ರಾಜ್ಯದಲ್ಲಿ ಉಗ್ರರ ಚಟುವಟಿಕೆಗೆ ಕಡಿವಾಣ

ಬೆಂಗಳೂರು, ಜು. 26: ಐಸಿಸ್ ಸೇರಿ ಇತರ ಸಂಘಟನೆಗಳ ಉಗ್ರರ ಚಟುವಟಿಕೆಗಳನ್ನು ಕಟ್ಟಿ ಹಾಕಲು ನಾವೂ ಪಣತೊಟ್ಟಿದ್ದೇವೆ. ಹೀಗಾಗಿ ರಾಷ್ಟ್ರೀಯ ತನಿಖಾ ದಳ ಎನ್‍ಐಎದೊಂದಿಗೆ ಸಂಪರ್ಕದಲ್ಲಿದ್ದು, ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಭಾರತದಲ್ಲಿ ಉಗ್ರ ಚಟುವಟಿಕೆಗಳಿಗೆ ಸಂಚು ನಡೆಯುತ್ತಿದೆ ಎಂಬ ವಿಶ್ವಸಂಸ್ಥೆ ವರದಿಗೆ ನಗರದಲ್ಲಿ ರವಿವಾರ ಪ್ರತಿಕ್ರಿಯಿಸಿದ ಅವರು, ಕೇರಳ ಹಾಗೂ ಕರ್ನಾಟಕದಲ್ಲಿ ಉಗ್ರರ ಕೃತ್ಯ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ನಾವು ಎನ್‍ಐಎಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಈಗಾಗಲೇ ಬೆಂಗಳೂರು ಹಾಗೂ ಉಡುಪಿಯಲ್ಲಿ ಎರಡು ಮಾಡೆಲ್‍ಗಳಿಗೆ ಇತ್ಯರ್ಥ ಮಾಡಲಾಗಿದೆ. ನಿರಂತರವಾಗಿ ಉಗ್ರರ ಚಟುವಟಿಕೆ ತಡೆಗೆ ಎಲ್ಲಾ ರೀತಿಯ ಕ್ರಮಗಳನ್ನು ಕರ್ನಾಟಕ ಪೊಲೀಸ್ ಇಲಾಖೆ ತೆಗೆದುಕೊಂಡಿದೆ ಎಂದು ಹೇಳಿದರು. ಅಂತೆಯೇ ಕೇವಲ ಎನ್‍ಐಎ ಮಾತ್ರವಲ್ಲದೇ, ಕೇರಳ, ತಮಿಳುನಾಡು, ತೆಲಂಗಾಣ ಪೊಲೀಸರ ಜೊತೆಯ ಸಂಪರ್ಕದಲ್ಲಿದ್ದೇವೆ. ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದೇವೆ. ರಾಜ್ಯದಲ್ಲಿ ಯಾವುದೇ ಉಗ್ರ ಚಟುವಟಿಕೆಗೆ ಅವಕಾಶ ಕೊಟ್ಟಿಲ್ಲ. ಮುಂದೆಯೂ ಕೊಡುವುದಿಲ್ಲ ಎಂದೂ ಅವರು ಹೇಳಿದರು.

ರಾಜ್ಯದ ಸೋಂಕಿತರ ಸಂಖ್ಯೆ 96 ಸಾವಿರÀ

ಬೆಂಗಳೂರು, ಜು. 26: ರಾಜ್ಯದಲ್ಲಿ ಕೊರೊನಾ ಆರ್ಭಟ ಮುಂದುವರಿದಿದೆ. ಕಳೆದ ನಾಲ್ಕು ದಿನಗಳಿಂದ ದಿನವೊಂದರಲ್ಲಿ ಐದು ಸಾವಿರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರಿಂದ ರಾಜ್ಯದ ಸೋಂಕಿತರ ಸಂಖ್ಯೆ ಬರೋಬ್ಬರಿ 96 ಸಾವಿರದ ಗಡಿ ತಲುಪಿದೆ. ಭಾನುವಾರ ರಾಜ್ಯದಲ್ಲಿ ಒಟ್ಟು 5199 ಪ್ರಕರಣಗಳು ವರದಿಯಾಗಿದ್ದು, 82 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 96,141ಕ್ಕೇ ಏರಿಕೆಯಾಗಿದೆ. ಮೃತರ ಸಂಖ್ಯೆ 1878ಕ್ಕೆ ಏರಿಕೆಯಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಇಂದು ರಾಜಧಾನಿ ಬೆಂಗಳೂರು ನಗರದಲ್ಲಿ 1950 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 43503ಕ್ಕೇ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಮಹಾಮಾರಿಗೆ ಇಂದು 29 ಮಂದಿ ಬಲಿಯಾಗಿದ್ದಾರೆ.

ಉಗ್ರರನ್ನು ಕಪ್ಪು ಪಟ್ಟಿಗೆ ಸೇರಿಸಿಲ್ಲ

ವಿಶ್ವಸಂಸ್ಥೆ, ಜು. 26: ಪಾಕಿಸ್ತಾನಿಯರ ನೇತೃತ್ವದಲ್ಲಿ ಕುಕೃತ್ಯಗಳನ್ನು ನಡೆಸುತ್ತಿರುವ ಭಯೋತ್ಪಾದಕ ಸಂಘಟನೆಗಳನ್ನು ಈವರೆಗೆ ಕಪ್ಪು ಪಟ್ಟಿಗೆ ಸೇರಿಸಿಲ್ಲ ಎಂದು ವಿಶ್ವಸಂಸ್ಥೆ (ಯುಎನ್) ವರದಿಯೊಂದರಲ್ಲಿ ತಿಳಿಸಲಾಗಿದೆ. ಭಾರತ ಉಪಖಂಡದಲ್ಲಿ, ಅಲ್ ಖೈದಾ, ಇರಾಕ್‍ನ ಇಸ್ಲಾಮಿಕ್ ಸ್ಟೇಟ್ ಮತ್ತು ಲೆವಂತ್-ಖೋರಾಸನ್, ಮತ್ತು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಗಳನ್ನು ಪಾಕಿಸ್ತಾನಿ ರಾಷ್ಟ್ರೀಯರು ಮುನ್ನಡೆಸುತ್ತಿದ್ದಾರೆ. ಈವರೆಗೆ ಅವರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿಲ್ಲ ಎಂದು ಭಯೋತ್ಪಾದಕ ಸಂಘಟನೆಗಳ ಕುರಿತ ಸಮಿತಿ ತನ್ನ 26ನೇ ವರದಿಯಲ್ಲಿ ಹೇಳಿದೆ. ಅಫ್ಘಾನಿಸ್ತಾನದ ವಿಶೇಷ ಪಡೆಗಳು ಕಳೆದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ದೇಶಾದ್ಯಂತ ದಾಳಿ ನಡೆಸಿದ್ದು, ಈ ದಾಳಿಗಳಲ್ಲಿ ಐಸಿಲ್-ಕೆ ಮುಖ್ಯಸ್ಥ ಅಸ್ಲಂ ಫಾರೂಕಿ ಅಲಿಯಾಸ್ ಅಬ್ದುಲ್ಲಾ ಒರೊಕಜೈ, ಜಿಯಾ-ಉಲ್-ಹಕ್ ಅಲಿಯಾಸ್ ಅಬು ಒಮರ್ ಖೋರಸಾನಿ ಹಾಗೂ ಇತರರನ್ನು ಬಂಧಿಸಿವೆ ಎಂದು ವರದಿ ಹೇಳಿದೆ. ಫಾರೂಕಿ ಪಾಕಿಸ್ತಾನದ ಖೈಬರ್ ಪಷ್ತೂನ್ ಮೂಲದವನು, ಮಾರ್ಚ್‍ನಲ್ಲಿ ಕಾಬೂಲ್‍ನ ಪ್ರಮುಖ ಗುರುದ್ವಾರದ ಮೇಲೆ ನಡೆದ ಭಯೋತ್ಪಾದಕ ದಾಳಿಯ ಸೂತ್ರ ದಾರಿ ಎಂದು ಹೇಳಲಾಗುತ್ತಿದೆ. ದಾಳಿಯಲ್ಲಿ 25 ಸಿಖ್ಖರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಲ್ ಖೈದಾ ದಿಗ್ಬಂಧನ ಸಮಿತಿ ಫಾರೂಕಿಯನ್ನು ಈವರೆಗೆ ಕಪ್ಪುಪಟ್ಟಿಗೆ ಸೇರಿಸಿಲ್ಲ ಎಂದು ಹೇಳಿದೆ.

ಮುಜಾರಾಯಿ ಸಿಬ್ಬಂದಿಗೆ ವಿಮಾ ಸೌಲಭ್ಯ

ಮಂಗಳೂರು, ಜು. 26: ಕೊರೊನಾ ವೈರಸ್ ಸಾಂಕ್ರಾಮಿಕದ ನಡುವೆ ರಾಜ್ಯದ ಸಹಸ್ರಾರು ಮುಜಾರಾಯಿ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ವಿಮಾ ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಎಲ್ಲಾ ದೇವಾಲಯಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ದರ್ಜೆಯ ಸಿಬ್ಬಂದಿಗೆ ವಿಮಾ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಅರ್ಚಕರ ಮನವಿಗೆ ಸ್ಪಂದಿಸಿ ಮುಂದಿನ ದಿನಗಳಲ್ಲಿ ಐದು ಲಕ್ಷ ರೂಪಾಯಿ ಮೊತ್ತದ ಆರೋಗ್ಯ ವಿಮೆ ಮತ್ತು ರೂ. 10 ಲಕ್ಷ ಮೊತ್ತದ ಜೀವ ವಿಮೆ ನೀಡಲು ಯೋಜನೆ ಸಿದ್ಧಪಡಿಸಲಾಗುತ್ತಿದೆ. 34 ಸಾವಿರ ದೇವಸ್ಥಾನಗಳಲ್ಲಿ ರಾಜ್ಯದಲ್ಲಿ ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಅರ್ಚಕರು ಮತ್ತು ಸಿಬ್ಬಂದಿ ಇದ್ದಾರೆ. ಇಲಾಖೆ ಹೊರತಾದ ದೇವಳಗಳಿಂದ ಮನವಿ ಬಂದರೂ ಪರಿಗಣಿಸಲಾಗುವುದು ಎಂದರು.

ಪ್ರಜಾಪ್ರಭುತ್ವ ಉಳಿಸಿ ಪ್ರತಿಭಟನೆ

ಬೆಂಗಳೂರು, ಜು. 26: ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಪ್ರಜಾಪ್ರಭುತ್ವ ಉಳಿಸಿ-ಸಂವಿಧಾನ ರಕ್ಷಿಸಿ ಹೆಸರಿನಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ತಾ. 27 ರಂದು ನಾಳೆ ಮಧ್ಯಾಹ್ನ ರಾಜಭವನದ ಮುಂದೆ ಕಾಂಗ್ರೆಸ್ ಸಂಸದರು, ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು, ಪಕ್ಷದ ಪ್ರಮುಖ ನಾಯಕರು, ಪದಾಧಿಕಾರಿಗಳು ಪ್ರತಿಭಟನೆ ನಡೆಸಲಿದ್ದಾರೆ. ಬಿಜೆಪಿ ಸರ್ಕಾರ ಕಳೆದ ಒಂದು ವರ್ಷದಲ್ಲಿ ಅತಿವೃಷ್ಟಿ, ಬರ ಹಾಗೂ ಕೊರೊನಾವನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದರೂ ಸರ್ಕಾರ ಸಾಧನೆ ಸಮಾವೇಶ ನಡೆಸಲು ಮುಂದಾಗಿದೆ ಎಂದು ಆರೋಪಿಸಿ ಹೋರಾಟಕ್ಕಿಳಿದಿದೆ.

3,338 ಸೋಂಕಿತರು ನಾಪತ್ತೆ

ಬೆಂಗಳೂರು, ಜು. 26: ಕೊರೊನಾ ವೈರಸ್ ಮಹಾಮಾರಿ ಬೆಂಗಳೂರಿಗರನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿಗೆ ಬ್ರೇಕ್ ಹಾಕಲು ಸರ್ಕಾರ ಮತ್ತು ಬಿಬಿಎಂಪಿ ಹರಸಾಹಸ ಪಡುತ್ತಿದೆ. ಆದರೆ ಇತ್ತ ಉದ್ಯಾನ ನಗರಿಯಲ್ಲಿ ಬರೋಬ್ಬರಿ 3,338 ಕೊರೊನಾ ಸೋಂಕಿತರು ನಾಪತ್ತೆಯಾಗಿರುವ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಕೊರೊನಾ ವೈರಸ್ ಸೋಂಕಿತರು ನಾಪತ್ತೆಯಾಗಿದ್ದು, ಇವರ ಹುಡುಕಾಟಕ್ಕೆ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಇದುವರೆಗೂ ಒಟ್ಟು 36,993 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 27,992 ಆಕ್ಟೀವ್ ಪ್ರಕರಣಗಳು ಇವೆ. ಅಲ್ಲದೇ ಸುಮಾರು 8,279 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ ಮಾರಕ ವೈರಾಣುವಿಗೆ 722 ಜನ ಅಸುನೀಗಿದ್ದಾರೆ. ಈ ಮಧ್ಯೆ ಸುಮಾರು 3,338 ಕೋವಿಡ್-19 ಸೋಂಕಿತರು ನಾಪತ್ತೆಯಾಗಿರುವುದು ಸರ್ಕಾರವನ್ನು ತೀವ್ರ ಚಿಂತೆಗೀಡು ಮಾಡಿದೆ.