ಮಡಿಕೇರಿ, ಜು. 26: ಬಹುತೇಕ ಅರಣ್ಯ ಪ್ರದೇಶಗಳ ನಡುವೆ ಆವೃತ್ತವಾಗಿರುವ ಕೊಡಗು ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಕಾಡಾನೆಗಳು, ಕಾಡೆಮ್ಮೆ, ಹುಲಿಯಂತಹ ವನ್ಯ ಪ್ರಾಣಿಗಳ ಉಪಟಳ ಕಂಡು ಬರುತ್ತಿರುವುದು ಸರ್ವೇ ಸಾಮಾನ್ಯ ಎಂಬಂತಿದೆ. ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಪ್ರದೇಶಕ್ಕೆ ಹಾನಿಯುಂಟಾಗುತ್ತಿರುವ ಹಲವು ಪರಿಸ್ಥಿತಿಗಳಿಂದಾಗಿ ಮಾನವ ಹಾಗೂ ವನ್ಯ ಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿರುವುದು, ಇದರ ವಿರುದ್ಧವಾಗಿ ಜನತೆಯ ಪ್ರತಿಭಟನೆಗಳು, ಸಾವು-ನೋವು, ಆಸ್ತಿ-ಪಾಸ್ತಿ ನಾಶದೊಂದಿಗೆ ಜೀವಹಾನಿಯೂ ಆಗುತ್ತಿದೆ. ವನ್ಯ ಪ್ರಾಣಿಗಳ ಹಾವಳಿ ತಡೆಗೆ ಸರಕಾರದಿಂದ ಶಾಶ್ವತ ಯೋಜನೆ ರೂಪುಗೊಳ್ಳದಿರುವುದು, ಇದರಿಂದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳ ಅಸಹಾಯಕತೆಯೂ ಜಿಲ್ಲೆಯ ಪ್ರಸ್ತುತದ ಪರಿಸ್ಥಿತಿ ಎಂಬಂತಾಗಿದೆ.ಇವೆಲ್ಲದರ ನಡುವೆ ಇದೀಗ ಹೊಸದೊಂದು ಕಾರಣದ ಸಮಸ್ಯೆಯಿಂದಾಗಿ ವನ್ಯ ಜೀವಿಗಳು ನಾಡಿನತ್ತ ಹೆಜ್ಜೆ ಹಾಕುತ್ತಿರುವುದು ಮತ್ತೊಂದು ಬೆಳವಣಿಗೆಯಾಗುತ್ತಿದೆ. ಆದರೆ ಈ ವಿಚಾರದ ಬಗ್ಗೆ ಯಾರೂ ಗಂಭೀರವಾದ ಚಿಂತನೆಯನ್ನು ಮಾಡುತ್ತಿಲ್ಲವೆನ್ನಬಹುದು. ಪ್ರಸ್ತುತ ಇಡೀ ವಿಶ್ವವನ್ನು ತಲ್ಲಣಗೊಳಿಸುತ್ತಿರುವ ಕೊರೊನಾ ಮಹಾಮಾರಿಯಿಂದಾಗಿ ಉಂಟಾಗಿರುವ ಪರಿಸ್ಥಿತಿಯಿಂದ ಕೊಡಗಿನಲ್ಲಿ ವನ್ಯ ಪ್ರಾಣಿಗಳ ದರ್ಶನ ನಾಡಿನಲ್ಲಿ ಹೆಚ್ಚಾಗುತ್ತಿರುವುದು ಈ ಬೆಳವಣಿಗೆಯಾಗಿದೆ.

ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಸರಕಾರ, ಜಿಲ್ಲಾಡಳಿತ ಕಳೆದ ಮಾರ್ಚ್ ತಿಂಗಳಿನಿಂದಲೇ ಹರಸಾಹಸ ಪಡುತ್ತಿದೆ. ನಿಷೇಧಾಜ್ಞೆ, ಕಫ್ರ್ಯೂ, ಲಾಕ್‍ಡೌನ್‍ನಂತಹ ನಿರ್ಬಂಧಗಳನ್ನು ಅನಿವಾರ್ಯವಾಗಿ ಹೇರಬೇಕಾಗಿದೆ. ಈ ಕಾರಣದಿಂದಾಗಿ ಅಂತರ ಜಿಲ್ಲೆ, ಅಂತರ ರಾಜ್ಯಗಳ ನಡುವಿನ ಜನರ ಹಾಗೂ ವಾಹನಗಳ ಓಡಾಟ ತೀರಾ ಕಡಿಮೆಯಾಗಿದೆ. ಅದರಲ್ಲೂ ರಾತ್ರಿ ವೇಳೆ ಇದು ಮತ್ತಷ್ಟು ಕಡಿಮೆಯಾಗುತ್ತಿದೆ.

ಜನತೆಯ ಹಾಗೂ ವಾಹನಗಳ ಓಡಾಟ ಸೇರಿದಂತೆ ಇನ್ನಿತರ ಚಟುವಟಿಕೆಗಳು ಕಡಿಮೆಯಾಗಿರುವ ಹಿನ್ನೆಲೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಪ್ರಾಣಿಗಳಿಗೆ ಮುಖ್ಯವಾಗಿ ಬೇಕಿರುವುದು ಆಹಾರ, ನೀರು ಹಾಗೂ ಆವಾಸಸ್ಥಾನವಾಗಿದ್ದು, ಇದೀಗ ಸ್ವಚ್ಛಂದ ಓಡಾಟ ಹೆಚ್ಚಾಗುತ್ತಿದೆ ಎನ್ನುತ್ತಾರೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು...ಅರಣ್ಯ ಪ್ರದೇಶಗಳಿಂದ ಕಾಡು ಪ್ರಾಣಿಗಳು ಇದೀಗ ಈ ಹಿಂದಿಗಿಂತ ಹೆಚ್ಚಾಗಿ ನಾಡಿನತ್ತಲೂ ಹೆಜ್ಜೆಯಿರಿಸುತ್ತಿದೆ ಎಂದು ಅರಣ್ಯ ಇಲಾಖೆಯ ಕೆಲವು ಅನುಭವಿ ಹಾಗೂ ಜಿಲ್ಲೆಯ ವಾಸ್ತವತೆ ಅರಿತಿರುವ ಅಧಿಕಾರಿಗಳು ಅಭಿಪ್ರಾಯ ಪಡುತ್ತಿದ್ದಾರೆ.

ಕೊಡಗು ಜಿಲ್ಲೆಯ ಶೇ. 90 ರಷ್ಟು ಭಾಗ ಸುತ್ತಲೂ ಅರಣ್ಯ ಪ್ರದೇಶಗಳಿಂದಲೇ ಆವೃತ್ತವಾಗಿದೆ. ಪುಷ್ಪಗಿರಿ, ಬ್ರಹ್ಮಗಿರಿ, ತಲಕಾವೇರಿ, ಮಾಕುಟ್ಟ ವನ್ಯಜೀವಿ ತಾಣ ಸೇರಿದಂತೆ ಅಭಯಾರಣ್ಯಗಳಾದ ಪಡಿನಾಲ್ಕುನಾಡು, ಕಿರಿಟಿ, ಉರ್‍ಟಿ, ಪಟ್ಟಿಘಾಟ್, ಕಡಮಕಲ್, ನಾಗರಹೊಳೆ, ಆನೆಕಾಡು, ಮೀನುಕೊಲ್ಲಿ, ತಿತಿಮತಿ ಈ ರೀತಿಯಾಗಿ ಸಾಕಷ್ಟು ಅರಣ್ಯ ಪ್ರದೇಶಗಳ ನಡುವೆ ಕೊಡಗಿನ ಜನ ಜೀವನವಿದೆ.

ಇದರ ಮಧ್ಯೆ ತೋಟ, ಗದ್ದೆಗಳು, ನಗರ-ಪಟ್ಟಣ, ಗ್ರಾಮಗಳು ಒಳಗೊಂಡಿರುವಂತೆ ಕೊಡಗಿನ ಭೌಗೋಳಿಕ ಪರಿಸ್ಥಿತಿ ಇದೆ. ಇದೀಗ ಸಾಕಷ್ಟು ಕಡೆಗಳಲ್ಲಿ ಅದರಲ್ಲೂ ಈ ತನಕ ಪ್ರಾಣಿಗಳು ಕಂಡುಬಾರದಿದ್ದ ಪ್ರದೇಶಗಳಲ್ಲೂ ವಿವಿಧ ಜೀವಿಗಳ ದರ್ಶನವಾಗುತ್ತಿದೆ.

ಆನೆಗಳು, ಕಾಡೆಮ್ಮೆ, ಕಾಡುಕೋಣ, ಹುಲಿ, ಚಿರತೆ, ಚಿರತೆಬೆಕ್ಕು (ಪೆರ್ಪಣ), ಕಡವೆ, ಜಿಂಕೆ, ನವಿಲು, ಮಂಗಗಳು, ಕರಡಿ, ಕಾಡು ಹಂದಿಗಳು ಸೇರಿದಂತೆ ಹಲವಾರು ವನ್ಯ ಜೀವಿಗಳು ಅಲ್ಲಲ್ಲಿ ಗೋಚರವಾಗುತ್ತಿರುವದರೊಂದಿಗೆ ರೈತರ ಕೃಷಿ ಫಸಲುಗಳು ನಾಶಗೊಳ್ಳುತ್ತಿವೆ ಎಂಬ ಅಭಿಪ್ರಾಯ ವ್ಯಕ್ತಗೊಂಡಿದೆ. ಅದರಲ್ಲೂ ಮತ್ತೊಂದು ಗಮನಾರ್ಹ ವಿಚಾರವೆಂದರೆ ಅಲ್ಲಲ್ಲಿ ಹಾವುಗಳು ನಿತ್ಯ ಪ್ರತ್ಯಕ್ಷವಾಗು ತ್ತಿರುವುದು. ಬಹುತೇಕ ಎಲ್ಲಾ ಪ್ರಾಣಿಗಳ ಓಡಾಟ ರಾತ್ರಿವೇಳೆ ಹೆಚ್ಚಾಗುತ್ತಿ ರುತ್ತವೆ. ನಿಶ್ಯಬ್ಧದ ಸನ್ನಿವೇಶದಿಂದಾಗಿ ಯಾವುದೇ ಅಡ್ಡಿ-ಆತಂಕಗಳಿಲ್ಲದೆ ಪ್ರಾಣಿಗಳು ಇದೀಗ ನಾಡಿನೊಳಗೂ ಸ್ವಚ್ಛಂದವಾಗಿ ಅಡ್ಡಾಡಲಾರಂಭಿಸಿವೆ ಎನ್ನಲಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ವೀರಾಜಪೇಟೆಯಿಂದ ಕೇರಳ ಸಂಪರ್ಕಿಸುವ ಮಾಕುಟ್ಟ ಹೆದ್ದಾರಿ ರಸ್ತೆಯಲ್ಲಿ ತುಂಬಿರುವ ಆನೆಗಳ ಲದ್ದಿಯ ರಾಶಿಯನ್ನು ಗಮನಿಸಬಹುದಾಗಿದೆ. ಈ ರಸ್ತೆಯಲ್ಲಿ ಹಲವಾರು ಇತರ ಪ್ರಾಣಿಗಳೂ ಗೋಚರವಾಗುತ್ತಿವೆ. ಇದೇ ರೀತಿ ಜಿಲ್ಲೆಯ ಇನ್ನಿತರ ಭಾಗಗಳಲ್ಲೂ ವನ್ಯಜೀವಿಗಳು ಪ್ರತ್ಯಕ್ಷವಾಗುತ್ತಿವೆ. ಮತ್ತೊಂದು ಉದಾಹರಣೆ ಎಂಬಂತೆ ಈತನಕ ಹುಲಿ, ಚಿರತೆಯಂತಹ ಪ್ರಾಣಿಗಳು ಕಂಡುಬಾರದಂತಿದ್ದ ಆರ್ಜಿ, ಬಾಳುಗೋಡು, ಬಿಟ್ಟಂಗಾಲದಂತಹ ಕಡೆಯಲ್ಲಿಯೂ ಕೆಲ ದಿನಗಳಿಂದ ಈ ರೀತಿಯ ಪ್ರಾಣಿಯೊಂದರ ಹೆಜ್ಜೆ ಗುರುತು ಕಂಡು ಬಂದಿದ್ದು, ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಹಿಂದೆಯೂ ಪ್ರಾಣಿಗಳ ಹಾವಳಿ ಇತ್ತಾದರೂ ಇದೀಗ ಕೊರೊನಾ ಪರಿಸ್ಥಿತಿಯ ಬಳಿಕ ಮಾರ್ಚ್‍ನಿಂದ ಇದು ಇನ್ನಷ್ಟು ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ.

- ಶಶಿ ಸೋಮಯ್ಯ.