ವೀರಾಜಪೇಟೆ, ಜು. 28: ಮಡಿಕೇರಿಯ ಪುರಾತನವಾದಕೋಟೆ ಹಾಗೂ ಅರಮನೆಯನ್ನು ಸ್ಮಾರಕವಾಗಿ ರಕ್ಷಿಸಲು ರಾಜ್ಯ ಸರಕಾರ ಸಮ್ಮತಿಸಿದ್ದು ಪುರಾತತ್ವ ಇಲಾಖೆಯ ವಿವರವಾದ ಯೋಜನಾ ವರದಿಯಂತೆ (ಡಿ.ಪಿ.ಆರ್) ಅಭಿವೃದ್ಧಿ ಕಾಮಗಾರಿಗಾಗಿ ರೂ. 10 ಕೋಟಿ 77 ಲಕ್ಷ ಬಿಡುಗಡೆ ಮಾಡಲು ಅನುಮೋದನೆ ನೀಡಿದ್ದು, ಈ ಮೊಬಲಗನ್ನು ಕೊಡಗು ಜಿಲ್ಲಾಧಿಕಾರಿಯ ಖಾತೆಗೆ ವರ್ಗಾಯಿಸಲು ನಿರ್ದೇಶಿಸಲಾಗಿದೆ ಎಂದು ಸರಕಾರದ ಪರ ವಕೀ¯ ವಿಜಯಕುಮಾರ್ ಪಾಟೀಲ್ ರಾಜ್ಯ ಉಚ್ಚನ್ಯಾಯಾಲಯದ ವಿಭಾಗೀಯ ಪೀಠದ ಮುಂದೆ ವಾದ ಮಂಡಿಸಿದರು.
ಕೊಡಗಿನ ನಿವೃತ್ತ ಐ.ಎ.ಎಸ್. ಅಧಿಕಾರಿ ಜೆ.ಎಸ್. ವಿರುಪಾಕ್ಷಪ್ಪ ಅವರು ಮಡಕೇರಿಯ ಕೋಟೆ ಹಾಗೂ ಅರಮನೆ ಶಿಥಿಲಗೊಂಡಿದ್ದು ಇದನ್ನು ಸ್ಮಾರಕವಾಗಿ ಶಾಶ್ವತವಾಗಿ ರಕ್ಷಿಸಿ ಉಳಿಸುವಂತೆ ರಾಜ್ಯ ಉಚ್ಚ ನ್ಯಾಯಾಲಯದ ಮುಂದೆ ರಿಟ್ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರಾದ ವಿರುಪಾಕ್ಷಪ್ಪ ಪರ ವಾದಿಸಿದ ಎನ್. ರವೀಂದ್ರನಾಥ್ ಕಾಮತ್ ಅವರು ಈಗಾಗಲೇ ಸುಮಾರು 50 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಅರಮನೆ ಕಾಮಗಾರಿ ನಿರ್ವಹಿಸಲಾಗಿದೆ. ಆದರೆ ಅರಮನೆ ಮಾಡು ಕಳಪೆ ಗುಣಮಟ್ಟದಿಂದ ಕೂಡಿದೆ. ಇದನ್ನು ಅನುಭವಿ ಇಂಜಿನಿಯರ್ರಿಂದ ಪರಿಶೀಲಿಸಿ ವರದಿಯನ್ನು ವಿಭಾಗೀಯ ಪೀಠದ ಮುಂದೆ ಮಂಡಿಸಬೇಕು. ಸರಕಾರದ ಅನುದಾನದಲ್ಲಿ ಪುರಾತತ್ವ ಇಲಾಖೆ ಶೇ. 23 ರಷ್ಟನ್ನು ಸೇವಾ ಶುಲ್ಕವಾಗಿ ವಿಧಿಸಿದ್ದು ಇದರಿಂದ ಅನುದಾನದ ಒಟ್ಟು ಹಣದಲ್ಲಿ ಸುಮಾರು ಎರಡೂವರೆ ಕೋಟಿ ಹಣ ಕಡಿಮೆಯಾಗಲಿದ್ದು, ಅಭಿವೃದ್ಧಿ ಕಾವiಗಾರಿಗೆ ಅಡಚಣೆ ಹಾಗೂ ಹಣದ ತೊಂದರೆಯಗಲಿದೆ. ಈ ಸೇವಾ ಶುಲ್ಕವನ್ನು ಮನ್ನಾ ಮಾಡುವಂತೆ ವಿಭಾಗೀಯ ಪೀಠದ ಮುಂದೆ ವಾದಿಸಿದರು.
ಪುರಾತತ್ವ ಇಲಾಖೆಯ ಪರವಾಗಿ ವಾದಿಸಿದ ವಕೀಲೆ ನಾಗಶ್ರೀ ಅವರು ಶೇ. 23 ರಷ್ಟು ಸೇವಾ ಶುಲ್ಕ ವಸೂಲಿಗೆ ಸಂಬಂಧಿಸಿದಂತೆ ಇನ್ನು 7 ದಿನಗಳ ಅವಧಿಯಲ್ಲಿ ವಿಭಾಗೀಯ ಪೀಠದ ಮುಂದೆ ಪ್ರಮಾಣ ಪತ್ರ ಸಲ್ಲಿಸುವುದಾಗಿ ಹೇಳಿದರು.
ರಾಜ್ಯದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಹಾಗೂ ನ್ಯಾಯಮೂರ್ತಿ ಸಚಿನ್ ಮಗುದಮ್ನ ವಿಭಾಗೀಯ ಪೀಠದ ಮುಂದೆ ವಾದ ವಿವಾದಗಳು ನಡೆದವು. ವಿಭಾಗೀಯ ಪೀಠ ವಿಚಾರಣೆಯನ್ನು 7-8-2020ಕ್ಕೆ ಮುಂದೂಡಿತು.