ಗೋಣಿಕೊಪ್ಪ ವರದಿ, ಜು. 28: ಸೋಮವಾರ ಗೋಣಿಕೊಪ್ಪ ಪಟ್ಟಣದಲ್ಲಿ ಅನುಷ್ಠಾನಗೊಳಿಸಿರುವ ಸಂಚಾರ ಬದಲಿ ನಿಯಮ ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಯೋಗ ಮಾಡಲಾಗುತ್ತಿದೆ ಎಂದು ವೃತ್ತ ನಿರೀಕ್ಷಕ ರಾಮರೆಡ್ಡಿ ತಿಳಿಸಿದ್ದಾರೆ.

ವಾರದ ಆರಂಭದ ದಿನ ಹೆಚ್ಚು ವಾಹನ ದಟ್ಟಣೆ ಇರುವುದರಿಂದ ಇಂತಹ ಪ್ರಯೋಗ ಮಾಡಲಾಗಿದ್ದು, ಸಿಬ್ಬಂದಿ ಕೂಡ ಎಲ್ಲಾ ಜಂಕ್ಷನ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನರು ಗೊಂದಲ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ. ಸೋಮವಾರ ಮಧ್ಯಾಹ್ನದವರೆಗೆ ಮಾತ್ರ ಈ ನಿಯಮ ಪಾಲಿಸಲಾಗುತ್ತಿದ್ದು, ಇದರಿಂದ ಪ್ರಯೋಜನವಾದರೆ ಮುಂದುವರಿಸುವ ಯೋಜನೆ ಕೈಗೊಳ್ಳಬಹುದು. ಈ ಬಗ್ಗೆ ಪ್ರಚಾರ ಮಾಡಲಾಗಿದೆ ಎಂದು ತಿಳಿಸಿದರು.

ಒತ್ತಾಯ: ವಾಹನ ದಟ್ಟಣೆ ನಿಯಂತ್ರಿಸಲು ಮಧ್ಯಾಹ್ನದವರೆಗೆ ಮಾತ್ರ ಅನುಷ್ಠಾನಗೊಳಿಸಿರುವ ನಿಯಮದಿಂದ ಸಾಕಷ್ಟು ಗೊಂದಲ ಉಂಟಾಗಿದೆ. ಇಂತಹ ನಿಯಮ ಬದಲಾವಣೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಹರಿಶ್ಚಂದ್ರಪುರದಿಂದ ನೇರವಾಗಿ ಮುಖ್ಯರಸ್ತೆ ಮೂಲಕ ತೆರಳುವಂತೆ ಇದ್ದ ನಿಯಮ ಸರಿಯಾಗಿದೆ. ಹೊಸ ನಿಯಮ ಜಾರಿಯಿಂದ ಪೊನ್ನಂಪೇಟೆ ರಸ್ತೆ ಜಂಕ್ಷನ್, ಪೊನ್ನಂಪೇಟೆ ರಸ್ತೆ ವಾಹನಗಳು ಎತ್ತ ತೆರಳಬೇಕು ಎಂದು ತಿಳಿಯದೆ ಗೊಂದಲ ಅನುಭವಿಸುವಂತಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ಉದ್ಯಮಿ ಅನೀಶ್ ಮಾದಪ್ಪ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.