ಮಡಿಕೇರಿ, ಜು. 26: ಕಳೆದ ಎರಡು ದಶಕದ ಹಿಂದೆ ಭಾರತದ ಗಡಿ ಭಾಗದ ಕಾರ್ಗಿಲ್ ಕಣಿವೆಯಲ್ಲಿ ಪಾಕ್ ಸೈನಿಕರು ನುಸುಳುವು ದರೊಂದಿಗೆ ಅಘೋಷಿತ ಯುದ್ಧ ನಡೆದು, ಆ ವೇಳೆಯಲ್ಲಿ ಬಲಿದಾನಗೈದಿರುವ ನಮ್ಮ ಯೋಧರ ಸಂಸ್ಮರಣೆ ಹಾಗೂ 21ನೇ ಕಾರ್ಗಿಲ್ ವಿಜಯ ದಿನವನ್ನು ಇಂದು ಕೊಡಗಿನ ನೆಲದಲ್ಲಿ ಆಚರಿಸಲಾಯಿತು.ಕೂಡಿಗೆ ಸೈನಿಕ ಶಾಲೆ, ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ, ಫೀ.ಮಾ. ಕಾರ್ಯಪ್ಪ-ಜನರಲ್ ತಿಮ್ಮಯ್ಯ ಫೋರಂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ಈ ಅವಿಸ್ಮರಣೀಯ ದಿನವನ್ನು ಅರ್ಥಪೂರ್ಣವಾಗಿ ನೆರವೇರಿಸಲಾಯಿತು. ಕೂಡಿಗೆ ಸೈನಿಕ ಶಾಲೆಯಲ್ಲಿ 21ನೇ ಕಾರ್ಗಿಲ್ ವಿಜಯ ದಿನೋತ್ಸವ ಆಚರಿಸಲಾಯಿತು. ಕಾರ್ಗಿಲ್‍ನಲ್ಲಿ ವೀರ ಯೋಧರ ಬಲಿದಾನವನ್ನು ಸ್ಮರಿಸುವ ನಿಟ್ಟಿನಲ್ಲಿ ಸೈನಿಕ ಶಾಲೆಯಲ್ಲಿರುವ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಅರ್ಪಿಸುವ ಮೂಲಕ ಗೌರವವನ್ನು ಸಮರ್ಪಿಸಲಾಯಿತು.ಈ ಸಂದರ್ಭ ಶಾಲೆಯ ಪ್ರಾಂಶುಪಾಲ ಕರ್ನಲ್ ಜಿ. ಕಣ್ಣನ್, ಉಪ ಪ್ರಾಂಶುಪಾಲ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ, ಆಡಳಿತಾಧಿಕಾರಿ ಸ್ಕ್ವ್ವಾಡ್ರನ್ ಲೀಡರ್ ಆರ್ ಕೆ ಡೇ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಅರ್ಪಿಸಿದರು. ಈ ಸಂದರ್ಭ ಶಾಲೆಯ ವಿದ್ಯಾರ್ಥಿಗಳನ್ನುದ್ದೇಶಿಸಿ ವೀಡಿಯೋ ದೃಶ್ಯಾವಳಿಯ ಮೂಲಕ ಪ್ರಾಂಶುಪಾಲರು, ಪ್ರಸ್ತುತ ಕಾರ್ಯಕ್ರಮದ ಕುರಿತು ಸಂದೇಶ ನೀಡಿದರು. ಶಾಲೆಯು ಕೇಂದ್ರ ರಕ್ಷಣಾ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕರ್ನಾಟಕ ರಾಜ್ಯ ಸರ್ಕಾರದ ಸಹಕಾರದೊಂದಿಗೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಭಾವಿ ನಾಯಕರನ್ನಾಗಿ ರೂಪಿಸುವ ತರಬೇತಿ ನೀಡಲಾಗುತ್ತಿದೆ ಎಂದರು.

ವೀಡಿಯೋ ಕಾನ್ಫರೆನ್ಸ್ ಮೂಲಕ ಕೆಡೆಟ್ ಅಮೋಘ್ ಮತ್ತು ತಂಡದ ವರಿಂದ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕøತ ಹುತಾತ್ಮ ‘ಕ್ಯಾಪ್ಟನ್ ವಿಕ್ರಮ್ ಭಾತ್ರಾ’ ಬಲಿದಾನದ ಸಂಸ್ಮರÀಣೆಯ ನ್ನೊಳಗೊಂಡ ‘ಎ ದಿಲ್ ಮಾಂಗೇ ಮೋರ್’ ಎಂಬ

(ಮೊದಲ ಪುಟದಿಂದ) ಕಿರು ನಾಟಕವನ್ನು ಪ್ರದರ್ಶಿಸಲಾಯಿತು. ಪ್ರಸಕ್ತ ವರ್ಷದ ಸಿಬಿಎಸ್‍ಸಿಯ 10 ಮತ್ತು 12ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಯು ಉತ್ತಮ ಫಲಿತಾಂಶವನ್ನು ಗಳಿಸಲು ಕಾರಣೀಕರ್ತರಾದ ಶಿಕ್ಷಕರಿಗೆ ಪ್ರಶಂಸನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು.

ಜಿಲ್ಲಾ ಕೇಂದ್ರ ಮಡಿಕೇರಿ

ಇಪ್ಪತ್ತೊಂದು ವರ್ಷಗಳ ಹಿಂದೆ ಭಾರತದ ಗಡಿಗಳಲ್ಲಿ ನುಸುಳಿ ಬಂದು ಅಘೋಷಿತ ಯುದ್ಧ ಸಾರಿದ್ದ ಪಾಕಿಸ್ಥಾನ ವಿರುದ್ಧ ‘ಆಪರೇಷನ್ ವಿಜಯ್’ ಕಾರ್ಯಾಚರಣೆ ಮೂಲಕ 1999ರಲ್ಲಿ ಕಾರ್ಗಿಲ್ ಕಣಿವೆಯಲ್ಲಿ ಅದ್ಭುತ ವಿಜಯ ಸಾಧನೆಯೊಂದಿಗೆ 526 ಯೋಧರ ಬಲಿದಾನವನ್ನು ಸ್ಮರಿಸುವುದರೊಂದಿಗೆ, ಇಂದು ಕೊಡಗಿನ ನೆಲದಲ್ಲಿ ಆ ಸಮರ ವೀರರಿಗೆ ವೀರ ನಮನ ಸಲ್ಲಿಸಲಾಯಿತು.

ಇಲ್ಲಿನ ತಾಲೂಕು ಕಚೇರಿ ಬಳಿಯ ಯುದ್ಧ ಸ್ಮಾರಕದಲ್ಲಿ ಮಡಿಕೇರಿ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಬಿ.ಪಿ. ದಿನೇಶ್ ಕುಮಾರ್, ನಿವೃತ್ತ ಮೇಜರ್ ಓ.ಎಸ್. ಚಿಂಗಪ್ಪ ನೇತೃತ್ವದಲ್ಲಿ ಪುಷ್ಪ ನಮನ ನೆರವೇರಿತು.

ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿವೈಎಸ್‍ಪಿ. ದಿನೇಶ್ ಕುಮಾರ್ ಮಾತನಾಡುತ್ತಾ, ದೇಶದ ಗಡಿ ಕಾಯುವ ಕೆಲಸವನ್ನು ವೀರ ಸೈನಿಕರು ಮಾಡುತ್ತಿದ್ದರೆ, ಆಂತರಿಕ ಭದ್ರತೆಯನ್ನು ಕಾಪಾಡುವಲ್ಲಿ ಪೊಲೀಸರು ಶ್ರಮಿಸುತ್ತಿದ್ದು, ಯೋಧರು ಮತ್ತು ಪೊಲೀಸರ ಸೇವೆ ಅವಿಸ್ಮರಣೀಯವಾಗಿದೆ ಎಂದು ನೆನಪಿಸಿದರು. ಯೋಧರ ಬಲಿದಾನ ದುಃಖಕರವೆಂದು ಅವರು ಸಮರದ ಗೆಲುವು ಹರ್ಷ ತರಲಿದೆ ಎಂಬದಾಗಿ ಬಣ್ಣಿಸಿದರು.

ಕಾರ್ಗಿಲ್ ಸಮರದ ಯಶೋಗಾಥೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ದಿಸೆಯಲ್ಲಿ ಬಜರಂಗದಳ ಹಾಗೂ ಹಿಂದೂ ಸಂಘಟನೆಗಳಿಂದ ಈ ದಿನವನ್ನು ಪ್ರತಿವರ್ಷ ಆಚರಿಸಿಕೊಂಡು ಬರುತ್ತಿರುವುದು ಹೆಮ್ಮೆಯೆಂದು ಅವರು ಮಾರ್ನುಡಿದರು.

ಕುಟಿಲ ನೀತಿ: ಭಾರತದ ವಿರುದ್ಧ ಪಾಕಿಸ್ಥಾನ ಸದಾ ಕುಟಿಲ ಮಾರ್ಗದೊಂದಿಗೆ ಅನುಸರಿಸುತ್ತಿರುವ ರಣಹೇಡಿ ನೀತಿಗೆ 1999ರ ಕಾರ್ಗಿಲ್ ಸಮರದಲ್ಲಿ ಭಾರತೀಯ ಯೋಧರು ತಕ್ಕಪಾಠ ಕಲಿಸಿದ್ದಾಗಿ ನಿವೃತ್ತ ಮೇಜರ್ ಓ.ಎಸ್. ಚಿಂಗಪ್ಪ ಉಲ್ಲೇಖಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ದಿನವನ್ನು ಹಿಂದೂ ಸಂಘಟನೆಗಳು ಮರೆಯದೆ ಆಚರಿಸಿಕೊಂಡು ಬರುತ್ತಿರುವುದು ನಮ್ಮ ಯೋಧ ಪರಂಪರೆಗೆ ಹೆಮ್ಮೆ ಎಂದು ಬಣ್ಣಿಸಿದರಲ್ಲದೆ, ಎಲ್ಲ ಕಾಲಕ್ಕೂ ಗಡಿ ಕಾಯುವ ಸೈನಿಕರೊಂದಿಗೆ ದೇಶದ ಜನತೆ ಇರಲಿದೆ ಎಂದು ಆಶಯ ನುಡಿಯಾಡಿದರು.

ಕಾರ್ಗಿಲ್ ಯುದ್ಧದ ಸಮಯದಲ್ಲಿ ಮಡಿದ ಅಷ್ಟೂ ಹುತಾತ್ಮಯೋಧರಿಗೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ, ಪುಷ್ಪಾರ್ಚನೆ ನಡೆಯಿತು.

ಈ ಬಾರಿಯ ಕೋವಿಡ್ 19ರ ಸಂದಿಗ್ಧ ಪರಿಸ್ಥಿತಿಯ ಅನುಗುಣವಾಗಿ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ತೀರಾ ಸರಳವಾಗಿ ಆಚರಿಸಲಾಯಿತು.

ವಿಶ್ವಹಿಂದೂ ಪರಿಷದ್ ಜಿಲ್ಲಾ ಮಠ ಮಂದಿರ ಪ್ರಮುಖ್ ಚಿ.ನಾ. ಸೋಮೇಶ್ ಮಾತನಾಡಿ, ಭರತಭೂಮಿಯ ನೆಲದಲ್ಲಿ ಗತಿಸಿಹೋದ ಅಷ್ಟ್ಟೂ ಆಕ್ರಮಣಗಳು, ಸ್ವಾತಂತ್ರದ ಬೆನ್ನಲ್ಲೇ ನಡೆದ 1948ರ ಪಾಕಿಸ್ಥಾನದ ಆಕ್ರಮಣ, 1962ರ ಚೀನಾ ಆಕ್ರಮಣ, 1965ರಲ್ಲಿ ಮತ್ತೆ ಪಾಕಿಸ್ಥಾನದ ಕುತಂತ್ರ, 1971ರ ಬಾಂಗ್ಲಾ ವಿಮೋಚನಾ ಕಾಲದಲ್ಲಿ, 93 ಸಾವಿರ ಶತ್ರು ಸೈನಿಕರನ್ನು ಸೆರೆಹಿಡಿದ ಇತಿಹಾಸ ಹಾಗೂ 1999ರ ಕಾರ್ಗಿಲ್ ವಿಜಯದ ಯಶೋಗಾಥೆ ಮತ್ತು ಮೊನ್ನೆ ಮೊನ್ನೆ ಚೀನಾ ಸೈನಿಕರು ಲಡಾಕ್‍ನಲ್ಲಿ ನಡೆಸಿದ ಕುತಂತ್ರ ಬಗ್ಗೆ ಯುವಪೀಳಿಗೆ ನೆನಪಲ್ಲಿ ಇಟ್ಟುಕೊಳ್ಳಬೇಕೆಂದು ಉಲ್ಲೇಖಿಸಿದರು. ಸಾಮೂಹಿಕ ಪುಷ್ಪಾರ್ಚನೆ ಬಳಿಕ ರಾಷ್ಟ್ರಗೀತೆಯೊಂದಿಗೆ ಬಲಿದಾನಿ ಯೋಧರ ಸಂಸ್ಮರಣೆ ಪೂರ್ಣಗೊಂಡಿತು.

ಅರ್ಥಪೂರ್ಣ ಕಾರ್ಯಕ್ರಮದಲ್ಲಿ ವಿಶ್ವಹಿಂದೂ ಪರಿಷದ್; ಬಜರಂಗದಳ ಪ್ರಮುಖರಾದ ಕೆ.ಎಚ್. ಚೇತನ್, ವಿನಯ್, ಸುರೇಶ್ ಮುತ್ತಪ್ಪ, ಕಮಲ್, ಚರಣ್, ದುರ್ಗೇಶ್, ಪುದಿಯೊಕ್ಕಡ ರಮೇಶ್, ಸತ್ಯ ಕರ್ಕೇರ, ಮನುಮಂಜುನಾಥ್, ಉಮೇಶ್ ಸುಬ್ರಮಣಿ, ನವೀನ್ ಪೂಜಾರಿ, ಅರುಣ್ ಶೆಟ್ಟಿ, ಕೋಟೇರ ಸಚಿನ್, ಇತರರು ಪಾಲ್ಗೊಂಡಿದ್ದರು.

ಫೋರಂನಿಂದ ನಮನ: ಮಡಿಕೇರಿಯ ಜನರಲ್ ಕೆ.ಎಸ್. ತಿಮ್ಮಯ್ಯ ಸ್ಮಾರಕ ಭವನ ಬಳಿ ನೂತನ ಯುದ್ಧ ಸ್ಮಾರಕದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್. ತಿಮ್ಮಯ್ಯ ಫೋರಂ ವತಿಯಿಂದ ಕಾರ್ಗಿಲ್ ಸಮರದ ವೀರ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು. ನಿವೃತ್ತ ಸೈನ್ಯಾಧಿಕಾರಿಗಳಾದ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ, ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯ, ಮೇ. ಬಿ.ಎ. ನಂಜಪ್ಪ, ಕರ್ನಲ್ ನಾಚಪ್ಪ, ತಮ್ಮು ಪೂವಯ್ಯ ಮೊದಲಾದವರು ಪಾಲ್ಗೊಂಡು ಯೋಧರ ಸಂಸ್ಮರಣೆ ಗೈದರು.

ಗೋಣಿಕೊಪ್ಪ ವರದಿ: ಕಾರ್ಗಿಲ್ ವಿಜಯೋತ್ಸವ ಪ್ರಯುಕ್ತ ಇಲ್ಲಿನ ಕಾವೇರಿ ಕಾಲೇಜು ಆವರಣದಲ್ಲಿರುವ ಫೀ.ಮಾ.ಕೆ.ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಪ್ರತಿಮೆಗೆ ಹೂ ಸಮರ್ಪಿಸುವ ಮೂಲಕ ಗೌರವ ನೀಡಲಾಯಿತು.

ಕಾಲೇಜು ಪ್ರಾಂಶುಪಾಲ ಕುಸುಮಾಧರ್ ಹಾಗೂ ಸಿಬ್ಬಂದಿ ಪುಷ್ಪಾರ್ಚನೆ ನಡೆಸಿದರು. ಸಾರ್ವಜನಿಕರು ಕೂಡ ಆಗಮಿಸಿ ಹೂ ಇಟ್ಟು ದೇಶಕ್ಕಾಗಿ ಮಡಿದ ಯೋಧರಿಗೆ ನಮನ ಸಲ್ಲಿಸಿದರು. ಹಿರಿಯ ವೈದ್ಯ ಡಾ. ಕಾಳಿಮಾಡ ಶಿವಪ್ಪ ಪಾಲ್ಗೊಂಡಿದ್ದರು. ಸ್ಥಳೀಯ ಮಕ್ಕಳು ಭಾಗವಹಿಸಿದ್ದರು. ಲಾಕ್‍ಡೌನ್ ಕಾರಣ ದೇಶಾಭಿಮಾನಿಗಳಿಗೆ ಬರಲು ಆಗಲಿಲ್ಲ. ಇದು ನಿರಾಶೆಯಾಯಿತು.

ಸಿದ್ದಾಪುರ: ನೆಲ್ಯಹುದಿಕೇರಿಯ ಶ್ರೀ ಮುತ್ತಪ್ಪ ಯುವಕಲಾ ಸಂಘದ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.

ದಿನದ ಮಹತ್ವ ಕುರಿತು ಸಂಘದ ಅಧ್ಯಕ್ಷ ಅಭಿಲಾಷ್ ಮತ್ತು ಪದ್ಮನಾಭ ಮಾತನಾಡಿದರು.ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಮಡಿದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.ಅಲ್ಲದೆ ಸಾಮೂಹಿಕವಾಗಿ ರಾಷ್ಟ್ರಗೀತೆ ಹಾಡಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಅಲ್ಲದೆ ಕಾರ್ಗಿಲ್ ವಿಜಯೋತ್ಸವದ ಪ್ರಯುಕ್ತ ಶ್ರೀ ಮುತ್ತಪ್ಪ ಯುವಕಲಾ ಸಂಘದ ವತಿಯಿಂದ ಬಸ್ ತಂಗುದಾಣದ ಸುತ್ತ ಸ್ವಚ್ಛಗೊಳಿಸಲಾಯಿತು.

ಸಂಘದ ಕಾರ್ಯದರ್ಶಿ ಸಚಿನ್, ಉಪಾಧ್ಯಕ್ಷ ಪ್ರಮೋದ್ ಪದಾಧಿಕಾರಿಗಳಾದ ಶಶಿ, ಸುಂದರ್, ಮದುಸೂದನ್, ಮಂಜು ಇನ್ನಿತರರು ಹಾಜರಿದ್ದರು.