*ಸಿದ್ದಾಪುರ, ಜು.28 : ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಅತ್ತಿಮಂಗಲ, ನಲ್ವತ್ತೆಕರೆ, ಬರಡಿ ಮುಖ್ಯ ರಸ್ತೆಯಲ್ಲಿ ಜನರ ಸಂಚಾರಕ್ಕೆ ಅಡಚಣೆಯಾಗಿರುವ ಬೇಲಿಯನ್ನು ತೆರವುಗೊಳಿಸಲು ಜನಪ್ರತಿನಿಧಿಗಳು ನಿರಾಸಕ್ತಿ ತೋರುತ್ತಿರುವುದರಿಂದ ಬಿಜೆಪಿ ಪಕ್ಷಕ್ಕೆ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಲು ಕಾರ್ಯಕರ್ತ ರು ನಿರ್ಧರಿಸಿರುವುದಾಗಿ ಪಕ್ಷದ ಬರಡಿ ಘಟಕದ ಪ್ರಮುಖರಾದ ಮಣಿ, ಶಿವ, ಪ್ರಸಾದ್ ಹಾಗೂ ಯೋಗಿನಾಥ ತಿಳಿಸಿದ್ದಾರೆ.
ಕಳೆದ 25 ದಿನಗಳಿಂದ ಸುಮಾರು 900 ಕ್ಕೂ ಹೆಚ್ಚು ಕುಟುಂಬಗಳು ಅಘೋಷಿತ ನಿರ್ಬಂಧದಲ್ಲಿ ಸಿಲುಕಿಕೊಂಡಿದ್ದಾರೆ. ಗ್ರಾಮಸ್ಥರ ಸಂಕಷ್ಟದ ಬಗ್ಗೆ ಶಾಸಕರುಗಳಿಗೆ ಮಾಹಿತಿ ಇದ್ದರೂ ಇಲ್ಲಿಯವರೆಗೆ ಬೇಲಿ ತೆರವಿಗೆ ಅಧಿಕಾರಿಗಳಿಗೆ ಸೂಚನೆ ನೀಡಿಲ್ಲ. ಗ್ರಾಮಸ್ಥರು, ಕೂಲಿ ಕಾರ್ಮಿಕರು ರಸ್ತೆ ಸಂಪರ್ಕವನ್ನು ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿದ್ದರೂ ಜನಪ್ರತಿನಿಧಿ ಗಳು ನೆರವಿಗೆ ಬಂದಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಕನಿಷ್ಟ ಬೇಲಿ ತೆರವುಗೊಳಿಸುವಷ್ಟು ಪ್ರಭಾವವನ್ನು ಬೀರದೆ ಇರುವುದರಿಂದ ಬೇಸರವಾಗಿದೆ ಎಂದು ಬರಡಿ ಬಿಜೆಪಿ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೇಲಿ ತೆರವುಗೊಳ್ಳದೆ ಇರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು ಸ್ಥಳೀಯ ತಾ.ಪಂ ಸದಸ್ಯರಾದ ಸುಹಾದ ಅಶ್ರಫ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.