ಕಣಿವೆ, ಜು. 28: ಇದೀಗ ಕೊರೊನಾ ನಮ್ಮ ನಾಡನ್ನು ಮಾತ್ರವಲ್ಲ. ಇಡೀ ವಿಶ್ವವನ್ನೇ ವ್ಯಾಪಿಸಿದೆ. ಆಧುನಿಕತೆಯ ಭರಾಟೆಯಲ್ಲಿ ಎಲ್ಲೆಲ್ಲೂ ನಿರ್ನಾಮವಾಗುತ್ತಿರುವ ಸುಂದರ ಪರಿಸರವನ್ನು ಶುದ್ಧವಾದ ಗಾಳಿಯೊಂದಿಗೆ ಮತ್ತೆ ಪುನರ್ ನಿರ್ಮಾಣ ಮಾಡಲು ಗಿಡ ಮರಗಳನ್ನು ನೆಟ್ಟು ಬೆಳೆಸುವುದೊಂದೇ ಈ ಭುವಿಯ ಮೇಲಿನ ನಮ್ಮೆಲ್ಲರ ಮುಂದಿರುವ ಏಕೈಕ ಮಾರ್ಗ. ಇಂತಹ ಒಂದು ಮಹತ್ವಾಕಾಂಕ್ಷೆಯನ್ನು ತನ್ನೊಳಗೆ ಒಡಮೂಡಿಸಿಕೊಂಡು ಗಿಡ ಮರಗಳ ಬಗ್ಗೆ ಅತ್ಯಂತ ಹೆಚ್ಚಿನ ಒಲವು ತೋರುತ್ತಾ ಸುತ್ತಲ ಪರಿಸರದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಇಂಜಿನಿಯರಿಂಗ್ ಪದವೀಧರೆಯೊಬ್ಬರು ನಮ್ಮ ಜಿಲ್ಲೆಯವರಾಗಿದ್ದಾರೆ. ಈ ಯುವತಿಯ ಹೆಸರು. ಪಳಂಗೋಟು ಲೀನಾಶ್ರೀ. ಈಕೆ ಗೋಣಿಮರೂರು ಸನಿಹದ ಎಡುಂಡೆ ಗ್ರಾಮದ ನಿವೃತ್ತ ಸೈನಿಕ ಪಳಂಗೋಟು ಸೋಮಣ್ಣ (ರವಿ) ಹಾಗೂ ರೇವತಿ ಅವರ ಪುತ್ರಿ. ಇವರು ಓದಿದ್ದು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್. ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಆದರೆ ಈಗ ಕೊರೊನಾ ಕಾರಣದಿಂದ ಉದ್ಯೋಗಕ್ಕೆ ಗುಡ್ ಬೈ ಹೇಳಿರುವ ಇವರು ತಮ್ಮ ಮನೆಯಂಗಳದಲ್ಲಿ ನೂರಾರು ತಳಿಯ ಗಿಡಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇವರು ತಮ್ಮ ಮನೆಯ ಪ್ರವೇಶ ದ್ವಾರದಲ್ಲಿನ ಮರವೊಂದರಲ್ಲಿ ತೂಗು ಹಾಕಿರುವ ನಾಮಫಲಕವೇ ಇವರಲ್ಲಿನ ಪರಿಸರದ ಪ್ರೀತಿ ಹಾಗೂ ಕಾಳಜಿ ಆ ನಾಮಫಲಕದಲ್ಲಿ ಬಿಂಬಿತಗೊಂಡಿದೆ. ಅಂದರೆ “ಬಿಸಿಲು ಬಿಸಿಲು ಅನ್ನೋದನ್ನು ಬಿಟ್ಟು, ಮನೆಯ ಮುಂದೆ ಒಂದೇ ಒಂದು ಗಿಡ ನೆಡಿ. ಮುಂದಿನ ಒಂದೇ ವರ್ಷದಲ್ಲಿ ಅದೇ ಗಿಡ ಬೆಳೆದು ನಿಂತು ನಿಮ್ಮನ್ನು ಬಿಸಿಲಿನಿಂದ ರಕ್ಷಿಸುತ್ತದೆ’’ ಮನೆ ಮುಂದೆ, ರಸ್ತೆ ಬದಿ, ವಾಹನ ತಂಗುದಾಣ, ಹೊಲ ಗದ್ದೆ ಹೀಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಗಿಡ ಮರಗಳನ್ನು ನೆಡಿ. ಆದರೆ ಪ್ರಚಾರಕ್ಕಾಗಿ ಗಿಡ ನೆಟ್ಟು, ಪತ್ರಿಕೆಗಳಲ್ಲಿ ಆ ಸುದ್ದಿ ಪ್ರಕಟಗೊಳ್ಳುವ ಮುನ್ನವೇ ನೆಟ್ಟ ಗಿಡ ಇಲ್ಲದಂತಹ ರೀತಿಯಲ್ಲಿ ತೋರಿಕೆಗಾಗಿ ಗಿಡಗಳನ್ನು ನೆಡಬೇಡಿ. ನಮ್ಮನ್ನೆಲ್ಲಾ ಹೊತ್ತು ನಿಂತ ಈ ಭೂಮಿ ತಾಯಿಯ ಋಣ ತೀರಿಸಲಾದರೂ ಒಬ್ಬೊಬ್ಬರು ಒಂದೊಂದು ಗಿಡ ನೆಡಲು ಪಣ ತೊಡಿ ಎನ್ನುತ್ತಾರೆ ಲೀನಾಶ್ರೀ.
ಈ ಸಂದರ್ಭ ಪತ್ರಿಕೆಯೊಂದಿಗೆ ತಮ್ಮ ಅನುಭವ ಹಂಚಿಕೊಂಡದ್ದು ಹೀಗೆ; ನಾನು ವಿದ್ಯಾರ್ಥಿ ದಿನಗಳಿಂದಲೂ ಪರಿಸರದ ಮೇಲೆ ಹೆಚ್ಚು ಪ್ರಭಾವಿತಳಾಗಿದ್ದೆ. ಜೊತೆಗೆ ನಮ್ಮ ತಂದೆ ಸೇನೆಯಲ್ಲಿದ್ದು ರಜೆ ಮೇಲೆ ಊರಿಗೆ ಧಾವಿಸಿದ ದಿನಗಳಲ್ಲಿ ತಂದೆ -ತಾಯಿ ಮಾಡುತ್ತಿದ್ದ ಗಿಡ ಮತ್ತು ಬಳ್ಳಿಗಳ ಸೇವೆಯ ಮೇಲೆ ಮತ್ತಷ್ಟು ನಾನು ಪ್ರಬಾವಿತಳಾದೆ. ಮೊದಲು ನಮ್ಮ ಮನೆಯ ಪರಿಸರದಲ್ಲಿ ಸಿಕ್ಕ ಕಚ್ಚಾ ವಸ್ತುಗಳನ್ನೆಲ್ಲಾ ಗಿಡ ನೆಡಲು ಬಳಸಿಕೊಂಡು ನಮ್ಮ ಮನೆಯ ಸುತ್ತ ನೂರಾರು ಗಿಡಗಳನ್ನು ನೆಟ್ಟೆ. ಅವುಗಳ ಆರೈಕೆ ಹಾಗೂ ನಿರ್ವಹಣೆ ನನಗೆ ಸರಾಗವಾಯಿತು. ನಂತರ ಸುತ್ತಲಿನ ಆಲೂರು ಸಿದ್ಧಾಪುರ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ, ಗೋಣಿಮರೂರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ, ಕುಶಾಲನಗರ ಸರ್ಕಾರಿ ಆಸ್ಪತ್ರೆ ಆವರಣ ಸೇರಿದಂತೆ ಇನ್ನಿತರೆಡೆಗಳಲ್ಲಿ ನನ್ನ ಅನುಭವವನ್ನು ಗಿಡಗಳನ್ನು ನೆಡುವ ಮೂಲಕ ನಾನು ದಾಖಲಿಸಿದೆ. ಹಾಗೆಯೇ ಸುತ್ತಲಿನ ನಿವಾಸಿಗಳು ನನಗೆ ಕರೆ ಮಾಡಿ ಮನೆ ಆವರಣದಲ್ಲಿ ಗಿಡ, ಬಳ್ಳಿ -ಪುಷ್ಪಗಳನ್ನು ಬೆಳೆಸುವ ವಿಧಾನಗಳ ಕುರಿತು ಮಾಹಿತಿ ಕೇಳಿದರೆ ನಾನು ನನ್ನ ಅನುಭವವನ್ನು ಅವರಿಗೆ ಧಾರೆ ಎರೆಯುತ್ತಿದ್ದೇನೆ. ಭೂಮಿಯ ತಾಪಮಾನ ತಣಿಸಲು, ಮನುಷ್ಯನಿಗೆ ಶುದ್ಧವಾದ ಆಮ್ಲಜನಕ ದೊರಕಿ ಉತ್ತಮ ಆರೋಗ್ಯ ಹೊಂದಲು ಇರುವ ಏಕೈಕ ಮಾರ್ಗ ಮನೆಯಂಗಳದಲ್ಲಿ ಗಿಡ ಮರಗಳನ್ನು ಬೆಳೆಸುವುದಾಗಿದೆ ಎಂದು ಹೇಳಿದರು. ಆಯುರ್ವೇದಿಕ್ ಗಿಡ ಮೂಲಿಕೆಗಳನ್ನು ಬೆಳೆಸಿ ಅವುಗಳಿಂದ ಆರೋಗ್ಯ ವೃದ್ಧಿಸಿಕೊಳ್ಳುವ ಕುರಿತಾಗಿಯೂ ಅವರು ಮಾಹಿತಿ ನೀಡುತ್ತಾರೆ. ಹಾಗೆಯೇ ಕೃಷಿಕರಿಗೂ ಅಗತ್ಯ ಮಾಹಿತಿಯನ್ನು ನೀಡುವ ಇವರು, ರೈತರು ಎಲ್ಲರೂ ಒಂದೇ ವಿಧದ ಬೆಳೆಯನ್ನು ಹಲವರು ಬೆಳೆಯದೇ ತರಹೇವಾರಿ ಬೆಳೆ ಪದ್ಧತಿ ರೂಢಿಸಿಕೊಂಡು ಕಡಿಮೆ ಖರ್ಚಿನಲ್ಲಿ ಹೆಚ್ವು ಆದಾಯ ಗಳಿಸುವ ಮಾರ್ಗದ ಬಗ್ಗೆಯೂ ಹೇಳುತ್ತಾರೆ.
ಮನೆಯಂಗಳದಲ್ಲಿ ಬಟರ್ ಪ್ರೂಟ್, ವೆನಿಲಾ, ಪಪ್ಪಾಯಿ, ನಿಂಬೆ, ಮಾವು ಮೊದಲಾದ ಗಿಡ ಮರಗಳನ್ನು ಬೆಳೆಸಿದರೆ ಅವುಗಳು ನಮಗೆ ಪ್ರತೀ ವರ್ಷವೂ ಯಾವ ಖರ್ಚೂ ಇಲ್ಲದೆಯೇ ಆದಾಯವನ್ನು ತಂದು ಕೊಡುತ್ತವೆ. ನಾನು ನಮ್ಮ ಮನೆಯಂಗಳದಲ್ಲಿ ಪ್ರತ್ಯೇಕವಾಗಿ ವೆನಿಲಾ ಫಾರಂ ಅನ್ನೇ ಮಾಡಿದ್ದೇನೆ. ಅಲ್ಲದೇ ತಂತ್ರಜ್ಞಾನ ಬಳಸಿಕೊಂಡು ಎತ್ತರಕ್ಕೆ ಬೆಳೆಯುವ ಬಟರ್ ಫ್ರೂಟ್ ಹಾಗೂ ವೆನಿಲಾ ಗಿಡಗಳನ್ನು ಕಸಿ ಮಾಡಿ ನಮಗೆ ಕೈಗೆಟುಕುವ ಎತ್ತರದಲ್ಲಿಯೇ ಅವು ಫಲ ಕೊಡುವ ಪದ್ಧತಿಯನ್ನು ನಾನು ಅಣಿಗೊಳಿಸಿರುವೆ. ನಮ್ಮ ಮನೆಗೆ ಯಾರೇ ಅತಿಥಿ ಅಥವಾ ನೆಂಟರಿಷ್ಟರು ಬಂದರೂ ಕೂಡ ಅವರಿಗೆ ಒಂದೊಂದು ಗಿಡ ಕೊಟ್ಟು ನೆಟ್ಟು ಬೆಳೆಸಲು ಪ್ರೇರೇಪಿಸುವುದಾಗಿ ಹೇಳುತ್ತಾರೆ ಈ ಲೀನಾಶ್ರೀ. ಹಾಗಾಗಿ ಮುಂದಿನ ದಿನಗಳಲ್ಲಿ ಹವಾಮಾನ ಪರಿಸ್ಥಿತಿ ಇನ್ನಷ್ಟ್ಟು ಬಿಗಡಾಯಿಸಲಿದ್ದು ನಾವುಗಳು ಆದಷ್ಟು ಹೆಚ್ವು ಹೆಚ್ಚು ಗಿಡಗಳನ್ನು ನೆಟ್ಟು ಬೆಳಸುವ ಮೂಲಕ ಈಗಿನಿಂದಲೇ ಶುದ್ಧ ಆಮ್ಲಜನಕ ಹೊಂದುವುದಕ್ಕೆ ಅಣಿಯಾಗಬೇಕಿದೆ. ಈಗಾಗಲೇ ನಮ್ಮ ದೇಶದ ರಾಜಧಾನಿ ದೆಹಲಿ, ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಅನೇಕ ಮಹಾ ನಗರಗಳಲ್ಲಿ ಮಿತಿ ಮೀರಿದ ವಾಯುಮಾಲಿನ್ಯ ಉಂಟಾಗುತ್ತಿದ್ದು ಅಲ್ಲಿನ ಅನೇಕ ವಾಸಿಗಳಲ್ಲಿ ಶ್ವಾಸಕೋಶದ ಖಾಯಿಲೆಗಳು ಉಲ್ಭಣಿಸುತ್ತಿವೆ. ಶುದ್ಧ ಆಮ್ಲಜನಕ ಸವಿಯಲು ಹಣ ಕೊಟ್ಟು ಆಮ್ಲಜನಕದ ಕಿಟ್ ಖರೀದಿಸಿ ಉಸಿರಾಡುತ್ತಿರುವ ಬೆಳವಣಿಗೆಗಳು ನಡೆಯುತ್ತಿವೆ. ಉದಾಹರಣೆಗೆ ಮಾರಕ ಕೊರೊನಾ ಮಹಾಮಾರಿ ವೈರಸ್ ಶ್ವಾಸಕೋಶದ ಸಮಸ್ಯೆ ಇರುವವರನ್ನೇ ಬಾಧಿಸಿ ಮತ್ತು ಬೇಧಿಸಿ ಅವರನ್ನು ಬಲಿ ತೆಗೆದುಕೊಂಡ ಪ್ರಸಂಗಗಳು ನಮ್ಮೆದುರಿಗಿವೆ. ಹಾಗಾಗಿ ನಾವೆಲ್ಲ ಗಿಡ ಮರಗಳನ್ನು ಬೆಳೆಸಿ ಉಳಿಸಲು ಪಣ ತೊಡಬೇಕಿದೆ. ಯಾವುದೇ ಪ್ರಚಾರ ಅಥವಾ ಪ್ರಶಸ್ತಿಗಳನ್ನು ಬಯಸದೇ ತಮ್ಮ ಪರಿಸರದ ಕರ್ತವ್ಯ ತೋರುತ್ತಿರುವ ಈ ಪದವೀಧರೆ ಲೀನಾಶ್ರೀ ಸೇವೆ, ಕೇವಲ ತೋರಿಕೆ ಹಾಗೂ ಪ್ರಚಾರಕ್ಕಾಗಿ ಸೀಮಿತಗೊಂಡಿರುವ ಇತರ ಕೆಲವು ಸಂಘಟನೆಗಳಿಗೆ ಒಂದು ಪಾಠವಾಗಬೇಕಿದೆ. ವರದಿ : ಕೆ.ಎಸ್.ಮೂರ್ತಿ ಕುಶಾಲನಗರ