ಮಡಿಕೇರಿ, ಜು. 26: ಜಿಲ್ಲೆಯಲ್ಲಿ ತಾ.26 ರಂದು ಹೊಸ 6 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಒಬ್ಬರು ಮೃತಪಟ್ಟಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 348 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 253 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಒಟ್ಟು 6 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು 89 ಪ್ರಕರಣಗಳು ಸಕ್ರಿಯವಾಗಿವೆ. ಜಿಲ್ಲೆಯಾದ್ಯಂತ 100 ನಿಯಂತ್ರಿತ ವಲಯಗಳಿವೆ.1 ಸಾವು ಕೊರೊನಾ ವೈರಸ್‍ಗೆ ಇಂದು ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಬಲಿಯಾಗಿದ್ದು, ಆ ಮೂಲಕ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ ಆರಕ್ಕೇರಿದೆ.

ತಾ.24ರಂದು ವೀರಾಜಪೇಟೆಯ ಮೋಗರಗಲ್ಲಿ ನಿವಾಸಿ, 46 ವರ್ಷದ ಪುರುಷರೊಬ್ಬರು ಜ್ವರದಿಂದ ಬಳಲುತ್ತಿದ್ದು, ಅವರು ವೀರಾಜಪೇಟೆಯ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು.

ನಂತರ ಅವರ ರೋಗ ಲಕ್ಷಣಗಳ ಪತ್ತೆಗಾಗಿ ವೀರಾಜಪೇಟೆಯ ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷೆಯನ್ನು ಮಾಡಿಸಿದ್ದು, ಅವರಿಗೆ ಟೈಫಾಯ್ಡ್ ಇರುವುದು ತಿಳಿದು ಬಂದಿತ್ತು. ಬಳಿಕ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಗೆ ಟೈಫಾಯ್ಡ್ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಜ್ವರ ಕಡಿಮೆಯಾಗದ ಕಾರಣ ತಾ.25ರಂದು ಅವರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಕೊರೊನಾ ಪರೀಕ್ಷೆಗೆ ಕಳುಹಿಸಲಾಗಿತ್ತು.

ಆದರೆ ತಾ.26ರಂದು ಬೆಳಗ್ಗಿನ ಜಾವ ಅವರಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಕಾರಣ ಅವರನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಕಳುಹಿಸಿದ್ದು, ಕೋವಿಡ್ ಆಸ್ಪತ್ರೆಗೆ ತಲುಪುವ ಮುನ್ನವೇ ಅವರು ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

(ಮೊದಲ ಪುಟದಿಂದ)

ಮೃತ ದೇಹದ ಗಂಟಲು ದ್ರವ ಪರೀಕ್ಷೆಯನ್ನು ಆಂಟಿಜೆನ್ ಕಿಟ್ ಮೂಲಕ ಪರೀಕ್ಷಿಸಿದ್ದು, ಮೃತ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಇನ್ನುಳಿದ ಪ್ರಕರಣಗಳ ವಿವರ

ಮಡಿಕೇರಿ ಸ್ಟುವರ್ಟ್ ಹಿಲ್ ರಸ್ತೆಯ 43 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಕುಶಾಲನಗರದ ಹುಲಸೆ ಗ್ರಾಮದಲ್ಲಿ ಈ ಹಿಂದೆ ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ 78 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನಿಂದ ಹಿಂತಿರುಗಿ ನೇರವಾಗಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ 24 ವರ್ಷದ ಪುರುಷನಿಗೂ ಸೋಂಕು ತಗುಲಿದೆ. ಮಡಿಕೇರಿ ಆಜಾದ್ ನಗರದ 30 ವರ್ಷದ ಮಹಿಳೆಗೂ ಸೋಂಕು ದೃಢಪಟ್ಟಿದೆ. ಮಡಿಕೇರಿಯ ಪುಟಾಣಿನಗರದಲ್ಲಿ ಈ ಹಿಂದೆ ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಿಂದ 43 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಹೊಸ ನಿಯಂತ್ರಿತ ಪ್ರದೇಶಗಳು

ಸ್ಟುವರ್ಟ್ ಹಿಲ್ ರಸ್ತೆ, ಆಜಾದ್ ನಗರದ ಮಸೀದಿ ಬಳಿ, ಪುಟಾಣಿನಗರದ ಚಾಮರಾಜ ಬಂಗ್ಲೋ ಎದುರು ಹಾಗೂ ವೀರಾಜಪೇಟೆಯ ಮೊಗರಗಲ್ಲಿ ಈ 4 ಪ್ರದೇಶಗಳಲ್ಲಿ ನಿಯಂತ್ರಿತ ವಲಯಗಳನ್ನು ತೆರೆಯಲಾಗಿದೆ.

ನಿಯಂತ್ರಿತ ಪ್ರದೇಶಗಳ ತೆರವು

ಬೈಚನಹಳ್ಳಿ, ಶ್ರೀಮಂಗಲದ ಚೇರಳ, ಗೋಪಾಲಪುರ, ಹೆಬ್ಬಾಲೆಯ ಅಂಬೇಡ್ಕರ್ ನಗರ, ಕಾರೆಕೊಪ್ಪ, ಕುಶಾಲನಗರದ ಅಯ್ಯಪ್ಪ ಸ್ವಾಮಿ ರಸ್ತೆ, ಕೋಣೆಮಾರಮ್ಮ ದೇವಸ್ಥಾನ, ಮಡಿಕೇರಿಯ ಪರಸಿಬಾಣೆ, ಕುಶಾಲನಗರದ ಶಿವರಾಮಕಾರಂತ್ ಬಡಾವಣೆ, ಸುಂಟಿಕೊಪ್ಪದ ಪಿ.ಹೆಚ್.ಸಿ ಹಿಂಭಾಗ, ತೋರ, ಗೋಣಿಕೊಪ್ಪದ ವಿಜಯನಗರ ಬಡಾವಣೆ, ಈ ಪ್ರದೇಶಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.