ಮಡಿಕೇರಿ, ಜು. 28: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ರಾಜ ಗದ್ದುಗೆ ಪ್ರದೇಶ ಹಾಗೂ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ಸಂಬಂಧಿಸಿರುವ ಭೂಮಿ ಮತ್ತು ಬಾಣೆ ಜಾಗ ಸೇರಿದಂತೆ; ನಗರಸಭಾ ವ್ಯಾಪ್ತಿಯಲ್ಲಿ ಸರಕಾರಿ ಜಾಗ ಅತಿಕ್ರಮಣಗೊಂಡಿರುವುದನ್ನು ಪತ್ತೆಹಚ್ಚಿ; ಸರಕಾರದ ಬೊಕ್ಕಸಕ್ಕೆ ಆದಾಯ ಕಲ್ಪಿಸುವಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆ ಮತ್ತು ನಗರ ಅಭಿವೃದ್ಧಿ ಪ್ರಾಧಿಕಾರ ಸೂಕ್ತ ಕ್ರಮಕೈಗೊ ಳ್ಳಬೇಕೆಂದು ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಬಿ. ರವಿ ಕುಶಾಲಪ್ಪ ಒತ್ತಾಯಿಸಿದ್ದಾರೆ.
ಈ ಬಗ್ಗೆ ‘ಶಕ್ತಿ’ಗೆ ಹೇಳಿಕೆ ನೀಡಿರುವ ಅವರು, ಅನೇಕ ವರ್ಷಗಳ ಹಿಂದೆಯೇ ಕೊಡಗಿನ ರಾಜರ ಗದ್ದುಗೆ ವ್ಯಾಪ್ತಿಯ ಹತ್ತಾರು ಎಕರೆ ಸರಕಾರಿ ಜಾಗ ಅತಿಕ್ರಮಣ ತೆರವುಗೊಳಿಸ ಬೇಕೆಂದು ನ್ಯಾಯಾಲಯ ನಿರ್ದೇಶಿ ಸಿದ್ದರೂ, ಆಡಳಿತ ವ್ಯವಸ್ಥೆ ಈ ಸಂಬಂಧ ಕ್ರಮ ಜರುಗಿ ಸದೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿ ಸಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಡಿಕೇರಿಯ ಕೂಟುಹೊಳೆ ಬಳಿ ದಶಕಗಳ ಹಿಂದೆ ನಗರದ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ದಾನಿಗಳು ಹತ್ತಾರು ಎಕರೆ ಜಾಗ ನೀಡಿದ್ದರೂ, ಸಂಬಂಧಪಟ್ಟವರ ನಿರ್ಲಕ್ಷ್ಯದಿಂದ ಈ ಜಾಗ ಮತ್ತೆ ಕೈ ತಪ್ಪುವ ಸಾಧ್ಯತೆ ಇದೆ ಎಂದು ರವಿ ಕುಶಾಲಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದ ಮಹದೇವಪೇಟೆಯಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ಪಾರ್ಷಿ ಮಹಿಳೆ ಮೇಟಿಫರಾಕ್ ಎಂಬವರು ದಾನ ನೀಡಿದ್ದಾರೆ. ಈ ಆಸ್ತಿಯಲ್ಲಿ ಶೇ. 50 ಭಾಗ ತಲಕಾವೇರಿ ಹಾಗೂ ಭಾಗಮಂಡಲ ಕ್ಷೇತ್ರಕ್ಕೂ ತಲಾ ಶೇ. 25 ರಷ್ಟು ಭಾಗ ಶ್ರೀ ಓಂಕಾರೇಶ್ವರ ದೇವಾಲಯ ಮತ್ತು ಪಾಡಿಶ್ರೀ ಇಗ್ಗುತ್ತಪ್ಪ ಸನ್ನಿಧಿಗಳಿಗೆ ಸಲ್ಲಬೇಕೆಂದು ದಾನಪತ್ರದಲ್ಲಿ ಉಲ್ಲೇಖವಿದ್ದು, ಸಂಬಂಧಪಟ್ಟವರ ನಿರ್ಲಕ್ಷ್ಯದಿಂದ ಈ ಆಸ್ತಿಯೂ ಪರಾಧೀತಗೊಳ್ಳುವ ಅಪಾಯವಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕೊಡಗಿನ ಹಲವೆಡೆ ಈ ರೀತಿ ಸರಕಾರಿ ಜಮೀನುಗಳೊಂದಿಗೆ ದಾನ ನೀಡಿರುವ ಜಾಗ ಅನ್ಯರಿಂದ ಕಬಳಿಸಲ್ಪಡುವ ಆರೋಪವಿದ್ದು, ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಇಂತಹ ಜಮೀನುಗಳ ಮಾಹಿತಿ ಸಂಗ್ರಹಿಸಿ ಕಂದಾಯ ಇಲಾಖೆಯಿಂದ ರಕ್ಷಣೆಗೆ ಮುಂದಾಗುವಂತೆ ಅವರು ಆಗ್ರಹಪಡಿಸಿದ್ದಾರೆ.
ಅಧ್ಯಕ್ಷರು ಗಮನಿಸಲಿ: ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಸರಕಾರಿ ಭೂ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿ ರುವ ಕೊಡಗಿನ ಶಾಸಕ ಕೆ.ಜಿ. ಬೋಪಯ್ಯ ಅವರು ಈ ಬಗ್ಗೆ ಕಾಳಜಿ ವಹಿಸುವುದರೊಂದಿಗೆ ಜಿಲ್ಲೆಯಲ್ಲಿ ಜಮೀನುಗಳ ಸಂರಕ್ಷಣೆಗಾಗಿ ಅಗತ್ಯ ಗಮನ ಹರಿಸುವಂತೆಯೂ ರವಿಕುಶಾಲಪ್ಪ ‘ಶಕ್ತಿ’ ಮುಖಾಂತರ ಮನವಿ ಮಾಡಿದ್ದಾರೆ.