಂದು ಬೆಳಿಗ್ಗೆ 9 ಗಂಟೆಗೆ ಹಾರಂಗಿ ಜಲಾಶಯಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಬಾಗಿನ ಅರ್ಪಿಸಲಾಗುವದು ಎಂದು ತಿಳಿಸಿದ ಅವರು, ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸ ಲಾಗುವದು ಎಂಬದಾಗಿ ಮಾರ್ನು ಡಿದರು. ಹಾರಂಗಿ ಜಲಾನಯನ ಪ್ರದೇಶದಲ್ಲಿ ನಾಟಿಕೆಲಸಕ್ಕೆ ತೊಂದರೆ ಗಮನಿಸಿ ಈ ತೀರ್ಮಾನ ಕೈಗೊಂಡಿದ್ದು, ಬೆ. 9.30ಕ್ಕೆ ನಾಲೆಗಳಿಗೆ ನೀರು ಬಿಡುತ್ತಿರುವದಾಗಿಯೂ ವಿವರಣೆ ನೀಡಿದರು.
ಜಲಾಶಯ ನೀರಿನ ಮಟ್ಟ : ಹಾರಂಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2859 ಅಡಿಗಳಾಗಿದ್ದು, ಪ್ರಸ್ತುತ 2857.50 ಅಡಿಗಳಷ್ಟು ನೀರು ಶೇಖರಣೆಗೊಂಡಿದೆ. ಜಲಾಶಯಕ್ಕೆ 566 ಕ್ಯೂಸೆಕ್ಸ್ ಒಳ ಹರಿವಿನೊಂದಿಗೆ 798 ಕ್ಯೂಸೆಕ್ಸ್ ನದಿಗೆ ಬಿಡಲಾಗುತ್ತಿದೆ. ಈಚೆಗೆ ಜಲಾಶಯದಿಂದ ನೀರು ಹೊರಬಿಡುವದರೊಂದಿಗೆ, ಕೊಡಗಿ ನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ದ್ದರಿಂದ ಮತ್ತೆ ಸ್ಥಗಿತಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಕೂಡಿಗೆ ವರದಿ : ಉಸ್ತುವಾರಿ ಸಚಿವ ಸೋಮಣ್ಣ ಅಧ್ಯಕ್ಷತೆಯಲ್ಲಿ ಹಾರಂಗಿ ಅಚ್ಚುಕಟ್ಟು ಪ್ರದೇಶಕ್ಕೆ ಕೊಡಗು ಸೇರಿದಂತೆ ಹಾಸನ, ಮೈಸೂರು ಜಿಲ್ಲೆಯ 1,34,985 ಎಕರೆ ಪ್ರದೇಶಗಳಿಗೆ ಅರೆ ಮುಂಗಾರು ನೀರಾವರಿ ಬೆಳೆಗಳಿಗೆ ಮುಖ್ಯ ನಾಲೆಯಲ್ಲಿ ಹರಿಸಿ ನಂತರ ಕಣಿವೆ ಸಮೀಪದ ಎಡದಂಡೆ ನಾಲೆ ಮತ್ತು ಬಲದಂಡೆ ನಾಲೆಯ ಮೂಲಕ ಮೂರು ಜಿಲ್ಲೆಗಳ ರೈತರ ಬೇಸಾಯಕ್ಕೆ ನೀರನ್ನು ಹರಿಸಲಾಗುವದು ಎಂದು ಕಾರ್ಯಪಾಲಕ ಅಭಿಯಂತರ ರಾಜೇಗೌಡ ತಿಳಿಸಿದ್ದಾರೆ.