*ಸಿದ್ದಾಪುರ, ಜು. 28 : ತಮ್ಮ ಜೀವನ ಪೂರ್ತಿ ಅರಣ್ಯವನ್ನು ರಕ್ಷಿಸುವುದಕ್ಕಾಗಿ ಅರಣ್ಯ ಇಲಾಖೆಯ ನೌಕರನಾಗಿ ದುಡಿದ ವ್ಯಕ್ತಿ ಮರಣ ಹೊಂದಿದಾಗ ಅಂತ್ಯಕ್ರಿಯೆಗೆ ಒಂದು ತುಂಡು ಸೌದೆಯನ್ನೂ ನೀಡದೆ ಇಲಾಖೆ ಅಗೌರವ ತೋರಿದ ಪ್ರಕರಣ ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ಗುಡ್ಲೂರು ಗ್ರಾಮದಲ್ಲಿ ನಡೆದಿದೆ.
ಅರಣ್ಯ ಇಲಾಖೆಯ ನಿವೃತ್ತ ನೌಕರ ಬೈಲೆಮನೆ ಅಪ್ಪಚ್ಚು (78) ಅವರು ನಿಧನ ಹೊಂದಿದ್ದು, ಮೃತದೇಹದ ಅಂತ್ಯ ಸಂಸ್ಕಾರ ಇಂದು ನಡೆಯಿತು. ಶವ ಸಂಸ್ಕಾರಕ್ಕಾಗಿ ಸೌದೆಯ ಅಗತ್ಯ ಬಿದ್ದಾಗ ಮನೆಯವರು ಹಾಗೂ ಗ್ರಾಮಸ್ಥರು ಅಪ್ಪಚ್ಚು ಅವರ ಮನೆ ಅರಣ್ಯದಂಚಿನಲ್ಲೇ ಇದ್ದ ಕಾರಣ ಅರಣ್ಯ ಇಲಾಖೆಯ ಸಹಕಾರ ಕೋರಿದರು, ಸೌದೆ ನೀಡುವಂತೆ ಮನವಿ ಮಾಡಿದರು. ಆದರೆ ಅರಣ್ಯ ಸಿಬ್ಬಂದಿ ಸೌದೆಯನ್ನು ನೀಡಲು ನಿರಾಕರಿಸಿದರು.
ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರಾದರೂ ಬೇರೆ ವಿಧಿ ಇಲ್ಲದೆ ಸ್ಥಳೀಯ ನಿವಾಸಿಗಳ ನೆರವಿನಿಂದ ಸೌದೆ ಸಂಗ್ರಹಿಸಿ ಅಂತಿಮ ಸಂಸ್ಕಾರ ನೆರವೇರಿಸಿದರು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಅರಣ್ಯ ಇಲಾಖೆಯ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಅಪ್ಪಚ್ಚು ಅವರು, ಕಾಡ್ಗಿಚ್ಚು ಶಮನಗೊಳಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ಜೀವನಪೂರ್ತಿ ಅರಣ್ಯವನ್ನು ರಕ್ಷಿಸಿದವರ ಅಂತಿಮ ಕ್ಷಣದ ಕಾರ್ಯಕ್ಕೆ ಅರಣ್ಯ ಇಲಾಖೆ ಸಹಕಾರ ನೀಡದೆ ನಿರ್ಲಕ್ಷಿಸಿದ ಕ್ರಮವನ್ನು ಗ್ರಾಮಸ್ಥರು ಖಂಡಿಸಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.