ಕುಶಾಲನಗರ, ಜು. 26: ಕೊಡಗು-ಮೈಸೂರು ಗಡಿಭಾಗ ಕುಶಾಲನಗರ ಕೊಪ್ಪ ವ್ಯಾಪ್ತಿಯಲ್ಲಿ ವಲಸಿಗರ ಕಾಟ ಅಧಿಕವಾಗುವುದರೊಂದಿಗೆ ಸ್ಥಳೀಯ ನಿವಾಸಿಗಳಿಗೆ ಕಿರಿಕಿರಿ ಉಂಟುಮಾಡುತ್ತಿರುವ ದೃಶ್ಯಗಳು ಕಂಡುಬಂದಿವೆ.

ಭಿಕ್ಷಾಟನೆ ಮಾಡುವ ನೆಪದಲ್ಲಿ ಹೊರಭಾಗದಿಂದ ಗಂಟುಮೂಟೆ ಯೊಂದಿಗೆ ಗುಂಪುಗುಂಪಾಗಿ ಬರುವ ಮಕ್ಕಳು, ಯುವಕರು, ಮಹಿಳೆಯರು, ವೃದ್ದರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಲ್ಲಿ ನೆಲೆ ಕಾಣುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಈ ತಂಡದ ಸದಸ್ಯರು ಹಗಲು ಭಿಕ್ಷಾಟನೆ ಮಾಡಿ ಸಂಜೆಯಾಗುತ್ತಲೇ ಮದ್ಯ ಸೇವಿಸಿ ತಮ್ಮೊಳಗೆ ಕಿತ್ತಾಡುವುದರೊಂದಿಗೆ ಅಶಾಂತಿ ಉಂಟುಮಾಡುತ್ತಿರುವುದು ಕಂಡುಬರುತ್ತಿದೆ.

ಎಲ್ಲೆಂದರಲ್ಲಿ ನೆಲೆ ಕಾಣುವ ಈ ಮಂದಿ ಸಾರ್ವಜನಿಕ ಸ್ಥಳದಲ್ಲೇ ಅಡುಗೆ ಮಾಡಿ ಅಲ್ಲೇ ಠಿಕಾಣಿ ಹೂಡಿ ಇಡೀ ವಾತಾವರಣವನ್ನು ಕೆಡಿಸುವುದರೊಂದಿಗೆ ಅಶುಚಿತ್ವಕ್ಕೆ ಕಾರಣರಾಗುತ್ತಿದ್ದಾರೆ. ಕುಶಾಲನಗರ-ಕೊಪ್ಪ ಗಡಿಭಾಗದ ಸೇತುವೆ ಬಳಿ ಕಳೆದ ಕೆಲವು ದಿನಗಳಿಂದ ಹಲವು ಮಂದಿ ನೆಲೆಯೂರಿದ್ದು ದಾರಿಹೋಕರಿಗೆ, ಸ್ಥಳೀಯರಿಗೆ ಕಿರಿಕಿರಿ ಉಂಟುಮಾಡುತ್ತಿದ್ದು ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಕೊಪ್ಪ ಗ್ರಾಮದ ಹೆದ್ದಾರಿ ಬದಿಯಲ್ಲಿ ಹಲವು ತಂಡಗಳನ್ನು ಪತ್ತೆಹಚ್ಚಿ ಸ್ಥಳೀಯರ ದೂರಿನ ಮೇರೆಗೆ ಬೈಲುಕೊಪ್ಪೆ ಪೊಲೀಸರು ತೆರವು ಮಾಡುವಲ್ಲಿ ಯಶಸ್ವಿಯಾದರೂ ಅಲ್ಲಿಂದ ಕಾಲ್ಕಿತ್ತು ಕುಶಾಲನಗರ ಕಡೆಗೆ ತೆರಳಿ ಮತ್ತೆ ವಲಸಿಗರ ಕಾಟ ಮರುಕಳಿಸುತ್ತಿದ್ದು ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ. ಇನ್ನೊಂದೆಡೆ ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿ ಕಳೆದ ಕೆಲವು ದಿನಗಳಿಂದ 10ಕ್ಕೂ ಅಧಿಕ ಶೆಡ್‍ಗಳು ತಲೆಎತ್ತಿದ್ದು ಈ ಬಗ್ಗೆ ಸ್ಥಳೀಯ ಆಡಳಿತ ಮೌನವಹಿಸಿರುವುದು ಕಂಡು ಬಂದಿದೆ. ಕೊರೊನಾ ಸೋಂಕು ತಪ್ಪಿಸುವ ನಿಟ್ಟಿನಲ್ಲಿ ಎಷ್ಟೇ ಪ್ರಯತ್ನಿಸಿದರೂ ಇಂತಹ ವಲಸಿ ಗರು ಭಿಕ್ಷಾಟನೆಗೆ ತೊಡಗುವುದು ಮತ್ತು ಅಲ್ಲಲ್ಲಿ ಕಂಡಕಂಡಲ್ಲಿ ನೆಲೆಯೂರುವುದು ಅಪಾಯಕ್ಕೆ ಆಹ್ವಾನ ಮಾಡಿದಂತಾಗುತ್ತದೆ ಎನ್ನುವುದು ಸ್ಥಳೀಯರ ಆತಂಕವಾಗಿದೆ. - ಸಿಂಚು