ಕರಿಕೆ, ಜು. 28: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸರಕಾರದ ಸಾಧನೆ ಯನ್ನು ಮನೆ ಮನೆ ತಲುಪಿಸುವ ಕಾರ್ಯಕ್ರಮಕ್ಕೆ ರಾಜ್ಯ ಸರಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡುವುದರ ಮೂಲಕ ಚಾಲನೆ ನೀಡಿದರು.

ನಂತರ ಕಾರ್ಯಕರ್ತರು, ವಾಯ್ಸ್ ಆಪ್ ಸಂಘಟನೆಯ ಸದಸ್ಯರು ಕರಿಕೆಯ ಗಡಿ ಚೆಂಬೇರಿ ಯಿಂದ ಚೆತ್ತುಕಾಯ ತನಕ ಸುಮಾರು ಎಂಟು ಕಿ.ಮಿ. ದೂರದವರೆಗೆ ಪ್ಲಾಸ್ಟಿಕ್, ಬಾಟಲಿ, ಕಸಕಡ್ಡಿಗಳನ್ನು ಹೆಕ್ಕಿ ಸ್ವಚ್ಛತಾ ಕಾರ್ಯ ನಡೆಸಿದರು. ವಾಯ್ಸ್ ಆಪ್ ಸಂಘಟನೆ ಸಂಗ್ರಹಿಸಿದ ಸುಮಾರು ಇನ್ನೂರು ಬಡಜನರಿಗೆ ದಿನಸಿ ಸಾಮಗ್ರಿಗಳ ಕಿಟ್ಟನ್ನು ಶಾಸಕ ಕೆ.ಜಿ. ಬೋಪಯ್ಯ, ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಸದಸ್ಯೆ ಕವಿತಾ ಪ್ರಭಾಕರ್ ವಿತರಿಸಿದರು. ನಂತರ ಸರಕಾರದ ಹಸಿರು ಕರ್ನಾಟಕ ಯೋಜನೆಯಡಿಯಲ್ಲಿ ಜಿಲ್ಲೆಯ ಗಡಿಯಲ್ಲಿ, ಗ್ರಾಮ ಪಂಚಾಯಿತಿ ಆವರಣದಲ್ಲಿ ಗಿಡಗಳನ್ನು ಶಾಸಕರು ಹಾಗೂ ಗ್ರಾಮಸ್ಥರು ನೆಟ್ಟರು.ಸ್ಥಳೀಯ ಆರೋಗ್ಯ ವಿಸ್ತರಣಾ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು ಅಲ್ಲಿನ ವ್ಯವಸ್ಥೆ ಗಳನ್ನು ಪರಿಶೀಲನೆ ಮಾಡಿದರು. ವೈದ್ಯಾಧಿಕಾರಿ ಡಾ. ಪುಂಡಲಿ ಕೃಷ್ಣ ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆ ಇದ್ದು ಬ್ಯಾಟರಿ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದಾಗ ಕೂಡಲೇ ಡಿಹೆಚ್‍ಓ, ತಾಲೂಕು ಕಾರ್ಯನಿರ್ವಾ ಹಣಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತಕ್ಷಣ ಇನ್ವರ್ಟರ್ ಒದಗಿಸುವಂತೆ ಸೂಚನೆ ನೀಡಿದರು.

ಇದರ ಬಗ್ಗೆ ಕೂಡಲೇ ಕ್ರಮವಹಿಸುವಂತೆ ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು. ನಂತರ ಭಾಜಪ ಗ್ರಾಮ ಸಮಿತಿ ಅಧ್ಯಕ್ಷ ಹೊಸಮನೆ ಹರೀಶ್ ಗ್ರಾಮದ ಸಮಸ್ಯೆಯಾದ ಗಡಿ ರಸ್ತೆಯ ಮಣ್ಣು ತೆರವು, ನಿಡ್ಯಮಲೆ ಪೆರಾಜೆ ಸಂಪರ್ಕ ರಸ್ತೆ, ಮೊಬೈಲ್ ಟವರ್ ಸೇರಿದಂತೆ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಶಾಸಕರಿಗೆ ಗ್ರಾಮಸ್ಥರ ಪರವಾಗಿ ಮನವಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕರು ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದ್ದು, ಸರಕಾರದ ಸಾಧನೆಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಸರಕಾರದ ಕಾರ್ಯಕ್ರಮಕ್ಕೆ ಪ್ರಪ್ರಥಮವಾಗಿ ಗಡಿ ಗ್ರಾಮ ಕರಿಕೆಯಿಂದ ಇಂದು ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ನೇಕಾರರು, ಕಮ್ಮಾರರು ಹಾಗೂ ಕೂಲಿ ಕಾರ್ಮಿಕರಿಗೆ ಇಪ್ಪತ್ತು ಸಾವಿರ ರೂಪಾಯಿಯ ಪ್ಯಾಕೆಜ್ ನೀಡಿದ್ದು ಇನ್ನೂ ಮುಂದಕ್ಕೂ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿರಿಸಿ ಕೊಂಡು ಹಂತ ಹಂತವಾಗಿ ಜನಪರ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು.

ಭಾಗಮಂಡಲ-ಕರಿಕೆ ರಸ್ತೆ ಟೆಂಡರ್ ಆಗಿದ್ದು ಮಳೆಗಾಲ ಕಳೆದ ಕೂಡಲೇ ರಸ್ತೆ ಡಾಮರೀಕರಣ ಮಾಡಲಾಗುವುದು ಎಂದರು. ಗಡಿ ಜಿಲ್ಲೆಯಲ್ಲಿ ಸರಕಾರ ಮಾರ್ಚ್‍ನಲ್ಲಿ ತುರ್ತು ಕ್ರಮವಹಿಸಿ ಮಣ್ಣು ಸುರಿದು ರಸ್ತೆ ಬಂದ್ ಮಾಡಿದರ ಪರಿಣಾಮ ಕೊಡಗಿನ ಜನತೆ ಸುರಕ್ಷಿತವಾಗಿದ್ದು ಕೊರೊನಾ ಸೋಂಕು ಕೂಡ ಕಡಿಮೆಯಾಗಿದೆ. ಕೊರೊನಾ ಸಂದರ್ಭದಲ್ಲಿ ಭಯೋತ್ಪಾದನೆ ಸಂಘಟನೆಯು ಕೇರಳದಲ್ಲ್ಲಿ ಬೀಡು ಬಿಟ್ಟಿದ್ದು, ಕರ್ನಾಟಕ ರಾಜ್ಯಕ್ಕೆ ನುಸುಳಿ ಭಯೋತ್ಪಾದನಾ ಚಟುವಟಿಕೆ ನಡೆಸುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ಗಡಿಯಲ್ಲಿ ರಸ್ತೆ ತೆರೆದರೆ ಅಪಾಯ ಎದುರಾಗುವ ಸಾಧ್ಯತೆ ಇದೆ.

ನೆರೆಯ ಕೇರಳದ ಪಾಣತ್ತೂರುವಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸದ್ಯದಮಟ್ಟಿಗೆ ಗಡಿ ಜಿಲ್ಲೆಯ ರಸ್ತೆಯ ಮಣ್ಣು ತೆರವುಗೊಳಿಸುವ ಗಡಿಬಿಡಿಯ ನಿರ್ಧಾರ ಬೇಡವೆಂದರು. ಇದುವರೆಗೆ ಕೊರೊನಾ ಸಂಕಷ್ಟದ ಸಮಯದಲ್ಲಿ ತಮ್ಮ ದೈನಂದಿನ ಚಟುವಟಿಕೆಯನ್ನು ಕಷ್ಟವಾದರೂ ನಿರ್ವಹಿಸಿದ್ದು ಇದೀಗ ವೈರಸ್ ಮಧ್ಯೆ ಬದುಕಲು ಕಲಿಯಬೇಕೆಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಾಯ್ಸ್ ಆಪ್ ಸಂಘಟನೆಯ ಅಧ್ಯಕ್ಷ ಅತ್ತಿಕಾಯ ರಾಮಚಂದ್ರ, ಕಾರ್ಯದರ್ಶಿ ಸಿರಾಜ್, ಉಪಾಧ್ಯಕ್ಷ ಅಶ್ರಪ್, ಪ್ರಮುಖರಾದ ಕೋಡಿ ಪೆÇನ್ನಪ್ಪ, ಜಿಲ್ಲಾ ಯುವಮೋರ್ಚಾದ ಮಾಜಿ ಅಧ್ಯಕ್ಷ ಕಾಳನ ರವಿ, ನಿಡ್ಯಮಲೆ ನಂದ, ಕೀರ್ತನ್ ಕಡ್ಲೆರ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಿಪಿನ್ ಸೇರಿದಂತೆ ಗ್ರಾಮದ ಪ್ರಮುಖರು, ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.