ಸೋಮವಾರಪೇಟೆ, ಜು, 26: ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಲ್ಲಿ ನಾಗರ ಪಂಚಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ವಿವಿಧ ದೇವಾಲಯ ಮತ್ತು ನಾಗಬನಗಳಲ್ಲಿ ಪಂಚಮಿ ಅಂಗವಾಗಿ ವಿಶೇಷ ಪೂಜೆಗಳು ನೆರವೇರಿದವು.

ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ, ಸೋಮೇಶ್ವರ ದೇವಾಲಯ, ಆನೆಕೆರೆ ನಾಗಬನ, ಮಸಗೋಡು ಬಸವೇಶ್ವರ ದೇವಾಲಯ, ಚಂದನಮಕ್ಕಿಯ ನಾಗಬನ, ಅರಸಿನಕುಪ್ಪೆ ಸಿದ್ಧಲಿಂಗಪುರದ ಶ್ರೀ ಮಂಜುನಾಥ ಮತ್ತು ನವನಾಗ ಸನ್ನಿಧಿಯಲ್ಲಿ ಪಂಚಮಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

ಮೂರ್ನಾಡು: ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಶ್ರದ್ಧಾ ಭಕ್ತಿಯಿಂದ ನಾಗರ ಪಂಚಮಿ ಹಬ್ಬವನ್ನು ಮಹಾಬಲೇಶ್ವರ್ ಭಟ್ ಅವರ ನೇತೃತ್ವದಲ್ಲಿ ನಡೆಸಲಾಯಿತು. ನಾಡಿನ ಸಮಸ್ತ ಜನತೆಗೆ ಒಳಿತಾಗಲೆಂದು ಪ್ರಾರ್ಥಿಸಲಾಯಿತು ಅಲ್ಲದೇ ಸಾಂಕ್ರಾಮಿಕ ರೋಗ ಕೊರೊನಾ ಆದಷ್ಟು ಬೇಗ ದೂರವಾಗಲಿ ಎಂದು ಪ್ರಾರ್ಥಿಸಲಾಯಿತು. ಪೂಜಾ ಕಾರ್ಯದಲ್ಲಿ ಅರ್ಚಕರಾದ ಮುರುಳಿಭಟ್, ತಕ್ಕಮುಖ್ಯಸ್ಥರಾದ ಗ್ರೇಸಿ ವಿಜಯಾ, ಕಾರ್ಯದರ್ಶಿ ಬಿ.ಬಿ. ಜಯಂತಿ, ಉಪಾಧ್ಯಕ್ಷೆ ಯಶೋಧ, ಕ.ಸಾ.ಪ .ಮೂರ್ನಾಡು ಹೋಬಳಿ ಅಧÀ್ಯಕ್ಷ ಸುಕುಮಾರ ಪಿ.ಪಿ. ಹಾಜರಿದ್ದರು.

ಶ್ರೀಮಂಗಲ: ಶ್ರೀಮಂಗಲ ಸನಿಹದ ಕುಮಟೂರಿನ ಜೆ.ಸಿ. ಶಾಲಾ ಆವರಣ ದಲ್ಲಿರುವ ನಾಗದೇವತೆಗೆ ನಾಗರ ಪಂಚಮಿಯಂದು ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು.