ವೀರಾಜಪೇಟೆ, ಜು. 28: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಟೈಪಾಯಿಡ್ ರೋಗ ಎಂದು ಚಿಕಿತ್ಸೆಗಾಗಿ ಸೇರಿದ 45 ವರ್ಷದ ಇಲ್ಲಿನ ಮೊಗರಗಲ್ಲಿಯ ನಿವಾಸಿಗೆ ಕೊರೊನಾ ಸೋಂಕು ಪಾಸಿಟಿವ್ ದೃಢಪಟ್ಟಿದ್ದು ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಈತ ತಾ. 26 ರಂದು ಮುಂಜಾನೆ ಮೃತಪಟ್ಟಿದ್ದರಿಂದ ವೀರಾಜಪೇಟೆಯ ಮೊಗರಗಲ್ಲಿಯ ಮುಖ್ಯರಸ್ತೆಯ ಒಂದು ಭಾಗವನ್ನು ಸೀಲ್‍ಡೌನ್ ಮಾಡಿ ಈ ಪ್ರದೇಶದ 20 ಕುಟುಂಬಗಳ 61 ಮಂದಿಯನ್ನು ಸಾರ್ವಜನಿಕ ಸಂಪರ್ಕದಿಂದ ತಡೆ ಹಿಡಿಯಲಾಗಿದೆ.

ವೀರಾಜಪೇಟೆ ತಾಲೂಕು ಆರೋಗ್ಯ ಇಲಾಖೆ ತಂಡ ಇಂದು ಮೊಗರಗಲ್ಲಿಯ ಸೀಲ್‍ಡೌನ್ ಪ್ರದೇಶದಲ್ಲಿದ್ದ ಜನರನ್ನು ತಪಾಸಣೆಗೊಳಪಡಿಸಿ ದ್ರಾವಣವನ್ನು ಕೋವಿಡ್ ಪರೀಕ್ಷೆಗಾಗಿ ಮಡಿಕೇರಿಗೆ ಕಳುಹಿಸಿದೆ. ಆರೋಗ್ಯ ತಪಾಸಣೆಯಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಶುಶ್ರೂಷಕಿಯರು, ಆಶಾಕಾರ್ಯಕರ್ತೆಯರು ಭಾಗವಹಿಸಿದ್ದರು.

ಗಾಂಧಿನಗರ ಒಂದು ಭಾಗ ಸೀಲ್‍ಡೌನ್

ವೀರಾಜಪೇಟೆ ಮುಖ್ಯರಸ್ತೆಯಿಂದ ಗಾಂಧಿನಗರ ರಸ್ತೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆಯ ಶವಾಗಾರದ ಬಳಿಯ ಹಿಂಬದಿಯಲ್ಲಿ 20 ವರ್ಷದ ಯುವಕನೊಬ್ಬನಿಗೆ ಕೊರೊನಾ ತಪಾಸಣೆ ವರದಿಯಲ್ಲಿ ಪಾಸಿಟಿವ್ ಬಂದುದರಿಂದ ಆ ಪ್ರದೇಶದ ಸುಮಾರು 18 ಮನೆಗಳು ಹಾಗೂ 43 ಜನಸಂಖ್ಯೆ ಇರುವ ಗಾಂಧಿನಗರಕ್ಕೆ ಹೋಗುವ ರಸ್ತೆಯ ಒಂದು ಭಾಗದ ಪ್ರದೇಶವನ್ನು ಸೀಲ್‍ಡೌನ್ ಮಾಡಿ ಸಾರ್ವಜನಿಕರ ಸಂಪರ್ಕದಿಂದ ತಡೆ ಮಾಡಲಾಗಿದೆ.

ಈ ಯುವಕ 4 ದಿನಗಳ ಹಿಂದೆ ಅನಾರೋಗ್ಯದ ನಿಮಿತ್ತ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಫೀವರ್ ಕ್ಲಿನಿಕ್ ಘಟಕದಲ್ಲಿ ತಪಾಸಣೆಗೊಳಪಟ್ಟು ಕೊರೊನಾ ಸೋಂಕಿತನಿರಬಹುದು ಎಂಬ ಶಂಕೆಯಿಂದ ಈತನ ದ್ರಾವಣವನ್ನು ಮಡಿಕೇರಿಗೆ ಕಳುಹಿಸಲಾಗಿತ್ತು. ಈಗ ಪಾಸಿಟಿವ್ ವರದಿ ಬಂದ ನಂತರ ಆತನನ್ನು ಮಡಿಕೇರಿ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ.

ಈ ಎರಡು ಸೀಲ್‍ಡೌನ್ ಸೇರಿದಂತೆ ವೀರಾಜಪೇಟೆ ಪಟ್ಟಣದಲ್ಲಿ ಏಳು ಕಡೆಯ ಪ್ರದೇಶಗಳಲ್ಲಿ ಸೀಲ್‍ಡೌನ್ ಮಾಡಿದಂತಾಗಿದೆ.