ಗೋಣಿಕೊಪ್ಪ ವರದಿ, ಜು. 27: ವೀರಾಜಪೇಟೆ ತಾಲೂಕಿನ ಅಂಗನವಾಡಿಗಳಿಗೆ ಒಂದು ತಿಂಗಳ ಅವಧಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿ ಅನುದಾನ ವಾಪಸ್ ಹೋಗದಂತೆ ಕ್ರಮಕೈಗೊಳ್ಳಬೇಕು ಎಂದು ವೀರಾಜಪೇಟೆ ತಾಲೂಕು ಪಂಚಾಯಿತಿ ಸಭೆಯಲ್ಲಿ ಒತ್ತಾಯಿಸಲಾಯಿತು.ಪೊನ್ನಂಪೇಟೆ ಸಾಮಥ್ರ್ಯಸೌಧ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ವೀರಾಜಪೇಟೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಸದಸ್ಯರುಗಳು ಒತ್ತಾಯಿಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಯ ವಿಳಂಭ ಧೋರಣೆಯನ್ನು ಪ್ರಶ್ನಿಸಿದರು. ನಿರ್ಲಕ್ಷ್ಯದಿಂದ ಇನ್ನೂ ಕೂಡ ಒಂದೇ ಒಂದು ಅಂಗನವಾಡಿ ಕೇಂದ್ರಕ್ಕೆ ವಿದ್ಯುತ್ ಸೌಲಭ್ಯ ದೊರೆತಿಲ್ಲ ಎಂದು ಹೇಳಿದರು. ವಿದ್ಯುತ್ ಸಂಪರ್ಕಕ್ಕೆ ಬಿಡುಗಡೆಯಾಗಿರುವ ಹಣವನ್ನು ಸಮರ್ಪಕವಾಗಿ ಬಳಸಬೇಕಿತ್ತು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ತಲಾ 1,500 ರೂ. ನಂತೆ ಪ್ರತಿ ಅಂಗನವಾಡಿ ಕೇಂದ್ರಕ್ಕೆ ವಿದ್ಯುತ್ ಸೌಲಭ್ಯ ಕಲ್ಪಿಸಲು ಹಣ ಬಿಡುಗಡೆಯಾಗಿದ್ದರೂ ಇನ್ನೂ ಅನುಷ್ಠಾನಗೊಳಿಸದೇ ಇರುವುದರಿಂದ ಹಣ ವಾಪಸ್ ಹೋಗುವ ಸಾಧ್ಯತೆ ಹೆಚ್ಚಿದೆ. ಹಣ ಸಾಲದು ಎಂದು ಹೆಚ್ಚುವರಿಯಾಗಿ 3 ಸಾವಿರ ಬಿಡುಗಡೆಗೆ ಅನುಮೋದÀನೆ (ಮೊದಲ ಪುಟದಿಂದ) ಪಡೆದುಕೊಂಡಿದ್ದರೂ ಇನ್ನೂ ವಿದ್ಯುತ್ ಕಲ್ಪಿಸಿಲ್ಲ. ತಾಲೂಕಿನ 220 ಅಂಗನವಾಡಿಗೆ ಒಂದು ತಿಂಗಳ ಅವಧಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಅವಕಾಶ ನೀಡಲಾಯಿತು. ಹಣ ವಾಪಸ್ ಹೋಗದಂತೆ ಬಳಕೆಯಾಗಲು ನೀವೇ ಜವಾಬ್ದಾರರು ಎಂದು ಈ ಸಂದರ್ಭ ತಿಳಿಸಲಾಯಿತು.
ಉಳಿದಂತೆ ಇಲಾಖೆಗಳಿಗೆ ಬಿಡುಗಡೆಯಾಗಿರುವ ಹಣವನ್ನು ಸಮರ್ಪಕವಾಗಿ ಬಳಸಿ ಹಣ ವಾಪಸ್ ಹೋಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಕೊರೊನಾದಿಂದಾಗಿ ಸಾಕಷ್ಟು ಕಾಮಗಾರಿ ನಡೆಯದ ಕಾರಣ, ಸಾಧ್ಯವಾದಷ್ಟು ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಕಳೆದ ವರ್ಷದ ಮಳೆಹಾನಿಯಿಂದ ಮನೆ ಕಳೆದುಕೊಂಡವರಿಗೆ ಜಾಗದ ಗೊಂದಲದಿಂದ ಮನೆ ನಿರ್ಮಿಸಲು ಆಗುತ್ತಿಲ್ಲ. ತಕ್ಷಣ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಉಪಾಧ್ಯಕ್ಷ ನೆಲ್ಲೀರ ಚಲನ್‍ಕುಮಾರ್ ಒತ್ತಾಯಿಸಿದರು.
ಮಳೆಹಾನಿ ಯೋಜನೆಯಲ್ಲಿ ಕೆಲವೊಂದು ಮನೆ ನಿರ್ಮಾಣಕ್ಕೆ ಹಣ ಫಲಾನುಭವಿಗಳಿಗೆ ತಲುಪಿಲ್ಲ. 1 ಲಕ್ಷ ಹಣ ಖಾತೆಗೆ ನೀಡಿ, ಉಳಿದ 4 ಲಕ್ಷ ರೂ. ಹಣ ನೀಡಿಲ್ಲ. ಇದರಿಂದ ಸಾಕಷ್ಟು ಫಲಾನುಭವಿಗಳು ಕೈಯಲ್ಲಿ ಹಣವಿಲ್ಲದೆ, ಮನೆ ಪೂರ್ಣಗೊಳಿಸಲಾಗದೆ ಸಂಕಷ್ಟದಲ್ಲಿದ್ದಾರೆ ಎಂದು ಸದಸ್ಯರುಗಳು ವಿಷಾದ ವ್ಯಕ್ತಪಡಿಸಿದರು. ಪಿಡಿಒಗಳು ಆಯಾ ಭಾಗದ ಮನೆ ಫಲಾನುಭವಿಗಳ ಜಿಪಿಎಸ್ ನಡೆಸಿ ಹಣ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
10 ಹೆಚ್.ಪಿ. ಪಂಪ್‍ಸೆಟ್‍ಗೆ ಉಚಿತ ವಿದ್ಯುತ್ ಸೌಲಭ್ಯ ಘೋಷಣೆಯಾಗಿಯೇ ಉಳಿದಿದೆ. ಇದನ್ನು ಸರ್ಕಾರ ಇನ್ನೂ ಖಚಿತ ಪಡಿಸಿಲ್ಲ. ಸರ್ಕಾರ ಉಚಿತ ವಿದ್ಯುತ್ ಸೌಲಭ್ಯವನ್ನು ಖಚಿತ ಪಡಿಸಲು ಒತ್ತಾಯಿಸಬೇಕಿದೆ ಎಂದು ಸದಸ್ಯ ಮಾಳೇಟಿರ ಪ್ರಶಾಂತ್ ಹೇಳಿದರು. ಈ ಬಗ್ಗೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಯಿತು.
ತಾಲೂಕಿನಲ್ಲಿ ಬೇಡಿಕೆ ಇರುವ 16 ಲಕ್ಷ ಮೀನುಮರಿ ವಿತರಣೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸಭೆ ಆಗ್ರಹಿಸಿತು. ಈಗಾಗಲೇ 4 ಲಕ್ಷ ಮರಿಗಳ ವಿತರಣೆಯಾಗಿದೆ. 2 ಲಕ್ಷ ನೀಡಲಾಗುವುದು ಎಂದು ಅಧಿಕಾರಿ ಮಾಹಿತಿ ನೀಡಿದರು. ಉಳಿದ ಮೀನು ಮರಿಗಳನ್ನು ವಿತರಿಸುವಲ್ಲಿ ಮುತುವರ್ಜಿ ವಹಿಸಬೇಕು ಎಂದು ಸದಸ್ಯರು ತಿಳಿಸಿದರು.
ಮಳೆಹಾನಿ ಪರಿಹಾರ ಅನುದಾನದಲ್ಲಿ ಮಳೆ ಆರಂಭವಾದಾಗ ರಸ್ತೆ ಡಾಂಬರೀಕರಣ ಆರಂಭಿಸುವುದರಿಂದ ಮತ್ತೆ ಮಳೆಯಲ್ಲಿ ಕೊಚ್ಚಿ ಹೋಗುತ್ತದೆ. ಪುನಃ ಅದೇ ಕಾಮಗಾರಿಗೆ ಮತ್ತೊಂದು ಮಳೆ ಹಾನಿ ಹಣ ಬಿಡುಗಡೆ ಮಾಡಬೇಕಾಗುತ್ತದೆ ಎಂದು ತಾ.ಪ. ಸದಸ್ಯ ಅಜಿತ್ ಕರುಂಬಯ್ಯ ಲೋಕೋಪಯೋಗಿ ಇಲಾಖೆಯ ಗಮನ ಸೆಳೆದರು.
ಸಿದ್ದಾಪುರ-ಪಾಲಿಬೆಟ್ಟ ರಸ್ತೆ ಅಭಿವೃದ್ಧಿಗೆ 2 ವರ್ಷಗಳ ಹಿಂದೆ ಅನುದಾನ ಬಿಡುಗಡೆಯಾಗಿದ್ದರೂ ರಸ್ತೆ ಡಾಂಬರೀಕರಣ ನಡೆಸದಿರುವ ಬಗ್ಗೆ ಸದಸ್ಯ ಅಜಿತ್ ಕರುಂಬಯ್ಯ ಲೋಕೋಪಯೋಗಿ ಇಲಾಖೆ ಅಧಿಕಾರಿಯನ್ನು ತರಾಟೆಗೆ ತೆಗೆದು ಕೊಂಡರು. ಹಣ ಬಂದ ಕೂಡಲೇ ಕಾಮಗಾರಿ ಕೈಗೊಳ್ಳುವುದಾಗಿ ಅಧಿಕಾರಿ ಭರವಸೆ ನೀಡಿದರು. ಸಭೆಯಲ್ಲಿ ಇಒ ಷಣ್ಮುಗಂ ಉಪಸ್ಥಿತರಿದ್ದರು.
-ಸುದ್ದಿಪುತ್ರ