ಅಭಿವೃದ್ಧಿಯಲ್ಲಿ ಹಿನ್ನೆಡೆ : ಸಿಎಂ ವಿಷಾದ

ಬೆಂಗಳೂರು, ಜು.27 : ಕೋವಿಡ್ 19 ಸೋಂಕಿನಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನೆಡೆಯಾಗಿದ್ದು, ಕೋವಿಡ್ ಸಂಕಷ್ಟ ಬರದೇ ಇದ್ದಿದ್ದರೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಬಹುದಿತ್ತು. ಪ್ರಗತಿಯಲ್ಲಿ ಹಿನ್ನೆಡೆ ಕಂಡ ನೋವು ನನಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸರ್ಕಾರದ ಒಂದು ವರ್ಷದ ಸಾಧನೆಯ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಕೋವಿಡ್-19 ಅಭಿವೃದ್ಧಿ ಕೆಲಸಕ್ಕೆ ಕಂಟಕವಾಗಿರುವ ಬಗ್ಗೆ ನನ್ನ ಕಣ್ಣಲ್ಲಿ ನೀರು ಬರುತ್ತಿದೆ. ಕೋವಿಡ್ ಸಾಂಕ್ರಾಮಿಕ ಇಲ್ಲದಿದ್ದರೆ ಅತಿ ವೇಗದ ಅಭಿವೃದ್ಧಿ ಸಾಧಿಸಬಹುದಿತ್ತು. ಈಗಿನ ಪರಿಸ್ಥಿತಿಯಲ್ಲಿ ಲಾಕ್ಡೌನ್ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. ಇನ್ನು ಮುಂದೆ ಲಾಕ್ ಡೌನ್ ಬಗ್ಗೆ ಚಿಂತೆ ಮಾಡದೇ ಕೋವಿಡ್ ಜೊತೆ ಜೀವನ ನಡೆಸುವ, ಸಂಪನ್ಮೂಲ ಕ್ರೋಢೀಕರಿಸುವ ಬಗ್ಗೆ ಗಮನಹರಿಸಬೇಕು. ಅಭಿವೃದ್ಧಿ ಸಾಧಿಸುವ ನಿಟ್ಟಿಯಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ನನಗೆ ರಾಜ್ಯದ ಜನರ ಋಣ ತೀರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಇನ್ನೂ ಆಗಬೇಕಾಗಿದ್ದು ಬಹಳಷ್ಟಿದ್ದು, ಈ ನಾಡಿನ ಜನ, ರೈತ, ಕೃಷಿ ಕಾರ್ಮಿಕ, ದೀನದಲಿತರು, ಬಡವರ ಏಳಿಗೆಗೆ ಪ್ರಯತ್ನಿಸೋಣ. ಆರ್ಥಿಕ ಸೋರಿಕೆಗೆ ಕಡಿವಾಣ ಹಾಕಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮವಹಿಸೋಣ ಎಂದರು.

ನಿಗಮ ಮಂಡಳಿಗಳಿಗೆ ಶಾಸಕರ ನೇಮಕ

ಬೆಂಗಳೂರು, ಜು.27 : ರಾಜ್ಯದ ವಿವಿಧ ನಿಗಮ ಮಂಡಳಿಗಳಿಗೆ 24 ಶಾಸಕರುಗಳನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಶಿವಮೊಗ್ಗದ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಅರಗ ಜ್ಞಾನೇಂದ್ರ ಅವರನ್ನು ಕರ್ನಾಟಕ ಗೃಹ ಮಂಡಳಿಗೆ, ರಾಜ್ಯ ರಸ್ತೆ ಸಾರಿಗೆ ನಿಗಮ ಬೆಂಗಳೂರು ವಿಭಾಗಕ್ಕೆ ಚಿತ್ರದುರ್ಗದ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ಅವರನ್ನು ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು ಸಂಸ್ಥೆಗೆ ಯಾದಗಿರಿ ಶೋರಾಪುರ ಶಾಸಕ ನರಸಿಂಹ ನಾಯಕ್ (ರಾಜುಗೌಡ) ಅವರನ್ನು ನೇಮಕ ಮಾಡಲಾಗಿದೆ.

ಲಕ್ಷದ ಗಡಿ ದಾಟಿದ ಸೋಂಕಿತರು

ಬೆಂಗಳೂರು, ಜು.27 : ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಆರ್ಭಟ ಮುಂದುವರಿದಿದೆ. ಕಳೆದ ಐದು ದಿನಗಳಿಂದ ದಿನವೊಂದರಲ್ಲಿ ಐದು ಸಾವಿರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ. ಸೋಮವಾರ ರಾಜ್ಯದಲ್ಲಿ ಒಟ್ಟು 5324 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,01,465ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಮಹಾಮಾರಿಗೆ ಇಂದು 75 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಇದುವರೆಗೂ ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 1953ಕ್ಕೆ ಏರಿಕೆಯಾಗಿದೆ. ಇಂದು ರಾಜಧಾನಿ ಬೆಂಗಳೂರು ನಗರದಲ್ಲಿ 1470 ಪ್ರಕರಣಗಳು ಪತ್ತೆಯಾಗಿದ್ದು, 26 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

4 ಯೋಜನೆಗಳ ಮಾರ್ಗಸೂಚಿ ಬಿಡುಗಡೆ

ನವದೆಹಲಿ, ಜು.27 : ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ದೇಶದಲ್ಲಿ ಬೃಹತ್ ಔಷಧಿಗಳು ಮತ್ತು ವೈದ್ಯಕೀಯ ಉಪಕರಣಗಳ ಅಭಿವೃದ್ಧಿಗೆ ಸಂಬಂಧಿಸಿದ ನಾಲ್ಕು ಯೋಜನೆಗಳ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿದೆ. "ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಗೆ ಅನುಗುಣವಾಗಿ, ಆತ್ಮಾ ನಿರ್ಭರ್ ಭಾರತಕ್ಕಾಗಿ ಫಾರ್ಮಾ ಕ್ಷೇತ್ರದಲ್ಲೂ ಯೋಜನೆಗಳನ್ನು ರೂಪಿಸಲಾಗಿದೆ" ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ತಿಳಿಸಿದ್ದಾರೆ. 53 ನಿರ್ಣಾಯಕ ಸಕ್ರಿಯ ಔಷಧೀಯ ಪದಾರ್ಥಗಳು(ಎಪಿಐಗಳು) ಅಥವಾ ಕೀ ಸ್ಟಾರ್ಟ್ ಮೆಟೀರಿಯಲ್ಸ್ (ಕೆಎಸ್‍ಎಂ) ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ. ವೈದ್ಯಕೀಯ ಸಾಧನಗಳ ಉತ್ಪಾದನೆಯಲ್ಲಿ ಭಾರತವು ಆಮದುಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದನ್ನು ಕಡಿಮೆ ಮಾಡುವುದು ಇದರ ಉದ್ದೇಶ ಎಂದು ಸದಾನಂದ ಗೌಡ ಅವರು ಹೇಳಿದ್ದಾರೆ.

ಅನ್ ಲಾಕ್ 3.0ದಲ್ಲಿ ಹಲವು ವಿನಾಯಿತಿ

ನವದೆಹಲಿ, ಜು.27 : ಅನ್ ಲಾಕ್ 2.0 ಜು.31ಕ್ಕೆ ಕೊನೆಯಾಗಲಿದ್ದು, 3.0ದಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಅಂತರರಾಷ್ಟ್ರೀಯ ವಿಮಾನ ಸೇವೆ, ಮೆಟ್ರೋ ರೈಲು, ಚಿತ್ರಮಂದಿರ ಹಾಗೂ ಮೆಲ್ಟಿಪ್ಲೆಕ್ಸ್ ಗಳನ್ನು ತೆರೆಯುವಂತೆ ಕೈಗಾರಿಕಾ ಒಕ್ಕೂಟ (ಎಫ್‍ಐಸಿಸಿಐ) ಸರ್ಕಾರಕ್ಕೆ ಸಲಹೆ ನೀಡಿದೆ. ಸ್ಥಳೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಪುನರ್ ಆರಂಭಿಸುವ ಬಗ್ಗೆಯೂ ಕೈಗಾರಿಕಾ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದೆ. ಭಾರತೀಯ ಮತ್ತು ವಿದೇಶಿ ವಿಮಾನಗಳಿಗೆ ಎರಡು ರಾಷ್ಟ್ರಗಳ ನಡುವೆ ಸಂಚರಿಸಲು ಅವಕಾಶ ಕಲ್ಪಿಸಬೇಕು, ಹೊಟೇಲ್, ರೆಸ್ಟೋರೆಂಟ್ ಗಳು, ಚಿತ್ರಮಂದಿರ, ಮೆಟ್ರೋ ರೈಲು ಸೇವೆಯನ್ನು ಆರಂಭಿಸಬೇಕೆಂದು ಚೇಂಬರ್ ಸಲಹೆ ನೀಡಿದೆ.ಕೋವಿಡ್-19 ಪರಿಣಾಮದಿಂದಾಗಿ ಇಡೀ ಜಗತ್ತು ಹೋರಾಡುತ್ತಿರುವಂತೆಯೇ ಧೀರ್ಘಕಾಲಿನ ಲಾಕ್ ಡೌನ್, ಆರ್ಥಿಕತೆಗೆ ಸಮರ್ಥನೀಯವಲ್ಲ ಎಂದು ಎಫ್ ಐಸಿಸಿಐ ಉಲ್ಲೇಖಿಸಿದೆ.

ಸೂತಕದಲ್ಲಿ ಸರ್ಕಾರದ ಸಂಭ್ರಮ

ಬೆಂಗಳೂರು, ಜು.27 : ಕೊರೊನಾ ಸೂತಕದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷದ ಸಂಭ್ರಮಾಚರಣೆ ಮಾಡುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ. ಒಂದು ವರ್ಷದ ಸಾಧನೆಯನ್ನು ತನ್ನದೇ ಆದ ರೀತಿಯಲ್ಲಿ ಡಿ.ಕೆ. ಶಿವಕುಮಾರ್ ಕವನ ವಾಚಿಸಿ ಲೇವಡಿ ಮಾಡಿದರು. ``ಒಂದು ವರ್ಷದ ಬಿ.ಎಸ್. ಯಡಿಯೂರಪ್ಪ ನ ಆಟವೇ ಆಟ. ಒಂದನೇ_ತಿಂಗಳು ಮಂತ್ರಿಮಂಡಲ ಇಲ್ಲದೆ ತಿರುಗಾಟ. ಎರಡನೇ ತಿಂಗಳು ನೆರೆ ಪರಿಹಾರ ಕೊಡದೆ ನರಳಾಟ. ಮೂರನೇ ತಿಂಗಳು ಉಪಚುನಾವಣೆ ಎಂಬ ಬಯಲಾಟ. ನಾಲ್ಕನೇ ತಿಂಗಳುಮಂತ್ರಿ ಮಂಡಲ ಎಂಬ ದೊಂಬರಾಟ. ಐದು_ಆರರಲ್ಲಿ ಮಂತ್ರಿಗಿರಿಗಾಗಿ ಕಿತ್ತಾಟ. ಏಳು, ಎಂಟರ ತಿಂಗಳಲ್ಲಿ ಕೊರೊನಾ ಲಾಕ್ ಡೌನ್ ಎಂಬ ಹೊರಳಾಟ. ಒಂಬತ್ತು, ಹತ್ತು ಕೊರೊನಾ ಎಂಬ ಕಿರುಚಾಟ. ಹನ್ನೊಂದು ಹನ್ನೆರಡನೇ ತಿಂಗಳು ಜನ ಸಾಮಾನ್ಯರಿಗೆ ಮಾತ್ರ ಸಾವು ಬದುಕಿನ ಆಟ". ಎಂದರು. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ತಿಂಗಳಿಂದ ವಿಧವಾ ವೇತನ, ವೃದ್ಧಾಪ್ಯ ವೇತನ, ನೀಡಿಲ್ಲ. ಗ್ರಾಮೀಣ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಸರ್ಕಾರ ಅಗಾಧ ಸಾಧನೆ ಮಾಡಿದೆ ಎಂದು ಹೇಳುತ್ತಿದೆ. ಹಿಂದಿನ ಸರ್ಕಾರದ ಯೋಜನೆಗಳನ್ನು ರದ್ದು ಮಾಡಿರುವುದೇ ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆಯಾಗಿದೆ ಎಂದರು.

ರಾಮ ಮಂದಿರಕ್ಕೆ ಬಂಗಾರದ ಇಟ್ಟಿಗೆ

ನವದೆಹಲಿ,ಜು.27 : ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಹಿಂದೂಗಳಿಂದ ಮಾತ್ರವಲ್ಲ, ಇತರ ಧರ್ಮಿಯರು ನೀಡುವ ದೇಣಿಗೆಯನ್ನೂ ಸ್ವೀಕರಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರೂ ಆಗಿರುವ ಉಡುಪಿ ಪೇಜಾವರ ಮಠಾಧಿಪತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮಿ ಹೇಳಿರುವ ಬೆನ್ನಲ್ಲೇ ಮೊಘಲ್ ವಂಶಸ್ಥರೊಬ್ಬರು ಅಪರೂಪದ ದೇಣಿಗೆ ನೀಡಲು ಮುಂದಾಗಿದ್ದಾರೆ. ಮೊಘಲ್ ವಂಶಸ್ಥ ಪ್ರಿನ್ಸ್ ಯಾಕೂಬ್ ಹಬೀದುದ್ದೀನ್ ಟೂಸಿ ಅಯೋಧ್ಯೆಯ ರಾಮ ಮಂದಿರಕ್ಕೆ ಬಂಗಾರದ ಇಟ್ಟಿಗೆಯನ್ನು ಕಾಣಿಕೆಯಾಗಿ ನೀಡುವುದಾಗಿ ಪ್ರಕಟಿಸಿದ್ದಾರೆ. ಒಂದು ಕೆ.ಜಿ. ತೂಕದ ಸ್ವರ್ಣ ಇಟ್ಟಿಗೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ನೀಡುತ್ತೇನೆ, ಅದನ್ನು ದೇಗುಲ ನಿರ್ಮಾಣದಲ್ಲಿ ಬಳಸಬಹುದು ಎಂದು ಪ್ರಕಟಿಸಿದ್ದಾರೆ.

ಮಂದಿರಕ್ಕಾಗಿ 800 ಕಿ.ಮೀ ಪಾದಯಾತ್ರೆ

ಆಯೋಧ್ಯೆ, ಜು.27 : ಮಹಮದ್ ಫೈಜ್ ಖಾನ್ ಎಂಬವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಭೂಮಿ ಪೂಜೆಯನ್ನು ಕಣ್ತುಂಬಿಕೊಳ್ಳಲು 800 ಕಿ.ಮೀ ಕಾಲ್ನಡಿಗೆಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇವರು ಶ್ರೀರಾಮನ ತಾಯಿ ಕೌಸಲ್ಯಾದೇವಿ ಜನ್ಮಸ್ಥಳವೆಂದು ನಂಬಲಾಗಿರುವ ಚತ್ತೀಸ್ ಗಢದ ಚಂದ್ ಖುರಿ ಗ್ರಾಮದ ವಾಸಿ. ಈ ವ್ಯಕ್ತಿಗೆ ಹಿಂದೂ ದೇವರುಗಳಲ್ಲಿ ಅತ್ಯಂತ ಭಕ್ತಿ, ಗೌರವ. ಅದೆಷ್ಟೋ ಬಾರಿ ದೇವರುಗಳ ಸ್ಮರಣೆಯಲ್ಲಿ ಪರವಶಗೊಳ್ಳುತ್ತಾರೆ.