ಮಡಿಕೇರಿ, ಜು. 28: ಮಳೆಗಾಲದ ಸಮಯ, ಅದರಲ್ಲೂ ಜುಲೈ ತಿಂಗಳಾದರೂ ಮಳೆಯ ಸುಳಿವಿಲ್ಲದೆ ಎಲ್ಲೆಡೆ ಬಿಸಿಲಿನ ವಾತಾವರಣ ಕಂಡು ಬರುತ್ತಿದೆ. ನದಿ, ತೊರೆಗಳಲ್ಲಿನ ನೀರಿನ ಪ್ರಮಾಣ ಇಳಿಮುಖವಾಗಿದೆ. ಆದರೆ ಕಕ್ಕಬೆ ಬಳಿಯ ನಾಲಡಿ ಗ್ರಾಮದಲ್ಲಿ ಹರಿಯುತ್ತಿರುವ ನದಿಯಲ್ಲಿ ದಿಢೀರನೆ ನೀರು ಹರಿಯಲಾರಂಭಿಸಿ ಜನತೆಯಲ್ಲಿ ಆತಂಕ ಉಂಟು ಮಾಡಿದೆ.

ಇಂದು ಬೆಳಗ್ಗಿನಿಂದಲೂ ಬಿಸಿಲಿನ ವಾತಾವರಣವಿದ್ದು, ಸಂಜೆ ವೇಳೆಗೆ ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆಯಾಗಿದೆ. ನಾಲಡಿ ವ್ಯಾಪ್ತಿಯಲ್ಲಿ ಅಂದಾಜು 15 ಸೆಂಟ್‍ನಷ್ಟು ಮಳೆ ಬಿದ್ದಿದೆ. ಆದರೆ ಸಂಜೆ 6 ಗಂಟೆ ವೇಳೆಗೆ ನದಿಯಲ್ಲಿ ದಿಢೀರನೇ ನೀರು ಹರಿಯಲಾರಂಭಿಸಿದೆ. ನೋಡ ನೋಡುತ್ತಿದ್ದಂತೆಯೇ ನದಿಗೆ ಅಡ್ಡಲಾಗಿರುವ ಹಳೆ ಸೇತುವೆ ಮಟ್ಟಕ್ಕೆ ಏರಿದ ನೀರು ಸೇತುವೆಯ ಮೇಲೆ ಹರಿಯಲಾರಂಭಿಸಿದೆ. ದಿಢೀರ್ ಅಷ್ಟೊಂದು ನೀರು ಎಲ್ಲಿಂದ ಬಂತೆಂಬದು ಅಲ್ಲಿನ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಸಂಪೂರ್ಣ ಮಣ್ಣು ಮಿಶ್ರಿತ ನೀರು ಹರಿದು ಬಂದಿದ್ದು, ದಿಢೀರನೇ ಅಷ್ಟೊಂದು ನೀರು ಎಲ್ಲಿಂದ ಬಂತು ಎಂಬದೇ ಗೊತ್ತಾಗುತ್ತಿಲ್ಲ, ಈ ಹಿಂದೆ ಸುರಿದ ಮಳೆಗೂ ಸೇತುವೆ ಮೇಲೆ ನೀರು ಬಂದಿರಲಿಲ್ಲ. ಇದೇ ಮೊದಲ ಬಾರಿಗೆ ಇಷ್ಟೊಂದು ನೀರು ಬಂದಿದೆ ಎಂದು ಸ್ಥಳೀಯರಾದ ಅಲ್ಲಾರಂಡ ರತ್ತು ಬೋಪಣ್ಣ ಆತಂಕ ವ್ಯಕ್ತಪಡಿಸಿದ್ದಾರೆ.