ವೀರಾಜಪೇಟೆ, ಜು. 29: ಮನೆಯಲ್ಲಿನ ಕಿತ್ತು ತಿನ್ನುವ ಬಡತನ ಹಾಗೂ ಸಮಸ್ಯೆಗಳ ಸರಮಾಲೆಯ ನಡುವೆ ಸÀಮೀಪದ ಹೆಗ್ಗಳ ಗ್ರಾಮದ ಹುಡುಗಿ ಈ ಬಾರಿಯ ದ್ವಿತೀಯ ಪಿಯುನಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣವಾಗಿ ಉತ್ತಮ ಸಾಧನೆ ತೋರಿದ್ದಾಳೆ.

ಹೆಗ್ಗಳ ಗ್ರಾಮದ ಟಿ.ಕೆÀ. ಭವಾನಿ ಎಂಬ ವಿದ್ಯಾರ್ಥಿನಿ ಬಡತನದ ಇತರ ಸಮಸ್ಯೆಗಳ ನಡುವೆಯೂ ಉತ್ತಮ ಸಾಧನೆ ಮಾಡಿದ್ದಾಳೆ. ವೀರಾಜಪೇಟೆಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಇತ್ತೀಚೆಗೆ ಪ್ರಕಟವಾದ ದ್ವಿತೀಯ ಪಿಯು ಫಲಿತಾಂಶದಲ್ಲಿ ಶೇ. 86 ರಷ್ಟು ಅಂಕಗಳಿಸಿದ್ದಾಳೆ. ಅತಿ ಹೆಚ್ಚು ಅಂಕ ಗಳಿಸಿದವರಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಮೊದಲ ಸ್ಥಾನ ಪಡೆದರೆ, ಒಟ್ಟಾರೆಯಾಗಿ ಕಾಲೇಜಿನಲ್ಲಿ ಎರಡನೇ ಸ್ಥಾನ ಗಳಿಸಿ ಕೊಂಡಿದ್ದಾಳೆ. ಕನ್ನಡದಲ್ಲಿ 96, ಇಂಗ್ಲೀಷ್‍ನಲ್ಲಿ 66, ಇತಿಹಾಸದಲ್ಲಿ 93, ಲೆಕ್ಕಶಾಸ್ತ್ರದಲ್ಲಿ 80, ಅರ್ಥಶಾಸ್ತ್ರದಲ್ಲಿ 85 ಹಾಗೂ ವ್ಯವಹಾರ ಅಧ್ಯಯನ ಶಾಸ್ತ್ರದಲ್ಲಿ ಭವಾನಿ ಗಳಿಸಿದ ಅಂಕ 96. ಭವಾನಿಯ ಕುಟುಂಬದ ಹಿನ್ನೆಲೆಯನ್ನು ನೋಡಿದಾಗ ಮಾತ್ರ ಭವಾನಿಯ ಸಾಧನೆ ನಿಜಕ್ಕೂ ಶ್ರೇಷ್ಠ ಎಂದೆನಿಸದಿರದು.

ಶೈಕ್ಷಣಿಕವಾಗಿ ಉತ್ತಮ ಸಾಧನೆ ತೋರಿರುವ ಭವಾನಿಯ ಮನೆಯ ಸ್ಥಿತಿ ಮಾತ್ರ ಮನಕಲಕುವಂತಿದೆ. ಹೆಗ್ಗಳ ಗ್ರಾಮದಲ್ಲಿ ತಾಯಿ ಪುಷ್ಪಾರೊಂದಿಗೆ ನೆಲೆಸಿರುವ ಭವಾನಿ ತಂದೆ ಕೃಷ್ಣನನ್ನು ಬಾಲ್ಯದಲ್ಲಿಯೇ ಕಳೆದುಕೊಂಡಾಕೆ. ಒಂದೇ ಕೋಣೆಯಿರುವ, ವಿದ್ಯುತ್, ಶೌಚಾಲಯಗಳಿಲ್ಲದ ಪುಟ್ಟ ಮನೆಯೇ ಇವರ ಆಸರೆಯ ಅರಮನೆ. ವಿದ್ಯುತ್, ಶೌಚಾಲಯ ಸೇರಿದಂತೆ ಉಜ್ವಲ ಯೋಜನೆಯ ಗ್ಯಾಸ್ ಸಂಪರ್ಕವಾಗಲಿ ಇನ್ನೂ ಈ ಬಡ ಕುಟುಂಬವನ್ನು ತಲುಪಿಲ್ಲ. ಕನಿಷ್ಟ ಮೂಲಭೂತ ಸೌಲಭ್ಯಗಳು ಈ ಕುಟುಂಬಕ್ಕೆ ದೊರೆತಿಲ್ಲ. ಭವಾನಿ ತಾಯಿಯ ಆಧಾರ್ ಕಾರ್ಡ್‍ನಲ್ಲಿ ತಾಂತ್ರಿಕ ಸಮಸ್ಯೆಯಿರುವುದರಿಂದ ಪಡಿತರ ಚೀಟಿ ಪಡೆಯಲು ಕೂಡ ಸಾಧ್ಯವಾಗುತ್ತಿಲ್ಲ.

ತಾಯಿ ಹಾಗೂ ಈಕೆ ದುಡಿದರೆ ಮಾತ್ರ ಈ ಕುಟುಂಬದ ತುತ್ತಿನ ಚೀಲ ತುಂಬುತ್ತದೆ. ಅದರಲ್ಲೂ ಭವಾನಿಯ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇದರಿಂದ ಮನೆಯೊಂದಿಗೆ ತನ್ನ ವಿದ್ಯಾಭ್ಯಾಸಕ್ಕೆ ಬೇಕಾದ ಹಣ ಹಾಗೂ ಬಸ್ ಟಿಕೆಟ್‍ಗೆ ಬೇಕಾದ ಹಣ ತಾನೇ ಹೊಂದಿಸುವ ಜವಾಬ್ದಾರಿ ಭವಾನಿಯದ್ದಾಗಿದೆ. ಇದಕ್ಕಾಗಿ ಭಾನುವಾರ ಸೇರಿದಂತೆ ಕಾಲೇಜಿಗೆ ರಜೆ ಸಿಕ್ಕಾಗಲೆಲ್ಲ ಭವಾನಿ ಕೂಲಿ ಕೆಲಸಕ್ಕೆ ಹೋಗುತ್ತಾಳೆ.

ಭವಾನಿಯನ್ನು ‘ಶಕ್ತಿ’ ಸಂಪರ್ಕಿಸಿದಾಗ ನೆರೆಹೊರೆಯವರು ನನ್ನ ವಿದ್ಯಾಭ್ಯಾಸಕ್ಕೆ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಮನೆಯಲ್ಲಿ ವಿದ್ಯುತ್ ಸಂಪರ್ಕವಾಗಲಿ ಇತರ ವ್ಯವಸ್ಥೆಯಾಗಲಿ ಇಲ್ಲದಿದ್ದರಿಂದ ನಿತ್ಯ ರಾತ್ರಿ 7 ರಿಂದ 10 ರವರೆಗೆ ನೆರೆಮನೆಗೆ ಹೋಗಿ ಓದಿನ ಅಭ್ಯಾಸ ಮಾಡುತ್ತಿದ್ದೆ. ಮುಂದಿನ ದಿನಗಳಲ್ಲಿ ಬಿ.ಕಾಂ., ಬಳಿಕ ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ ಉಪನ್ಯಾಸಕಿಯಾಗಬೇಕೆಂಬ ಗುರಿ ಹೊಂದಿದ್ದೇನೆ ಎನ್ನುತ್ತಾಳೆ.

ಸಹಾಯಹಸ್ತ : ವೀರಾಜಪೇಟೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಪ್ರಧಾನ ವ್ಯವಸ್ಥಾಪಕ ರೆ.ಫಾ. ಮದಲೈಮುತ್ತು ಹಾಗೂ ಗೋಣಿಕೊಪ್ಪ ವೈಸ್‍ಮನ್ ಕ್ಲಬ್ ಈ ಬಡ ವಿದ್ಯಾರ್ಥಿನಿ ಟಿ.ಕೆ. ಭವಾನಿಯ ಸಹಾಯಕ್ಕೆ ಬಂದಿದ್ದು ಭವಾನಿಯ ಪದವಿ ಹಾಗೂ ಉನ್ನತ ವ್ಯಾಸಂಗಕ್ಕೆ ಎಲ್ಲ ರೀತಿಯಿಂದಲೂ ಸಹಾಯ ಹಸ್ತ ನೀಡುವುದಾಗಿ ತಿಳಿಸಿದ್ದಾರೆ.

ಸಂತ ಅನ್ನಮ್ಮ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಪ್ರಥಮ ಬಿಕಾಂಗೆ ಇಂದು ಪ್ರವೇಶ ನೀಡಿದೆ. ಅಂತಿಮ ಪದವಿಯವರೆಗೂ ಈ ಉಚಿತ ಶಿಕ್ಷಣ ಭವಾನಿಗೆ ಮುಂದು ವರೆಯಲಿದೆ. ವಿದ್ಯಾರ್ಥಿನಿಗಿರುವ ಕಾಲೇಜಿನ ಸಮವಸ್ತ್ರ, ಪುಸ್ತಕಗಳನ್ನು ಕಾಲೇಜು ಆಡಳಿತ ಮಂಡಳಿ ಮೂರು ವರ್ಷದ ತನಕ ಉಚಿತವಾಗಿ ನೀಡಿ ಶಿಕ್ಷಣಕ್ಕೆ ಉತ್ತೇಜನ ನೀಡಲಿದೆ.

ಗೋಣಿಕೊಪ್ಪಲಿನ ವೈಸ್‍ಮನ್ ಕ್ಲಬ್ ಭವಾನಿ ವಿದ್ಯಾಭ್ಯಾಸಕ್ಕಾಗಿ ಮನೆಗೆ ಶೌಚಾಲಯ, ಓದುವ ಕೊಠಡಿ, ವಿದ್ಯುತ್ ಸಂಪರ್ಕ ಇತರ ಮೂಲ ಸೌಲಭ್ಯಗಳು ಹಾಗೂ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಇತರ ಖರ್ಚು ವೆಚ್ಚಗಳನ್ನು ಕ್ಲಬ್ ಪರವಾಗಿ ನೀಡಲಿರುವುದಾಗಿ ಅಧ್ಯಕ್ಷ ಬಿ. ರತ್ನಾಕರ ಶೆಟ್ಟಿ ‘ಶಕ್ತಿ’ಗೆ ತಿಳಿಸಿದ್ದಾರೆ.

ವೈಸ್‍ಮನ್ ಕ್ಲಬ್‍ನ ಕಾರ್ಯದರ್ಶಿ ಅಂತೋಣಿ ರಾಬಿನ್ ಮಾತನಾಡಿ, ಭವಾನಿಯ ವಿದ್ಯಾಭ್ಯಾಸಕ್ಕೆ ತೊಡಕಾಗುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು. ಕಾಲೇಜಿನ ಪ್ರವೇಶಕ್ಕೂ ಸಹಾಯ ಹಸ್ತ ನೀಡಲಾಗುವುದು ಮುಂದಿನ ಉನ್ನತ ಶಿಕ್ಷಣಕ್ಕೂ ಸಹಾಯ ಮಾಡಲಾಗುವುದು ಎಂದರು.

-ಡಿ.ಎಂ.ಆರ್